Home ಕರ್ನಾಟಕ ಮಳೆ, ಪ್ರವಾಹ ಹಾನಿ: ಭಾನುವಾರದಿಂದ ಕೇಂದ್ರ ತಂಡದಿಂದ ಅಧ್ಯಯನ

ಮಳೆ, ಪ್ರವಾಹ ಹಾನಿ: ಭಾನುವಾರದಿಂದ ಕೇಂದ್ರ ತಂಡದಿಂದ ಅಧ್ಯಯನ

19
0

ಬೆಂಗಳೂರು:

ರಾಜ್ಯದಲ್ಲಿ ಸುರಿದ ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದ ಉಂಟಾದ ಹಾನಿ ಕುರಿತು ಕೇಂದ್ರ ತಂಡ ಭಾನುವಾರದಿಂದ ಮೂರು ದಿನಗಳ ಕಾಲ ವಿವಿಧ ಭಾಗಗಳಲ್ಲಿ ಅಧ್ಯಯನ ನಡೆಲಿದೆ.

ನಿವಾರ್ ಚಂಡಮಾರುತದಿಂದ ಉಂಟಾಗಿರುವ ಹಾನಿ ಕುರಿತು ಕೇಂದ್ರದ ತಂಡ ಅಧ್ಯಯನ ಪೂರ್ಣಗೊಳಿಸಿದ ನಂತರ ರಾಜ್ಯದಲ್ಲಿ ಆಗಿರುವ ಹಾನಿ ಕುರಿತು ಕೇಂದ್ರ ಸರ್ಕಾರ ರಾಜ್ಯಕ್ಕೆ ತಂಡ ಕಳುಹಿಸುತ್ತಿದೆ.

ಕಳೆದ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ರಾಜ್ಯದ ಹಲವೆಡೆ ಮಳೆ ಮತ್ತು ಪ್ರವಾಹದಿಂದಾಗಿರುವ ಹಾನಿಯ ಬಗ್ಗೆ ಅಂದಾಜು ಮಾಡಲು ಕೇಂದ್ರ ಗೃಹ ವ್ಯವಹಾರಗಳ ಇಲಾಖೆಯ ಹಿರಿಯ ಅಧಿಕಾರಿ ಜಿ.ರಮೇಶ್ ಕುಮಾರ್ ನೇತೃತ್ವದ ಸದಸ್ಯರ ತಂಡ ಆಗಮಿಸಲಿದೆ.

ಭಾನುವಾರ ಸಂಜೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಲಿರುವ ತಂಡ ಸೋಮವಾರ ಗುಲ್ಬರ್ಗಾ, ವಿಜಯಪುರ, ಉಡುಪಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಖುದ್ದು ಮಾಹಿತಿ ಕ್ರೋಢೀಕರಿಸಲಿದೆ.

ಮಳೆ ಮತ್ತು ಪ್ರವಾಹದಿಂದ ರಾಜ್ಯದಲ್ಲಿ ಆಗಿರುವ ಬೆಲೆ, ಆಸ್ತಿಪಾಸ್ತಿ ಹಾನಿ, ರಸ್ತೆ ಸೇತುವೆಗಳ ದುರಸ್ತಿಗೆ ಬೇಕಾಗಿರುವ ಆರ್ಥಿಕ ಸಂಪನ್ಮೂಲ ಕುರಿತು ಮಾಹಿತಿ ಸಂಗ್ರಹಿಸಲಿದೆ.

ಮಂಗಳವಾರದಂದು ಕಂದಾಯ ಸಚಿವ ಆರ್.ಅಶೋಕ್ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಅವರೊಂದಿಗೆ ನೆರೆಹಾನಿ ಕುರಿತು ಸಮಾಲೋಚನೆ ನಡೆಸಲಿದ್ದು, ಬಳಿಕ ಕೇಂದ್ರಕ್ಕೆ ಸಮಗ್ರ ವರದಿ ಸಲ್ಲಿಸಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here