ಬೆಂಗಳೂರು:
ಸಾರ್ವಜನಿಕರ ಸೇವಾ ತೃಪ್ತಿಯ ಸಮೀಕ್ಷೆ ಹಾಗೂ ಅಗತ್ಯ ಸೇವೆಗಳ ವಿಲೇವಾರಿ ಸಕಾಲ ಮಿತ್ರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ್ ಅವರು ತಿಳಿಸಿದರು.
ಇಂದು ಆಚಾರ್ಯ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು ಇಲ್ಲಿ ಉಪ್ಕøತಿ ಸರ್ಕಾರೇತರ ಸಂಸ್ಥೆ, ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು ಸಂಸ್ಥೆಗಳ ಸಹಯೋಗದೊಂದಿಗೆ ಸಕಾಲ ಮಿಷನ್ ವತಿಯಿಂದ ಆಯೋಜಿಸಲಾದ “ಸಕಾಲ ಮಿತ್ರ” ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಸಚಿವರು, ಸರ್ಕಾರಿ ಸೇವೆಗಳನ್ನು ಕಾಲ ಮಿತಿಯೊಳಗೆ ವಿಲೇವಾರಿ ಮಾಡಿ, ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ತರುವ ದೃಷ್ಟಿಯಿಂದ ಮೊದಲಿಗೆ 11 ಇಲಾಖೆಗಳ 151 ಸೇವೆಗಳೊಂದಿಗೆ ಸಕಾಲ ಯೋಜನೆಯನ್ನು ಪ್ರಾರಂಭಿಸಿಲಾಯಿತು. ತದನಂತರ ರಾಜ್ಯಾದ್ಯಂತ 2ನೇ ಏಪ್ರಿಲ್ 2012ರಲ್ಲಿ ಸದರಿ ಸೇವೆಗಳನ್ನು ಮತ್ತಷ್ಟು ವಿಸ್ತರಿಸಲಾಯಿತು. ಪ್ರಸ್ತುತ ಸಕಾಲ ಸೇವೆಯಡಿ 99 ಇಲಾಖೆ ಮತ್ತು ಸಂಸ್ಥೆಗಳು ಸೇರಿದಂತೆ 1115 ಸೇವೆಗಳನ್ನು ಸಕಾಲ ಸೇವೆಗಳಡಿ ಸೇರ್ಪಡೆಗೊಳಿಸಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಸಕಾಲ ಯೋಜನೆಯ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಲು ಹಾಗೂ ಯೋಜನೆಯಿಂದ ಸಿಗಬಹುದಾದ ಪ್ರಯೋಜನಗಳ ಕುರಿತು ಜಾಗೃತಿ ಮೂಡಿಸಲು ಸಕಾಲಮಿತ್ರ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಜನಜಾಗೃತಿ ಹಾಗೂ ಸಮೀಕ್ಷೆಯ ಪಾಲ್ಗೊಳ್ಳಲು ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಸುಮಾರು 2000 ವಿದ್ಯಾರ್ಥಿಗಳು ಸ್ವಯಂಸೇವಕರಾಗಿ, ಸ್ವಯಂ ಪ್ರೇರಿತರಾಗಿ ಮುಂದೆ ಬಂದಿದ್ದಾರೆ, ಸ್ವಯಂಸೇವಕರಾಗಿ ಪಾಲ್ಗೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಸಂಭಾವನೆ ನೀಡಲಾಗುತ್ತಿಲ್ಲ, ಬದಲಿಗೆ ಪ್ರಮಾಣಪತ್ರವನ್ನು ನೀಡಲಾಗುವುದು. ಸ್ವಯಂಸೇವಕರು ಮನೆಮನೆಗೆ ಭೇಟಿ ನೀಡಿ ಸಕಾಲ ಯೋಜನೆ ಬಗ್ಗೆ ನಾಗರೀಕರಿಗೆ ಮಾಹಿತಿ ನೀಡಲಿದ್ದಾರೆ ಎಂದು ಸಚಿವರು ತಿಳಿಸಿದರು.

ಸಕಾಲದ ಬಗ್ಗೆ ನಾಗರೀಕರಿಗೆ ಇರುವ ಅರಿವು / ಅಭಿಪ್ರಾಯಗಳ ಕುರಿತು ವಿವರಗಳನ್ನು ಪಡೆಯುವ ಸಲುವಾಗಿ Citizen Happiness Index’ ಎಂಬ ಕಾರ್ಯಕ್ರಮವನ್ನೂ ಸಹ ಪ್ರಾರಂಭಿಸಲಾಗಿದೆ. ಸರ್ಕಾರಿ ಸೇವೆಗಳ ಕುರಿತು ಸಾರ್ವಜನಿಕರ ಫೀಡ್ ಬ್ಯಾಕ್ ಪಡೆಯಲು ಭಾರತದಲ್ಲಿಯೇ ಪ್ರಪ್ರಥಮ ಬಾರಿಗೆ Citizen Happiness Index’ ಆರಂಭಿಸಿದ ಹೆಗ್ಗಳಿಕೆ ಕರ್ನಾಟಕ ರಾಜ್ಯದ್ದಾಗಿದೆ. ಇದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.
ಸಕಾಲದಡಿ ಅರ್ಜಿಯನ್ನು ಸಲ್ಲಿಸುವ / ಈಗಾಗಲೇ ಸೇವೆ ಪಡೆದಿರುವ ನಾಗರೀಕರಿಂದ ಸಕಾಲ ಕುರಿತು ಅವರ ಅಭಿಪ್ರಾಯವನ್ನು ಸಂಗ್ರಹಿಸಲಾಗುತ್ತಿದೆ. ಸಕಾಲ ಯೋಜನೆ ಕುರಿತು ಸಾರ್ವಜನಿಕರ ತೃಪ್ತಿಯ ಮಟ್ಟವನ್ನು ತಿಳಿಯುವ ಸಲುವಾಗಿ 22 ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿದೆ. ವಿದ್ಯಾರ್ಥಿಗಳು ಸಾರ್ವಜನಿಕರ ಪ್ರತಿಕ್ರಿಯೆಗಳನ್ನು ಆನ್-ಲೈನ್ ಮುಖೇನ ಸಂಗ್ರಹಿಸುವ ಸಂಪರ್ಕ ರಹಿತ ಪ್ರಕ್ರಿಯೆ ಇದಾಗಿದೆ. ಮನೆ ಮನೆಗೆ ಭೇಟಿ ನೀಡುವ ಸ್ವಯಂಸೇವಕರು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಅಂತೆಯೇ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳುವಂತೆಯೂ ಅವರಿಗೆ ತರಬೇತಿ ನೀಡಲಾಗಿದೆ. ಸಕಾಲದಿಂದ ನಾಗರೀಕರು ಮುಖ್ಯವಾಗಿ ಏನನ್ನು ಅಪೇಕ್ಷಿಸುತ್ತಾರೆ ಹಾಗೂ ಯೋಜನೆಯ ಅನುಷ್ಠಾನ ತೃಪ್ತಿಕರವಾಗಿದೆಯೇ ಹಾಗೂ ನೂನ್ಯತೆಗಳಿವೇ ಎಂಬುದನ್ನು ಅರಿಯಲು ಈ ಸಮೀಕ್ಷೆ ನೆರವಾಗಲಿದೆ.
ಮೊದಲಿಗೆ ಟಿ.ದಾಸರಹಳ್ಳಿ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಸಕಾಲ ಮಿತ್ರ ಕಾರ್ಯಕ್ರಮವನ್ನು 6 ತಿಂಗಳ ಕಾಲ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ನಾಗರಿಕರಿಗೆ ಲಭ್ಯವಾಗುವ ಸೇವೆಗಳ ಬಗ್ಗೆ ಸಕಾಲ ಮಿತ್ರರು ಸಾರ್ವಜನಿಕರಿಗೆ ಮಾಹಿತಿ ಒದಗಿಸಲಿದ್ದಾರೆ. ಪ್ರಾಯೋಗಿಕ ಕಾರ್ಯಕ್ರಮ ಯಶಸ್ವಿಯಾದಲ್ಲಿ ರಾಜ್ಯಾದ್ಯಂತ ಯೋಜನೆಯನ್ನು ವಿಸ್ತರಿಸಲಾಗುವುದು.
ಸಕಾಲ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಈ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಈ ಎಲ್ಲಾ ಕಾರ್ಯಕ್ರಮಗಳ ಮೂಲಕ ಸರ್ಕಾರದ ಸೇವೆಗಳನ್ನು ನಾಗರೀಕರಿಗೆ ಯಾವುದೇ ಅಡೆತಡೆ ಮತ್ತು ವಿಳಂಬವಿಲ್ಲದಂತೆ ಒದಗಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ ಆಡಳಿತ) – ಸಕಾಲ ಮಿಷನ್, ಅಪರ ಮಿಷನ್ ನಿರ್ದೇಶಕರಾದ ಡಾ. ಬಿ. ಆರ್ ಮಮತ, ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಮರಿಸ್ವಾಮಿ, ಉಪ್ಕೃತಿ ಸಂಸ್ಥೆಯ ಪದಾಧಿಕಾರಿಗಳು, ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಸ್ಥೆಯ ಪ್ರಾಚಾರ್ಯರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.