Home ಕರ್ನಾಟಕ ಹಾನಗಲ್ ನಲ್ಲಿ‌ನಡೆದ ಸಿಎಂ ಉದಾಸಿ ಅಂತ್ಯಕ್ರಿಯೆ

ಹಾನಗಲ್ ನಲ್ಲಿ‌ನಡೆದ ಸಿಎಂ ಉದಾಸಿ ಅಂತ್ಯಕ್ರಿಯೆ

118
0

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಂತಿಮ ನಮನ

ಹಾನಗಲ್ :

ಮಾಜಿ ಸಚಿವ ಸಿಎಂ ಉದಾಸಿ ಅವರ ಪಾರ್ಥಿವ ಶರೀರಕ್ಕೆ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಬುಧವಾರ ಅಂತಿಮ ದರ್ಶನ ಪಡೆದು ಗೌರವಪೂರ್ವಕ ನಮನ ಸಲ್ಲಿಸಿದರು.

ಹಾನಗಲ್ ನಲ್ಲಿ ಬುಧವಾರ ಸಂಜೆ ಉದಾಸಿ ಅವರ ಅಂತ್ಯಕ್ರಿಯೆ ಸಾಂಪ್ರದಾಯಿಕ ಹಾಗೂ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಈ ಸಂದರ್ಭದಲ್ಲಿ ಉದಾಸಿ ಅವರನ್ನು ಸ್ಮರಿಸಿ ಬಸವರಾಜ ಬೊಮ್ಮಾಯಿ ಭಾವುಕರಾಗಿದ್ದರು.

ಉದಾಸಿ ಅವರು ಒಬ್ಬ ಹಿರಿಯ ಮುತ್ಸದ್ದಿ ರಾಜಕಾರಣಿ. ರಾಜಕೀಯದಲ್ಲಿ ತಮ್ಮ ತಂದೆಯ ನಂತರ ಅವರು ನನಗೆ ಮಾರ್ಗದರ್ಶಕರಾಗಿದ್ದರು. ರಾಜಕೀಯವಾಗಿ ಅವರೇ ನನಗೆ ಗಾಡ್ ಫಾದರ್ ಆಗಿದ್ದರು. ಒಂದು ರೀತಿ ತಂದೆಯನ್ನು ಕಳೆದುಕೊಂಡ ಭಾವ ನನಗೆ ಬರುತ್ತಿದೆ. ಅವರು ಸಾಕಷ್ಟು ಆದರ್ಶಗಳನ್ನು ಬಿಟ್ಟು ಹೋಗಿದ್ದಾರೆ. ಆ ಆದರ್ಶಗಳನ್ನು ಪಾಲಿಸಿಕೊಂಡು ಹೋಗಬೇಕಾಗಿದೆ ಅಷ್ಟೇ ಎಂದು ಭಾವುಕರಾಗಿ ಮಾಧ್ಯಮಗಳಿಗೆ ಬಸವರಾಜ ಬೊಮ್ಮಾಯಿ ತಮ್ಮ ಪ್ರತಿಕ್ರಿಯೆ ನೀಡಿದರು.

CM udasi cremated1

ನನ್ನ ತಂದೆಯ ನಂತರ ಉದಾಸಿ ಅವರೇ ನನ್ನ ಗಾಡ್ ಫಾದರ್: ಬೊಮ್ಮಾಯಿ

ಆಗ ನಾನು ಜನತಾ ಪರಿವಾರದಲ್ಲಿ ಇದ್ದೆ. ಸಿಎಂ ಉದಾಸಿ ಅವರು ಒಂದು ದಿನ ನನ್ನನ್ನು ಹಾನಗಲ್ಲಿಗೆ ಕರೆಯಿಸಿಕೊಂಡರು. ಅಂದು ಅವರ ಹುಟ್ಟುಹಬ್ಬ. ಇಡೀ ದಿನ ಅವರು ನನ್ನನ್ನು ತಮ್ಮ ಜೊತೆ ಇರಿಸಿಕೊಂಡಿದ್ದರು. ಮರುದಿನ ಬೆಂಗಳೂರಿಗೆ ಕರೆದುಕೊಂಡು ಹೋದರು. ಬಿಜೆಪಿ ರಾಷ್ಟ್ರೀಯ ಮುಖಂಡ ರಾಜನಾಥ್ ಸಿಂಗ್ ಹಾಗೂ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿಸಿದರು.‌ ಭಾರತೀಯ ಜನತಾ ಪಕ್ಷ ಸೇರುವಂತೆ ಸಲಹೆ ನೀಡಿದರು.

ಆದರೆ ಆಗ ಬಿಜೆಪಿ ಸೇರಲು ಮಾನಸಿಕವಾಗಿ ನಾನು ಅಷ್ಟು ಸಿದ್ಧವಿರಲಿಲ್ಲ. ಆದರೂ ಆಗ ಅವರು ಬಿಜೆಪಿಗೆ ಬರುವಂತೆ ನನ್ನ ಮನಸ್ಸು ಒಲಿಸಿದರು. ಹೀಗಾಗಿ ನಾನು ಬಿಜೆಪಿಗೆ ಬರಲು ಸಿಎಂ ಉದಾಸಿ ಅವರೇ ಕಾರಣೀಭೂತ ವ್ಯಕ್ತಿ ಆದರು. ನನ್ನ ತಂದೆ ಎಸ್ ಆರ್ ಬೊಮ್ಮಾಯಿ ಅವರು ತೀರಿ ಕೊಂಡ ನಂತರ ಸಿಎಂ ಉದಾಸಿ ಅವರೇ ನನಗೆ ಗಾಡ್ ಫಾದರ್ ಆದರು!

ಸಿಎಂ ಉದಾಸಿ ಅವರು ಇಷ್ಟು ಬೇಗ ನಮ್ಮನ್ನು ಆಗಲುತ್ತಾರೆ ಅಂದುಕೊಂಡಿರಲಿಲ್ಲ. ಮೊದಲ ಬಾರಿಗೆ ಅವರು ಇಲ್ಲದ ಸಂದರ್ಭದಲ್ಲಿ ಹಾನಗಲ್ಲಿಗೆ ಹೋದಾಗ ನನಗೆ ನನ್ನ ಭಾವನೆಗಳನ್ನು ತಡೆಯಲು ಆಗಲಿಲ್ಲ. ಅವರ ನಿಧನದಿಂದ ವೈಯಕ್ತಿಕವಾಗಿ ನನಗೆ ತುಂಬಲಾರದ ಹಾನಿಯಾಗಿದೆ. ಅವರ ಮತ್ತು ನನ್ನ ಸಂಬಂಧ ಬಹಳ ಅನ್ಯೂನ್ಯವಾಗಿತ್ತು. ಅವರ ನಿಧನದಿಂದಾಗಿ ಒಬ್ಬ ಮಾರ್ಗದರ್ಶಕ ಹಾಗೂ ತಂದೆಯನ್ನು ಕಳೆದುಕೊಂಡ ಭಾವ ನನ್ನಲ್ಲಿ ಬರುತ್ತಿದೆ.

CM udasi cremated2

ಉದಾಸಿ ಅವರದು ಹೋರಾಟದ ಗುಣ. ತಮ್ಮ ವಿಚಾರಧಾರೆಗಳೊಂದಿಗೆ ಅವರು ಎಂದೂ ರಾಜಿ ಆಗಲಿಲ್ಲ . ಯಾವುದಾದರೂ ವಿಷಯಕ್ಕೆ ಅವರು ಬಿಗಿ ನಿಲುವು ತೆಗೆದುಕೊಂಡರೆ, ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಧೀಮಂತ ನಾಯಕ. ಹಾವೇರಿಯನ್ನು ಜಿಲ್ಲೆಯನ್ನಾಗಿ ಮಾಡಬೇಕೆಂಬ ಹೋರಾಟದಲ್ಲಿ ಅವರದು ಬಹುದೊಡ್ಡ ಪಾತ್ರ. ಜಿಲ್ಲಾ ಹೋರಾಟಕ್ಕೆ ಆಧಾರವಾಗಿದ್ದರು ಅವರು‌. ಹೀಗಾಗಿ ಬಹುದಿನಗಳ ನಮ್ಮೆಲ್ಲರ ಕನಸು ಈಡೇರಿಸಿದ ಕೀರ್ತಿ ಉದಾಸಿ ಅವರಿಗೆ ಸಲ್ಲುತ್ತದೆ.

ಬೆಳೆ ವಿಮೆ ಕುರಿತು ಸಿಎಂ ಉದಾಸಿ ಅವರು ಅಪಾರ ಜ್ಞಾನವನ್ನು ಹೊಂದಿದ್ದರು. ಹಾವೇರಿ ಜಿಲ್ಲೆಯ ರೈತರಿಗೆ ಬೆಳೆ ವಿಮೆಯ ಲಾಭವನ್ನು ಮಾಡಿಕೊಡುವ ಕೆಲಸವನ್ನು ಅವರು ಪ್ರಾಮಾಣಿಕವಾಗಿ ಮಾಡಿದ್ದಾರೆ. ಕೃಷಿ ಬಗ್ಗೆ ಅವರು ಅಪಾರವಾದ ಆಸಕ್ತಿಯನ್ನು ಹೊಂದಿದ್ದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಲೋಕೋಪಯೋಗಿ ಇಲಾಖೆ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಲೋಕೋಪಯೋಗಿ ಸಚಿವರಾಗಿದ್ದ ಉದಾಸಿ ಅವರು ರಾಜ್ಯದಲ್ಲಿ ರಸ್ತೆ ನಿರ್ಮಾಣದಲ್ಲಿ ಕ್ರಾಂತಿಯನ್ನೇ ಮಾಡಿದ್ದಾರೆ.

ಅಂತಹ ಮೇಧಾವಿ, ಮುತ್ಸದ್ದಿ, ದೂರದೃಷ್ಟಿತ್ವವುಳ್ಳ ರಾಜಕಾರಣಿಯನ್ನು ನಾವು ಕಳೆದುಕೊಂಡಿದ್ದೇವೆ. ಅವರು ಸಾಕಷ್ಟು ಆದರ್ಶಗಳನ್ನು ಬಿಟ್ಟು ಹೋಗಿದ್ದಾರೆ. ಆ ಆದರ್ಶಗಳನ್ನು ಪಾಲಿಸಿಕೊಂಡು ನಾವೆಲ್ಲಾ ಹೋಗಬೇಕಾಗಿದೆ.

LEAVE A REPLY

Please enter your comment!
Please enter your name here