Home ರಾಜಕೀಯ ರಾಜಕೀಯಕ್ಕೆ ಬರುವಂತೆ ಕನ್ನಡ ಸಂಘಟನೆಗಳಿಗೆ ನೇರ ಆಹ್ವಾನ ನೀಡಿದ ಹೆಚ್.ಡಿ.ಕುಮಾರಸ್ವಾಮಿ

ರಾಜಕೀಯಕ್ಕೆ ಬರುವಂತೆ ಕನ್ನಡ ಸಂಘಟನೆಗಳಿಗೆ ನೇರ ಆಹ್ವಾನ ನೀಡಿದ ಹೆಚ್.ಡಿ.ಕುಮಾರಸ್ವಾಮಿ

81
0
Former Chief Minister HD Kumaraswamy invites Kannada organizations to enter politics
  • ರಾಜ್ಯದಲ್ಲಿ 35 ಲಕ್ಷ ನಿರುದ್ಯೋಗಿಗಳು
  • 12ನೇ ತರಗತಿವರೆಗೆ ಕನ್ನಡ-ಆಂಗ್ಲ ಮಾಧ್ಯಮ
  • ಹಣ ಮಾಡಲು ರಾಜಕೀಯಕ್ಕೆ ಬಂದಿಲ್ಲ
  • ಎಲ್ಲರಂಥ ರಾಜಕಾರಣಿ ನಾನಲ್ಲ
  • ಅನಿತಾ ಕುಮಾರಸ್ವಾಮಿ ಅವರು ಮುಂದಿನ ಚುನಾವಣೆಗೆ ನಿಲ್ಲಲ್ಲ

ಬೆಂಗಳೂರು:

ಮೇಕೆದಾಟು ಯೋಜನೆ, ಗಡಿ ಬಿಕ್ಕಟ್ಟು ಸೇರಿದಂತೆ ರಾಜ್ಯ ಎದುರಿಸುತ್ತಿರುವ ನೆಲ, ಜಲ, ಭಾಷೆ ವಿಚಾರದಲ್ಲಿ ನಮ್ಮ ಹಕ್ಕುಗಳನ್ನು ಸಾಧಿಸಿಕೊಳ್ಳಬೇಕಾದರೆ 2023ರಲ್ಲಿ ರಾಷ್ಟ್ರೀಯ ಪಕ್ಷಗಳಿಲ್ಲದ್ದಲ್ಲದ, ಕನ್ನಡಿಗರದ್ದೇ ಸರಕಾರ ಬರಬೇಕಿದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಬಲವಾಗಿ ಪ್ರತಿಪಾದಿಸಿದರು.

ಬೆಂಗಳೂರಿನಲ್ಲಿ ಬುಧವಾರ ಕನ್ನಡಪರ ಹೋರಾಟಗಾರರ ಜತೆ ನಾಡು ನುಡಿ ನೆಲ ಜಲ ಇತ್ಯಾದಿ ಸವಾಲುಗಳಿಗೆ ಬಗ್ಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಕ್ತ ಮಾತುಕತೆ ನಡೆಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು; “ನಮ್ಮ ನ್ಯಾಯಯುತ ಹಕ್ಕುಗಳನ್ನು ಸಾಧಿಸಿಕೊಳ್ಳಲು ಹಾಗೂ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಕನ್ನಡಪರ ಹೋರಾಟಗಾರರು ಕೂಡ ವಿಧಾನಮಂಡಲಕ್ಕೆ ಬರಲೇಬೇಕು” ಎಂದು ಕರೆ ನೀಡಿದರು.

ಕನ್ನಡಪರ ಸಂಘಟನೆಗಳನ್ನು ರಾಜಕೀಯಕ್ಕೆ ಆಹ್ವಾನಿಸುವ ಬಗ್ಗೆ ತಮ್ಮದೇ ಆದ ವಿಚಾರ ಸರಣಿ ಮಂಡಿಸಿದ ಮಾಜಿ ಮುಖ್ಯಮಂತ್ರಿಗಳು, ಕನ್ನಡಕ್ಕೆ ಅಪಮಾನವಾದಾಗ ಮಾತ್ರ ನೀವು ಬೀದಿಗೆ ಇಳಿಯುವುದಲ್ಲ. ಪ್ರತಿನಿತ್ಯ ಜನರೊಂದಿಗೆ ಬೆರೆಯಿರಿ. ಅವರ ಸಮಸ್ಯೆಗಳಿಗೆ ದನಿಯಾಗಿ. ಆ ಮೂಲಕವೇ ರಾಜಕೀಯಕ್ಕೂ ಬನ್ನಿ ಎಂದು ಹೇಳಿದರು.

Former Chief Minister HD Kumaraswamy invites Kannada organizations to enter politics

ರಾಜ್ಯದ ಸಂಪನ್ಮೂಲ ಲೂಟಿಯಾಗುತ್ತಿದೆ. ನೂರಕ್ಕೆ ಶೇ.70ರಷ್ಟು ಹಣ ಕಮಿಷನ್ ರೂಪದಲ್ಲೇ ಕೊಳ್ಳೆ ಹೋಗುತ್ತಿದೆ. ನೀವು ಮಾತ್ರ ಕನ್ನಡಕ್ಕಾಗಿ ದುಡಿಯುತ್ತಿದ್ದಿರಿ. ಅದು ತಪ್ಪಲ್ಲ. ಆದರೆ ರಾಜಕೀಯ ಯಾರಪ್ಪನ ಸ್ವತ್ತೂ ಅಲ್ಲ. ಭ್ರಷ್ಟಾಚಾರ ತಡೆಯಲು ಹಾಗೂ ನಾಡಿನ ಪ್ರಗತಿಯ ದೃಷ್ಟಿಯಿಂದ ರಾಜಕೀಯಕ್ಕೆ ಬನ್ನಿ ಎಂದು ಅವರು ಕನ್ನಡ ಹೋರಾಟಗಾರರಿಗೆ ನೇರ ಆಹ್ವಾನ ನೀಡಿದರು.

ಕನ್ನಡಪರ ಸಂಘಟನೆಗಳ ನಾಯಕರು ಮುಖ್ಯವಾಹಿನಿಗೆ ಬರಬೇಕು ಎಂಬುದು ನನ್ನ ಅಭಿಲಾಷೆ. ನಾನು ಇಲ್ಲಿಗೆ ನನ್ನ ಪಕ್ಷದ ಪ್ರಚಾರಕ್ಕೆ ಬಂದಿಲ್ಲ. ನೀವು ಕೆಲ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಿ. ಚುನಾವಣೆಗೆ ಇನ್ನೂ 14 ತಿಂಗಳ ಕಾಲಾವಕಾಶವಿದೆ. ಈಗಿನಿಂದಲೇ ಕೆಲಸ ಮಾಡಿ. ನಾವೇಕೆ ವಿರೋಧ ಪಕ್ಷದಲ್ಲಿ ಕೂಡಬೇಕು? ನಮಗೆ ನಲವತ್ತು ಸ್ಥಾನಗಳನ್ನ ಗೆಲ್ಲುವುದು ಕಷ್ಟವಲ್ಲ. ನಿಮ್ಮೆಲ್ಲರ ಬೆಂಬಲ ಇದ್ದರೆ 125 ಕ್ಷೇತ್ರಗಳನ್ನು ಗೆಲ್ಲುವುದು ಅಸಾಧ್ಯವಲ್ಲ ಎಂದರು ಅವರು.

ಕನ್ನಡ ಸಂಘಟನೆಗಳ ದುರುಪಯೋಗಕ್ಕೆ ಬಂದಿಲ್ಲ:

ನಿಮ್ಮ ಶಕ್ತಿಯನ್ನು ದುರುಪಯೋಗಪಡಿಸಿಕೊಳ್ಳಲು ನಾನು ರಾಜಕೀಯಕ್ಕೆ ಬನ್ನಿ ಎಂದು ಆಹ್ವಾನ‌ ಕೊಟ್ಟಿಲ್ಲ. ಮುಂದಿನ ಚುನಾವಣೆಗೆ ನಿಮ್ಮನ್ನು ಬಳಸಿಕೊಳ್ಳುವ ಸಲುವಾಗಿ ಈ ಮಾತುಕತೆ ನಡೆಸುತ್ತಿಲ್ಲ. ನಿಮ್ಮ ಅನುಮಾನ, ಸಂಶಯ ಏನೇ ಇರಲಿ. ಎಲ್ಲವನ್ನೂ ಮುಕ್ತವಾಗಿ ಚರ್ಚಿಸುವುದು ನಮ್ಮ ಉದ್ದೇಶ. ಸ್ವತಃ ನಾನೇ ರಾಜಕಾರಣಕ್ಕೆ ಬಂದಿದ್ದೇ ಆಕಸ್ಮಿಕ. ಒಂದು ವೇಳೆ ನಾನು ರಾಜಕಾರಣಕ್ಕೆ ಬರದೇ ಇದ್ದಿದ್ದರೆ ಸಿನಿಮಾ ಹಂಚಿಕೆದಾರನಾಗಿ, ನಿರ್ಮಾಪಕನಾಗಿ ಉಳಿಯುತ್ತಿದ್ದೆ. ಯಾವುದೋ ಒತ್ತಡಕ್ಕೆ ಒಳಗಾಗಿ ರಾಜಕೀಯಕ್ಕೆ ಬರಬೇಕಾಯಿತು ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ರಾಜ್ಯದಲ್ಲಿ 35 ಲಕ್ಷ ನಿರುದ್ಯೋಗಿಗಳು:

ಖಾಸಗಿ ಕಂಪನಿಗಳ ಸ್ಥಾಪನೆಗೆ ಸರಕಾರದ ಕಡೆಯಿಂದ ಅನುದಾನ, ರಿಯಾಯಿತಿ ದರದಲ್ಲಿ ಭೂಮಿ ಕೊಡುತ್ತೇವೆ. ನಮ್ಮಿಂದ ಸಹಾಯ ಪಡೆಯುವ ಕಂಪನಿಗಳು ನಾವು ಗೋಗರೆದರೂ ನಮ್ಮ ಯುವಕರಿಗೆ ಉದ್ಯೋಗ ಕೊಡಲ್ಲ. ಈಗ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಕೆಲ ದಿನ ಕಂಪನಿಗಳು ನಡೆದು ನಾಲ್ಕಾರು ತಿಂಗಳಲ್ಲಿ ಅವು ಮುಚ್ಚಿ ಹೋಗುತ್ತಿವೆ. ಹೀಗಾಗಿ ರಾಜ್ಯದಲ್ಲಿ ಸುಮಾರು 35 ಲಕ್ಷ ನಿರುದ್ಯೋಗಿಗಳು ಇದ್ದಾರೆ. ಈಗ ಸರೋಜಿನಿ ಮಹಿಷಿ ವರದಿ ಜಾರಿ ಮಾಡಿದರೆ ಮಾತ್ರ ಸಮಸ್ಯೆ ಪರಿಹಾರವಾಗುವುದಿಲ್ಲ. ಅದಕ್ಕಿಂತ ದೊಡ್ಡ ಕ್ರಮದ ಅಗತ್ಯವಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

Former Chief Minister HD Kumaraswamy invites Kannada organizations to enter politics

12ನೇ ತರಗತಿವರೆಗೆ ಕನ್ನಡ-ಆಂಗ್ಲ ಮಾಧ್ಯಮ:

ಎಲ್‌ಕೆಜಿಯಿಂದ 12ನೇ ತರಗತಿಯವರೆಗೆ ಕನ್ನಡ ಹಾಗೂ ಆಂಗ್ಲ‌ ಮಾಧ್ಯಮ ಇರಬೇಕು. ಸಮಾನ ಶಿಕ್ಷಣದ ಉದ್ದೇಶದಿಂದ ಇದು ಅಗತ್ಯ ಹಾಗೂ ಕನ್ನಡ ಕಡ್ಡಾಯ ಇರಲೇಬೇಕು. ಹಾಗೆಯೇ, ಗ್ರಾಮೀಣ ಭಾಗದಲ್ಲಿ ಗ್ರಾಪಂ ಮಟ್ಟದಲ್ಲಿ ಅತ್ಯುತ್ತಮ ದರ್ಜೆಯ ಶಿಕ್ಷಣ ಕೊಡಬೇಕು. ಯಾರೂ ಕೂಡ ಖಾಸಗಿ ಶಾಲೆಗಳತ್ತ ಹೋಗಬಾರದು. ಅದಕ್ಕೆ ಬೇಕಾದ ಎಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಆರೋಗ್ಯ, ಶಿಕ್ಷಣ, ಉದ್ಯೋಗ, ವಸತಿ, ಕೃಷಿ ಕ್ಷೇತ್ರಗಳಿಗೆ ಕಾಯಕಲ್ಪ ನೀಡಲು ಪಂಚರತ್ನ ಕಾರ್ಯಕ್ರಮ ಜಾರಿ ಮಾಡುವ ಉದ್ದೇಶವಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಹಣ ಮಾಡಲು ರಾಜಕೀಯಕ್ಕೆ ಬಂದಿಲ್ಲ:

ನಾನು ಹಣ ಮಾಡಲಿಕ್ಕೆ ರಾಜಕೀಯಕ್ಕೆ ಬಂದಿಲ್ಲ. ಬಿಡದಿಯ ತೋಟದ ಹೊರತಾಗಿ ಬೇರೆ ಯಾವುದೇ ಆಸ್ತಿ ನನಗಿಲ್ಲ. ಆದರೆ ಜನರನ್ನು ದೊಡ್ಡ ಪ್ರಮಾಣದಲ್ಲಿ ಗಳಿಸಿದ್ದೇನೆ. ಅದುಬಿಟ್ಟು ಯಾವುದೇ ವಿದ್ಯಾಸಂಸ್ಥೆ, ಕೈಗಾರಿಕೆಗಳನ್ನು ಮಾಡಲು ಸಿಎಂ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಚಿಕ್ಕಂದಿನಿಂದ ಡಾ.ರಾಜ್ ಕುಮಾರ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವನು ನಾನು. ತಂದೆ, ತಾಯಿಯಿಂದ ಮಾನವೀಯತೆ ಕಲಿತಿದ್ದೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ನಾನು ರಾಜಕಾರಣಿಯಲ್ಲ:

ಹಾಗೆ ನೋಡಿದರೆ ನಾನು ರಾಜಕಾರಣಿ ಅಲ್ಲ. ಇತರೆ ರಾಜಕಾರಣಿಗಳಂತೆಯೂ ಅಲ್ಲ. ರಾಜಕೀಯಕ್ಕೆ ಬರಲೇಬೇಕು ಎಂದುಕೊಂಡವನೂ ಅಲ್ಲ. ಆಕಸ್ಮಿಕವಾಗಿ ಬಂದೆ. ಅಷ್ಟೇ ಆಕಸ್ಮಿಕವಾಗಿ 2006ರಲ್ಲಿ ಮುಖ್ಯಮಂತ್ರಿ ಆದೆ. ಆಗ ನನಗೆ ಆಡಳಿತದ ಅನುಭವ ಇರಲಿಲ್ಲ. ಬಿಜೆಪಿ ಜತೆ ಸರಕಾರ ಮಾಡಿದೆ ಎಂದು ನಮ್ಮ ತಂದೆ ನನ್ನಿಂದ ದೂರ ಇದ್ದರು. ಆಗ ತಂದೆಯವರ ಆರೋಗ್ಯ ಹದಗೆಟ್ಟಿತ್ತು. ಆ ಸರಕಾರ ಮಾಡಿದಾಗ ಅವರು ತುಂಬಾ ಕುಗ್ಗಿ ಹೋಗಿದ್ದರು. ಆದರೂ ಅಂತಃಕರಣದಿಂದ ಆಡಳಿತ ನಡೆಸಿದೆ ಎಂದು ಅವರು ಹಿಂದಿನ ದಿನಗಳನ್ನು ಮೆಲುಕು ಹಾಕಿದರು.

ನಾನು ರಾಜಕೀಯಕ್ಕೆ ಬರದೇ ಇದ್ದಿದ್ದರೆ ಪಕ್ಷ ಇರುತ್ತಿರಲಿಲ್ಲ:

ಕೆಲ ಹೋರಾಟಗಾರರು ನಮ್ಮ ಕುಟುಂಬ ರಾಜಕಾರಣದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ನಮ್ಮ ಕುಟುಂಬದ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಈಗ ಅದರ ಬಗ್ಗೆ ಮಾತನಾಡುವುದು ಅಪ್ರಸ್ತುತ. ನಾನು ರಾಜಕಾರಣಕ್ಕೆ ಬರದೇ ಇದ್ದದ್ದರೆ ಇಂದು ನಮ್ಮ ಪಕ್ಷ ಇರುತ್ತಿರಲಿಲ್ಲ. ಪಕ್ಷವನ್ನು ಉಳಿಸಿಕೊಳ್ಳಲು ನನ್ನ ಪತ್ನಿಯನ್ನು ಚುನಾವಣಾ ಕಣಕ್ಕಿಳಿಸಬೇಕಾಯಿತು. ಮುಂದಿನ ಚುನಾವಣೆಗೆ ಅವರನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ನೇರ ಮಾತುಗಳಲ್ಲಿ ಕುಮಾರಸ್ವಾಮಿ ಅವರು ಹೇಳಿದರು.

Former Chief Minister HD Kumaraswamy invites Kannada organizations to enter politics

ಪಕ್ಷವನ್ನು ಉಳಿಸಿಕೊಳ್ಳಲು ಕುಟುಂಬದವರು ಕೆಲವರು ರಾಜಕೀಯಕ್ಕೆ ಬಂದಿದ್ದಾರೆ ನಿಜ, ಅದರ ಹೊರತಾಗಿ ಯಾವ ಕಾರ್ಯಕರ್ತರನ್ನೂ ಹರಕೆಯ ಕುರಿ ಮಾಡಿಲ್ಲ. ನನಗೆ ಕುಟುಂಬ ವ್ಯಾಮೋಹಕ್ಕಿಂತಲೂ ರಾಜ್ಯದ ಮೇಲೆ ವ್ಯಾಮೋಹ, ಪ್ರೀತಿ ಹೆಚ್ಚು ಎಂದು ಅವರು ನುಡಿದರು.

ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಹಿ.ಚಿ.ಬೋರಲಿಂಗಯ್ಯ, ಹಿರಿಯ ಲೇಖಕ ಬೈರಮಂಗಲ ರಾಮೇಗೌಡ, ಚಿತ್ರಸಾಹಿತಿ ಕವಿರಾಜ್, ಉಸ್ಮಾನಿಯಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಇಕ್ಬಾಲ್ ಅಹ್ಮದ್, ಶಿವರಾಮೇಗೌಡ, ಪ್ರವೀಣ್ಕುಮಾರ್ ಶೆಟ್ಟಿ ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಪ್ರಮುಖ ಸಂಘಟನೆಗಳ ಮುಖಂಡರು, ನೂರಾರು ಕಾರ್ಯಕರ್ತರು ಸಂವಾದದಲ್ಲಿ ಭಾಗಿಯಾಗದ್ದಿರು.

ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಹೋರಾಟಗಾರರಾದ ಕರವೇ ಶಿವರಾಮೇಗೌಡ, ಕರವೇ ಪ್ರವೀಣ್ ಕುಮಾರ್ ಶೆಟ್ಟಿ, ಕರವೇ ಸ್ವಾಭಿಮಾನಿ ಬಣದ ಕೃಷ್ಣಪ್ಪ, ಜಯ ಕರ್ನಾಟಕದ ಜಗದೀಶ್, ಕನ್ನಡ ಸಂಘಗಳ ಒಕ್ಕೂಟದ ಕೆನಲಿಗೌಡ, ಕನ್ನಡ ಚಳವಳಿ ಕೇಂದ್ರ ಗುರುದೇವ್ ಜಿ.ನಾರಾಯಣ ಕುಮಾರ್, ಕರ್ನಾಟಕ ರಕ್ಷಣಾ ಸೇನೆಯ ರಮೇಶ್ ಗೌಡ, ಕರುನಾಡ ಸೇವಕರು ಸಂಘಟನೆಯ ರೂಪೇಶ್ ರಾಜಣ್ಣ, ಕರುನಾಡ ವಿಜಯಸೇನೆಯ ವಿಜಯ್, ಹಾಗೂ ದಿಲೀಪ್ ಮುಂತಾದವರು ಮಾತನಾಡಿದರು.

ಕಾರ್ಯಕ್ರಮಕ್ಕೆ ಮುನ್ನ ದಿವಂಗತ ನಟ ಪುನೀತ್ ರಾಜಕುಮಾರ್ ಹಾಗೂ ಇಬ್ರಾಹಿಂ ಸುತಾರ ಅವರಿಗೆ ನಮನ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here