Home ಬೆಂಗಳೂರು ನಗರ ವಿದ್ಯಾರ್ಥಿಗಳಲ್ಲಿ ಸಮಸಮಾಜದ ಹೆಮ್ಮೆ ಮೂಡಿಸುವುದು ಇಂದಿನ‌ ಅಗತ್ಯ- ಮುಖ್ಯಮಂತ್ರಿಗಳಿಗೆ ಎಸ್.ಸುರೇಶ್ ಕುಮಾರ್‌ ಮನವಿ

ವಿದ್ಯಾರ್ಥಿಗಳಲ್ಲಿ ಸಮಸಮಾಜದ ಹೆಮ್ಮೆ ಮೂಡಿಸುವುದು ಇಂದಿನ‌ ಅಗತ್ಯ- ಮುಖ್ಯಮಂತ್ರಿಗಳಿಗೆ ಎಸ್.ಸುರೇಶ್ ಕುಮಾರ್‌ ಮನವಿ

22
0
Advertisement
bengaluru

ನನ್ನ ಶಾಲೆ-ಕಾಲೇಜು, ನನ್ನ ಹೆಮ್ಮೆ, ನನ್ನ  ಶಿಕ್ಷಣ, ನನ್ನ ಸಮವಸ್ತ್ರ, ನನ್ನದೇ ಭವಿಷ್ಯವೆನ್ನುವ ಭಾವನೆ ನಮ್ಮ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕಾದರೆ ಶಿಕ್ಷಣ ಇಲಾಖೆಯ ಕೆಲಸ ಗಮನಾರ್ಹ ಶಿಕ್ಷಣ ಸಚಿವರಿಗೆ ಎಸ್.ಸುರೇಶ್ ಕುಮಾರ್ ಸಲಹೆ

ಬೆಂಗಳೂರು:

ಹಿಜಾಬ್-ಸಮವಸ್ತ್ರಗಳ ಸಂಘರ್ಷದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕಾಯುವ ಕೆಲಸಕ್ಕೆ ಶಿಕ್ಷಣ ಇಲಾಖೆ ಹೊಸ ಕಾಯಕಲ್ಪದೊಂದಿಗೆ ಕೆಲಸ‌ ಮಾಡಬೇಕಿದೆ ಎಂದು ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ‌ ಮಂತ್ರಿಗಳಾದ ಶ್ರೀ ಬಿಸಿ. ನಾಗೇಶ್ ಅವರುಗಳಿಗೆ ಪತ್ರ ಬರೆದಿರುವ ಅವರು ಶಾಲೆ ಕಾಲೇಜುಗಳ ಆವರಣದಲ್ಲಿ ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ‌ ಆರೋಪ ಪ್ರತ್ಯಾರೋಪಗಳನ್ನು ಮೀರುವ, ಶಿಕ್ಷಣದ‌ ಕಡೆಗೆ ಒಲವು ಹೆಚ್ಚುವ ಸಕಾರಾತ್ಮಕವಾದ ಕಾರ್ಯಕ್ರಮಗಳನ್ನು ರೂಪಿಸುವ ಕುರಿತಂತೆ ನಾವು ಹೆಚ್ಚಾಗಿ ಆಲೋಚಿಸಬೇಕಿದೆ ಎಂದು ಹೇಳಿದ್ದಾರೆ.

ಹಿಜಾಬ್ ಅಥವಾ ಸಮವಸ್ತ್ರ- ಅದರ ಸುತ್ತಲೂ ಭುಗಿಲೇಳುತ್ತಿರುವ ವಿವಾದ ಮೇಲ್ನೋಟದ್ದಲ್ಲ. ಅಲ್ಲಿನ ಆಂತರಿಕ ಸಂಘರ್ಷ, ಅದನ್ನು ಹುಟ್ಟುಹಾಕುತ್ತಿರುವವರ ಮನೋಧರ್ಮ, ಮೂಲಭೂತ ಅವಶ್ಯಕತೆಗಳನ್ನು ಮೀರಿರುವುದು ಗಮನೀಯವೆಂದು ನೆನಪಿಸಿದ್ದಾರೆ. ಘನ ನ್ಯಾಯಾಲಯವು ಸಾಂವಿಧಾನಿಕ‌ ಅವಕಾಶಗಳನ್ನು ಅವಲೋಕಿಸುತ್ತಿರುವಾಗಲೂ ಶಾಂತಿ‌ ಕದಡುವ ಪ್ರಯತ್ನಗಳಾಗುತ್ತಿರುವುದು ಇದರ‌ ಹಿಂದಿನ‌ ಉದ್ದೇಶವನ್ನು ಸ್ಪಷ್ಟ ಪಡಿಸುತ್ತದೆ ಎಂದಿರುವ ಸುರೇಶ್ ಕುಮಾರ್, ಶಿಕ್ಷಣ‌ ಇಲಾಖೆ ಕೂಡಲೇ‌ ಕೆಲವು ಕ್ರಮಗಳಿಗೆ ಮುಂದಾಗಬೇಕೆಂದು ಸಲಹೆ ನೀಡಿದ್ದಾರೆ. ಅವರ ಅಭಿಪ್ರಾಯಗಳು ಕೆಳಕಂಡಂತಿವೆ.

  1. ಪ್ರತಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ನಡುವೆ ಸೋದರತ್ವ,  ಸೌಹಾರ್ದತೆಯನ್ನು ಕಾಪಾಡುವ, ಶೈಕ್ಷಣಿಕ‌ ವಾತಾವರಣವನ್ನು ಸಂರಕ್ಷಿಸುವ ನಿಟ್ಟಿನಲ್ಲಿ‌ ಶಾಲಾಭಿವೃದ್ದಿ ಮೇಲುಸ್ತುವಾರಿ ಸಮಿತಿಗಳಿಗೆ/ಶಾಲಾ,ಕಾಲೇಜು ಸಲಹಾ‌ ಸಮಿತಿಗಳಿಗೆ ಹಿಂದೆಂದಿಗಿಂತಲೂ ಹೆಚ್ಚಿನ‌ ಖಚಿತ ಜವಾಬ್ದಾರಿಯನ್ನು ನಿಗದಿ‌ ಪಡಿಸಬೇಕಿದೆ.
  2. ತರಗತಿವಾರು ಮಕ್ಕಳ ಸಭೆಗಳನ್ನು ನಿಗದಿಪಡಿಸಿ ಕೋಮುಸಾಮರಸ್ಯದ ಸಾಂಸ್ಕೃತಿಕ‌ ಕಾರ್ಯಕ್ರಮಗಳು, ಸಮವಸ್ತ್ರದ ಆಶಯ, ಅದನ್ನು ಧರಿಸಿದಾಗ ಮೂಡಬೇಕಾದ ಸಮಸಮಾಜದ ಹೆಮ್ಮೆಯ ಕುರಿತಂತೆ ಮಕ್ಕಳಲ್ಲಿ ಅರಿವು ಮೂಡಿಸುವ ಪ್ರಯತ್ನಗಳು ಆಗಬೇಕು. ಅದಕ್ಕಾಗಿ ದಿನದ‌ ಒಂದು ಅವಧಿ ಮೀಸಲಿಟ್ಟರೂ ತಪ್ಪಿಲ್ಲ.
  3. ಶಾಲಾಭಿವೃದ್ಧಿ ಸಮಿತಿಗಳು, ಶಾಲಾ,ಕಾಲೇಜು ಸಲಹಾ ಸಮಿತಿಗಳು, ಪೋಷಕರ ಸಭೆಗಳನ್ನು ವಾರಕ್ಕೊಮ್ಮೆ ಕರೆದು ಈ ಪರಿಸ್ಥಿತಿ ತಿಳಿಯಾಗುವವರೆಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಸಾಧ್ಯವಾಗಬೇಕು. ಮಕ್ಕಳ ಭವಿಷ್ಯ ಕಟ್ಟುವ ಅನಿವಾರ್ಯತೆಯ ಕುರಿತಂತೆ ಮನನ ಮಾಡಿಸಿ ಸೌಹಾರ್ದ ವಾತಾವರಣ ಸೃಷ್ಟಿಸಬೇಕು.
  4. ಶಾಲಾ ಮಟ್ಟದಲ್ಲಿ ಸ್ಥಳೀಯ ಕಲಾವಿದರ, ಸ್ಥಳೀಯ ಸಾಹಿತಿಗಳ, ಸಾಧಕರನ್ನು‌ ಆಹ್ವಾನಿಸಿ ಮಕ್ಕಳ ಆರೋಗ್ಯಕರ ಚರ್ಚೆಗೆ ವೇದಿಕೆ ಸೃಷ್ಟಿಸಬೇಕು. ವಿದ್ಯಾರ್ಥಿಗೆ ಅವರಿಂದ‌ ಒಳಿತಿನ‌ ಪಾಠ ಮಾಡಿಸಬೇಕು, ಪ್ರಭಾವಿತರನ್ನಾಗಿಸುವ ಪ್ರಯತ್ನ ಆಗಬೇಕು.
  5. ಸ್ಥಳೀಯವಾಗಿ ಇಂತಹ ವಿಭಿನ್ನ ಪ್ರಯತ್ನಗಳನ್ನು‌ ಕೈಗೊಂಡ ಶಾಲೆಗಳನ್ನ ಗುರುತಿಸಿ, ಅಭಿನಂದಿಸುವ,‌ಪ್ರಯತ್ನಗಳನ್ನು ದಾಖಲಿಸುವ ವ್ಯವಸ್ಥೆ ಆಗಬೇಕು.
  6. ರಾಜ್ಯಮಟ್ಟದ ಪ್ರಖ್ಯಾತ ಚಲನಚಿತ್ರ‌ಕಲಾವಿದರು, ವಿವಿಧ ಸಾಧಕರುಗಳನ್ನು ಪ್ರೇರೇಪಿಸಿ ಮಕ್ಕಳನ್ನು ಉದ್ದೇಶಿಸಿ ಸಮವಸ್ತ್ರದ ಪ್ರಾಮುಖ್ಯತೆಯನ್ನು ಅರ್ಥೈಸುವ ಕಿರುಚಿತ್ರಗಳನ್ನು ದೃಶೀಕರಿಸಿ ವೈರಲ್ ಮಾಡಬಹುದು. ಅಂತೆಯೇ ಖ್ಯಾತ ಹಿನ್ನೆಲೆ ಗಾಯಕರಿಂದ, ಗೀತಸಾಹಿತಿಗಳ‌ ನೆರವನ್ನೂ ಪಡೆದು ವಿಶಿಷ್ಟ ಹಾಡುಗಳನ್ನು ರಚಿಸಿ ಚಿತ್ರೀಕರಿಸಬಹುದು.

ಒಟ್ಟಾರೆಯಾಗಿ ಇಂದು ನನ್ನ ಶಾಲೆ, ನನ್ನ ಕಾಲೇಜು, ನನ್ನ ಹೆಮ್ಮೆ, ನನ್ನ‌ ಶಿಕ್ಷಣ, ನನ್ನ ಸಮವಸ್ತ್ರ‌ ಮತ್ತು‌ ನನ್ನದೇ ಭವಿಷ್ಯವೆನ್ನುವ ಭಾವನೆ‌ ಪ್ರತಿ ವಿದ್ಯಾರ್ಥಿಯಲ್ಲಿಯೂ ಮೂಡುವ ಪ್ರಯತ್ನ‌ ನಡೆಸಿ ಭಾವೈಕ್ಯತೆಯ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ವಿಶೇಷ ಪ್ರಯತ್ನದ‌ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ತಾವು ಸಂಬಂಧಿತರಿಗೆ ಸೂಕ್ತ ನಿರ್ದೇಶನವನ್ನು ನೀಡುವ ಮೂಲಕ ಸರ್ಕಾರದ ಜನಪರ‌ ನಿಲುವನ್ನು ಸಾರ್ವತ್ರೀಕರಣಗೊಳಿಸಲು ಮುಂದಾಗಬೇಕೆಂದು ಕೋರುತ್ತೇನೆ ಎಂದು ಅವರು ಮುಖ್ಯಮಂತ್ರಿಗಳಲ್ಲಿ ಹಾಗೂ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದ್ದಾರೆ.

bengaluru bengaluru

bengaluru

LEAVE A REPLY

Please enter your comment!
Please enter your name here