ಬೆಂಗಳೂರು:
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ ಅವರಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ವಿಚಾರವನ್ನು ಖದ್ದಾಗಿ ಎಚ್‌ಡಿ ದೇವೇಗೌಡರು ಟ್ವೀಟ್ ಮಾಡುವ ಮೂಲಕ ಧೃಡಪಡಿಸಿದ್ದಾರೆ.
ನನ್ನ ಹೆಂಡತಿ ಚೆನ್ನಮ್ಮ ಮತ್ತು ನಾನು ಕೋವಿಡ್ ತಪಾಸಣೆಗೆ ಒಳಪಟ್ಟಾಗ ಪಾಸಿಟಿವ್ ಎಂದು ತಿಳಿದುಬಂದಿದೆ. ಈ ಕಾರಣಕ್ಕಾಗಿ ನಾವು ಇತರ ಕುಟುಂಬ ಸದಸ್ಯರೊಂದಿಗೆ ಸ್ವಯಂ-ಪ್ರತ್ಯೇಕಗೊಂಡಿರುತ್ತೇವೆ. ಕಳೆದ ಕೆಲವು ದಿನಗಳಿಂದ ನಮ್ಮೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರೂ ತಮ್ಮನ್ನು ತಾವು ಪರೀಕ್ಷಿಸಿಕೊಳ್ಳಬೇಕೆಂದು ನಾನು ವಿನಂತಿಸುತ್ತೇನೆ. ಪಕ್ಷದ ಕಾರ್ಯಕರ್ತರು ಮತ್ತು ಹಿತೈಷಿಗಳು ಭಯಭೀತರಾಗದಂತೆ ನಾನು ವಿನಂತಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಇದೇ ವಿಚಾರವಾಗಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಕೂಡಾ ಟ್ವೀಟ್ ಮಾಡಿದ್ದು, ಹಿರಿಯರು, ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರು ಹಾಗೂ ಅವರ ಧರ್ಮಪತ್ನಿ ಅವರಿಗೆ ಕೊರೊನಾ ಸೋಂಕು ಧೃಢಪಟ್ಟಿರುವ ಸುದ್ದಿ ತಿಳಿಯಿತು. ವೈದ್ಯರೊಂದಿಗೆ ನಿಕಟ ಸಂಪರ್ಕದಲ್ಲಿದ್ದು ಅವರ ಆರೋಗ್ಯದ ಬಗ್ಗೆ ಖುದ್ದಾಗಿ ಮಾಹಿತಿ ಪಡೆಯಲಿದ್ದೇನೆ. ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಇನ್ನು ಸಿಎಂ ಬಿಎಸ್ ಯಡಿಯೂರಪ್ಪ ಅವರು ಕೂಡಾ ಟ್ವೀಟ್ ಮಾಡಿದ್ದು, ಹಿರಿಯ ರಾಜಕಾರಣಿಗಳು ಹಾಗೂ ಮಾಜಿ ಪ್ರಧಾನಮಂತ್ರಿಗಳಾದ ದೇವೇಗೌಡರು ಮತ್ತು ಅವರ ಪತ್ನಿ ಚೆನ್ನಮ್ಮನವರು ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಲಿ, ಶೀಘ್ರದಲ್ಲಿ ಚೇತರಿಸಿಕೊಂಡು ಎಂದಿನಂತೆ ತಮ್ಮ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.