ಬೆಂಗಳೂರು: 2025-26ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಪ್ರೌಢಶಾಲೆಗಳು ಶ್ಲಾಘನೀಯ ಸಾಧನೆ ಮಾಡಿದ್ದು, ಒಟ್ಟು ಶೇ. 88.85 ಫಲಿತಾಂಶ ದಾಖಲಿಸಿವೆ.
ಜಿಬಿಎ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ 34 ಪ್ರೌಢಶಾಲೆಗಳ 2,063 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 1,833 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರಲ್ಲಿ 106 ವಿದ್ಯಾರ್ಥಿಗಳು ಶೇ. 85 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
6 ಪ್ರೌಢಶಾಲೆಗಳಲ್ಲಿ ಶೇ.100 ಫಲಿತಾಂಶ
ಜಿಬಿಎ ವ್ಯಾಪ್ತಿಯ ಆರು ಪ್ರೌಢಶಾಲೆಗಳು ಶೇ.100 ಫಲಿತಾಂಶ ದಾಖಲಿಸಿ ಕೀರ್ತಿ ತಂದಿವೆ. ಅವುಗಳೆಂದರೆ:
- ಪಶ್ಚಿಮ ನಗರ ಪಾಲಿಕೆಯ ಬಸವನಗುಡಿ, ಸುಬ್ರಮಣ್ಯನಗರ, ಮಾರಪ್ಪನಪಾಳ್ಯ,
- ಕೇಂದ್ರ ನಗರ ಪಾಲಿಕೆಯ ಕಾಟನ್ಪೇಟೆ, ಶಾಂತಿನಗರ,
- ಉತ್ತರ ನಗರ ಪಾಲಿಕೆಯ ಮತ್ತಿಕೆರೆ ಪ್ರೌಢಶಾಲೆ.
600ಕ್ಕೂ ಹೆಚ್ಚು ಅಂಕ ಗಳಿಸಿದ ಮೂವರು ವಿದ್ಯಾರ್ಥಿನಿಯರು
- ಪಶ್ಚಿಮ ನಗರ ಪಾಲಿಕೆಯ ಬೈರವೇಶ್ವರನಗರ ಪ್ರೌಢಶಾಲೆಯ ವಿದ್ಯಾರ್ಥಿನಿ ಗಾನಶ್ರೀ ಎಸ್ ಅವರು 625ಕ್ಕೆ 611 ಅಂಕ ಪಡೆದು ಶೇ. 97.76 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದು ಕೀರ್ತಿ ತಂದಿದ್ದಾರೆ.
- ಉತ್ತರ ನಗರ ಪಾಲಿಕೆಯ ಗಂಗಾನಗರ ಪ್ರೌಢಶಾಲೆಯ ವಿದ್ಯಾರ್ಥಿನಿ ಜಾರಾ ಫಾತಿಮಾ ಅವರು 625ಕ್ಕೆ 610 ಅಂಕ ಪಡೆದು ಶೇ. 97.60 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
- ಪಶ್ಚಿಮ ನಗರ ಪಾಲಿಕೆಯ ಹೇರೋಹಳ್ಳಿ ಪ್ರೌಢಶಾಲೆಯ ವಿದ್ಯಾರ್ಥಿನಿ ಲಾವಣ್ಯ ಎ ಅವರು 625ಕ್ಕೆ 605 ಅಂಕ ಪಡೆದು ಶೇ. 96.80 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.
ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ಪ್ರೋತ್ಸಾಹಧನ
ಜಿಬಿಎ ವ್ಯಾಪ್ತಿಯ 34 ಪ್ರೌಢಶಾಲೆಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 106 ವಿದ್ಯಾರ್ಥಿಗಳಿಗೆ ತಲಾ ₹25,000 ಪ್ರೋತ್ಸಾಹಧನ ನೀಡಿ ಗೌರವಿಸಲಾಗುವುದು ಎಂದು ತಿಳಿಸಲಾಗಿದೆ.
ಮುಖ್ಯ ಆಯುಕ್ತರಿಂದ ಅಭಿನಂದನೆ
ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
