Home ಬೆಂಗಳೂರು ನಗರ ಜಾಗತಿಕ ಹೂಡಿಕೆದಾರರ ಸಮಾವೇಶ : ಸಚಿವ ಎಂ.ಬಿ.ಪಾಟೀಲ್ ಯೂರೋಪ್ ಪ್ರವಾಸ

ಜಾಗತಿಕ ಹೂಡಿಕೆದಾರರ ಸಮಾವೇಶ : ಸಚಿವ ಎಂ.ಬಿ.ಪಾಟೀಲ್ ಯೂರೋಪ್ ಪ್ರವಾಸ

2
0

1304488 mb pateel

ಲಂಡನ್ : ಮುಂಬರುವ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ 15 ದಿನಗಳ ಯೂರೋಪ್ ಪ್ರವಾಸ ಕೈಗೊಂಡಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮೊದಲ ದಿನವಾದ ಗುರುವಾರ ಸ್ಮಿತ್ ಗ್ರೂಪ್ ಜತೆ ಬಂಡವಾಳ ಹೂಡಿಕೆ ಕುರಿತು ಲಂಡನ್ ನಲ್ಲಿ ಮಾತುಕತೆ ನಡೆಸಿದ್ದಾರೆ. ಜತೆಗೆ ಆಲ್ಕೋಬೇವ್ (ಮದ್ಯ ತಯಾರಿಕೆ) ವಲಯದ ಕಂಪನಿಗಳ ಜತೆಯೂ ಅವರು ದುಂಡುಮೇಜಿನ ಸಭೆ ನಡೆಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಸ್ಮಿತ್ ಗ್ರೂಪ್ ಕರ್ನಾಟಕದಲ್ಲಿ ದೀರ್ಘಾವಧಿ ಹೂಡಿಕೆ ಮಾಡಲು ಮತ್ತು ತನ್ನ ಉತ್ಪಾದನಾ ಚಟುವಟಿಕೆಗಳನ್ನು ವಿಸ್ತರಿಸಲು ಒಲವು ವ್ಯಕ್ತಪಡಿಸಿದೆ ಎಂದು ತಿಳಿಸಿದ್ದಾರೆ.

ಏರೋಸ್ಪೇಸ್ ಮತ್ತು ರಕ್ಷಣಾ ವಲಯ ಸೇರಿದಂತೆ ಹಲವು ವಲಯಗಳಲ್ಲಿ ಸಕ್ರಿಯವಾಗಿರುವ ಸ್ಮಿತ್ ಗ್ರೂಪ್, ತನ್ನ ವೆಟ್ ಸೀಲ್ ಜೋಡಣೆ ಚಟುವಟಿಕೆಗಳನ್ನು ಥಾಯ್ಲೆಂಡಿನಿಂದ ಬೆಂಗಳೂರಿಗೆ ಸ್ಥಳಾಂತರಿಸಲು ತೀರ್ಮಾನಿಸಿದೆ. ಅದು ಬೆಂಗಳೂರಿನಲ್ಲಿ ಈಗಾಗಲೇ 600 ಉದ್ಯೋಗಿಗಳನ್ನು ಹೊಂದಿದೆ. ಜತೆಗೆ ಕಂಪನಿಯು ತನ್ನ ಹೂಡಿಕೆ ಯೋಜನೆಗೆ ಬೆಂಗಳೂರನ್ನು ಸೂಕ್ತ ತಾಣವೆಂದು ಪುನರುಚ್ಚರಿಸಿದ್ದು, ಹೆಚ್ಚುವರಿ ಬಂಡವಾಳ ತೊಡಗಿಸಲಿದೆ ಎಂದು ಅವರು ಹೇಳಿದ್ದಾರೆ.

ಸ್ಮಿತ್ ಗ್ರೂಪ್ ಕಂಪನಿಯು ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಬೆಂಗಳೂರಿನಲ್ಲಿ ಗ್ರಾಹಕರನ್ನು ಹೊಂದಿದೆ. ತಾನು ಯೂರೋಪ್ ಮತ್ತು ಅಮೆರಿಕದಲ್ಲಿ ನಡೆಸುತ್ತಿರುವ ಟೈಟ್ ಫ್ಲೆಕ್ಸ್ ಕಾರ್ಯಾಚರಣೆಗಳ ಸ್ವಲ್ಪ ಭಾಗವನ್ನು ಬೆಂಗಳೂರಿಗೆ ವರ್ಗಾಯಿಸಲಿದ್ದು, ಇದಕ್ಕೆ ಅಗತ್ಯವಿರುವ ಬಂಡವಾಳವನ್ನು ಹೂಡಲಿದೆ. ಇದರಿಂದಾಗಿ ರಾಜ್ಯದಲ್ಲಿ ಈ ವಲಯದ ಉತ್ಪಾದನೆ ಹೆಚ್ಚಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಮಾತುಕತೆಯಲ್ಲಿ ಸ್ಮಿತ್ ಗ್ರೂಪ್ನ ಉನ್ನತಾಧಿಕಾರಿ ಶ್ರೀಮತಿ ಕಿಣಿ ಪದ್ಮನಾಥನ್ ಉಪಸ್ಥಿತರಿದ್ದರು.

ಆಲ್ಕೋಬೇವ್ ಕಂಪನಿಗಳೊಂದಿಗೆ ನಡೆಸಿದ ಮಾತುಕತೆಯಲ್ಲಿ ಡಯಾಜಿಯೋ, ಪೆರ್ನಾಡ್ ರಿಕಾರ್ಡ್ ಮತ್ತು ಬಕಾರ್ಡಿ ಕಂಪನಿಯ ಪ್ರತಿನಿಧಿಗಳು ಮತ್ತು ಯುಕೆಐಬಿಸಿ ಹಾಗೂ ಬ್ರಿಟಿಷ್ ಡೆಪ್ಯುಟಿ ಹೈಕಮಿಷನ್ ಕಚೇರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಕಂಪನಿಗಳು ಭಾರತದ ತಮ್ಮ ಕಾರ್ಯ ಚಟುವಟಿಕೆಗಳಿಗೆ ಕರ್ನಾಟಕವು ಪ್ರಮುಖ ರಾಜ್ಯವಾಗಿದ್ದು, ಇಲ್ಲಿಯ ಗ್ರಾಹಕ ನೆಲೆ ಮತ್ತು ಉದ್ಯಮ ಕಾರ್ಯ ಪರಿಸರ ಅತ್ಯುತ್ತಮವಾಗಿದೆ ಎಂದು ಮೆಚ್ಚುಗೆ ಸೂಚಿಸಿದವು. ಜತೆಗೆ ರಾಜ್ಯವು ಇತ್ತೀಚೆಗೆ ಕೈಗೊಂಡಿರುವ ತೆರಿಗೆ ಸುಧಾರಣೆಯು ಆಲ್ಕೋಬೇವ್ ವಲಯಕ್ಕೆ ಉಪಯುಕ್ತವಾಗಿದ್ದು, ಸುಗಮ ವಹಿವಾಟು ಸಂಸ್ಕೃತಿಯನ್ನು ವಿಸ್ತರಿಸುವಂತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿವೆ ಎಂದು ಪಾಟೀಲ್ ತಿಳಿಸಿದ್ದಾರೆ.

ಆಲ್ಕೋಬೇವ್ ಕಂಪನಿಗಳು ರಾಜ್ಯದಲ್ಲಿ ದೀರ್ಘಾವಧಿ ಹೂಡಿಕೆಗೆ ಮತ್ತು ಉತ್ಪಾದನೆ ವಿಸ್ತರಣೆಗೆ ತಮ್ಮ ಬದ್ಧತೆ ವ್ಯಕ್ತಪಡಿಸಿವೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಈ ವಲಯವು ಮತ್ತಷ್ಟು ಬೆಳವಣಿಗೆ ಸಾಧಿಸುವುದು ನಿಚ್ಚಳವಾಗಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಯೂರೋಪಿಗೆ ತೆರಳಿರುವ ರಾಜ್ಯ ಸರಕಾರದ ನಿಯೋಗದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಮುಂತಾದವರಿದ್ದಾರೆ.

LEAVE A REPLY

Please enter your comment!
Please enter your name here