ಬೆಂಗಳೂರು: ಐಷಾರಾಮಿ ಪ್ರವಾಸಿ ರೈಲು ಗೋಲ್ಡನ್ ಚಾರಿಯಟ್ನ 2026–27ನೇ ಸಾಲಿನ ಪ್ರವಾಸಗಳು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಆರಂಭವಾಗಿವೆ. ಋತುವಿನ ಮೊದಲ “ಪ್ರೈಡ್ ಆಫ್ ಕರ್ನಾಟಕ” ಯಾನ ಸಂಪೂರ್ಣವಾಗಿ ಭರ್ತಿಯಾಗಿದ್ದು, 75 ಅತಿಥಿಗಳು ಪ್ರಯಾಣಿಸುತ್ತಿದ್ದಾರೆ.
ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ಉಪಸ್ಥಿತಿಯಲ್ಲಿ ಡಿ.ಕೆ. ಶಿವಕುಮಾರ್ ರೈಲಿಗೆ ಹಸಿರು ನಿಶಾನೆ ತೋರಿದರು. ಈ ಋತುವಿನಲ್ಲಿ ಒಟ್ಟು 13 ಯಾನಗಳನ್ನು ಹಮ್ಮಿಕೊಳ್ಳಲಾಗಿದೆ.

ಗೋಲ್ಡನ್ ಚಾರಿಯಟ್ ಮೊದಲ ಯಾನ ಸಂಪೂರ್ಣ ಭರ್ತಿ
ಈ ಪ್ರವಾಸದಲ್ಲಿ ಅತಿಥಿಗಳು ಕರ್ನಾಟಕದ ಪರಂಪರೆ, ವನ್ಯಜೀವಿ ಸಂಪತ್ತು, ಪ್ರಕೃತಿ ಸೌಂದರ್ಯ ಮತ್ತು ಸಾಂಸ್ಕೃತಿಕ ವೈವಿಧ್ಯವನ್ನು ಪರಿಚಯಿಸಿಕೊಳ್ಳಲಿದ್ದಾರೆ. ಐಷಾರಾಮಿ ಪ್ರವಾಸೋದ್ಯಮದ ಮೂಲಕ ರಾಜ್ಯದ ಶ್ರೀಮಂತ ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವ ಪ್ರಯತ್ನದ ಭಾಗವಾಗಿ ಈ ಸೇವೆ ನಡೆಯುತ್ತಿದೆ ಎಂದು ಶಿವಕುಮಾರ್ ತಿಳಿಸಿದರು.
ಪ್ರವಾಸೋದ್ಯಮದೊಂದಿಗೆ ಸ್ಥಳೀಯ ಉದ್ಯೋಗಕ್ಕೂ ಒತ್ತು
ಕರ್ನಾಟಕವನ್ನು ಜಾಗತಿಕ ಪ್ರವಾಸೋದ್ಯಮದ ಪ್ರಮುಖ ತಾಣವನ್ನಾಗಿಸುವುದು ಉದ್ದೇಶವಾಗಿದೆ. ಪ್ರವಾಸೋದ್ಯಮದ ಬೆಳವಣಿಗೆಯೊಂದಿಗೆ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ, ರಾಜ್ಯದ ಆರ್ಥಿಕ ಪ್ರಗತಿಗೆ ವೇಗ ನೀಡುವ ಬದ್ಧತೆಯನ್ನು ಅವರು ವ್ಯಕ್ತಪಡಿಸಿದರು.
