Home Uncategorized Good News: ಜಾಗತಿಕ ಕಂಪನಿಗಳಲ್ಲಿ ಉದ್ಯೋಗ ಕಡಿತದ ನಡುವೆ ಭಾರತದ ಸ್ಟಾರ್ಟಪ್​ಗಳಲ್ಲಿ 2.3 ಲಕ್ಷ ಉದ್ಯೋಗ...

Good News: ಜಾಗತಿಕ ಕಂಪನಿಗಳಲ್ಲಿ ಉದ್ಯೋಗ ಕಡಿತದ ನಡುವೆ ಭಾರತದ ಸ್ಟಾರ್ಟಪ್​ಗಳಲ್ಲಿ 2.3 ಲಕ್ಷ ಉದ್ಯೋಗ ಸೃಷ್ಟಿ

2
0
bengaluru

ನವದೆಹಲಿ: ಜಾಗತಿಕ ಮಟ್ಟದ ದೈತ್ಯ ಕಂಪನಿಗಳು ಉದ್ಯೋಗ ಕಡಿತ (Layoffs), ಉದ್ಯೋಗಿಗಳ ವಜಾ ಮೊರೆ ಹೋಗುತ್ತಿದ್ದರೆ ಈ ವರ್ಷ ಭಾರತದ ಸ್ಟಾರ್ಟಪ್​​ಗಳು (Indian Start-Ups) 2,30,000 ಉದ್ಯೋಗ ಸೃಷ್ಟಿಸಿವೆ ಎಂದು ಹಣಕಾಸು ಸೇವಾ ಸಂಸ್ಥೆ ‘ಸ್ಟ್ರೈಡ್​ವನ್’ ವರದಿ ತಿಳಿಸಿದೆ. 2017-22 ಅವಧಿಯಲ್ಲಿ ಸ್ಟಾರ್ಟಪ್​ಗಳ ವಾರ್ಷಿಕ ಬೆಳವಣಿಗೆ ದರ (CAGR) ಶೇಕಡಾ 78ರಷ್ಟು ಹೆಚ್ಚಳವಾಗಿದೆ. 2022-27ರ ಅವಧಿಯಲ್ಲಿ ಇನ್ನೂ ಶೇಕಡಾ 24ರಷ್ಟು ಹೆಚ್ಚಾಗಲಿದೆ. ಡಿಜಿಟಲ್ ಆರ್ಥಿಕತೆ ರೂಪಿಸುವ ನಿಟ್ಟಿಲ್ಲಿ ಕೇಂದ್ರ ಸರ್ಕಾರ ನೀಡುತ್ತಿರುವ ಪ್ರೋತ್ಸಾಹವು 2025ರ ವೇಳೆಗೆ ಉದ್ಯೋಗಾವಕಾಶವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದೂ ವರದಿ ತಿಳಿಸಿದೆ.

ಭಾರತದ ಸ್ಟಾರ್ಟಪ್​ ವ್ಯವಸ್ಥೆಯು ಜಗತ್ತಿನಲ್ಲೇ ಮೂರನೇ ಸ್ಥಾನದಲ್ಲಿದೆ. ಮೊದಲ ಸ್ಥಾನಗಳಲ್ಲಿ ಅಮೆರಿಕ ಮತ್ತು ಚೀನಾ ಇವೆ. ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ ಅಂಕಿಅಂಶದ ಪ್ರಕಾರ, ದೇಶದಲ್ಲಿ 7,70,000 ಸ್ಟಾರ್ಟಪ್​ಗಳಿವೆ. 108 ಯೂನಿಕಾರ್ನ್​​ಗಳನ್ನು ಒಳಗೊಂಡಂತೆ ದೇಶದ ಸ್ಟಾರ್ಟಪ್​ಗಳ ಮೌಲ್ಯ ಸುಮಾರು 400 ಶತಕೋಟಿ ಡಾಲರ್ ಇದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಪಾಶ್ಚಾತ್ಯ ದೇಶಗಳ ಆರ್ಥಿಕ ಹಿಂಜರಿತ ಭಾರತಕ್ಕೆ ಹೂಡಿಕೆದಾರರನ್ನು ಸೆಳೆಯಲು ಅವಕಾಶ; ನಿರ್ಮಲಾ ಸೀತಾರಾಮನ್

ದೇಶದಲ್ಲಿ ಸ್ಟಾರ್ಟಪ್ ವ್ಯವಸ್ಥೆಯು ಅನೇಕ ಅವಕಾಶಗಳ ಸೃಷ್ಟಿಗೆ ಪೂರಕವಾಗಿದ್ದು ಪರ್ಯಾಯ ಫಂಡಿಂಗ್ ಆಯ್ಕೆಗಳು, ಜಾಗತಿಕ ಮಾರುಕಟ್ಟೆ ವಿಸ್ತರಣೆ ಇತ್ಯಾದಿಗಳಿಗೆ ಅನುಕೂಲಕರವಾಗಿದೆ. ಇದರಿಂದ ಲಕ್ಷಾಂತರ ಉದ್ಯೋಗ ಸೃಷ್ಟಿಯ ಸಾಮರ್ಥ್ಯವೂ ವೃದ್ಧಿಯಾಗಿದೆ ಎಂದು ‘ಸ್ಟ್ರೈಡ್​ವನ್’ ಸ್ಥಾಪಕ ಇಶ್​ಪ್ರೀತ್ ಸಿಂಗ್ ಗಾಂಧಿ ಹೇಳಿದ್ದಾರೆ.

bengaluru

ಜಿಡಿಪಿಗೆ ಶೇಕಡಾ 4-5 ಕೊಡುಗೆ

ದೇಶದ ಆರ್ಥಿಕತೆ ಮೇಲೆ ಸ್ಟಾರ್ಟಪ್​​ಗಳು ಗಮನಾರ್ಹ ಪರಿಣಾಮ ಬೀರಿವೆ. ಇವುಗಳ ಮುಂದಿನ 5 ವರ್ಷಗಳಲ್ಲಿ ದೇಶದ ಜಿಡಿಪಿಗೆ ಅಂದಾಜು ಶೇಕಡಾ 4-5 ಕೊಡುಗೆ ನೀಡಲಿವೆ ಎಂದು ಇಶ್​ಪ್ರೀತ್ ಸಿಂಗ್ ಗಾಂಧಿ ಹೇಳಿದ್ದಾರೆ. ಸ್ಟಾರ್ಟಪ್​​ಗಳು ಈ ವರ್ಷ ಗಣನೀಯ ಪ್ರಮಾಣದ ಉದ್ಯೋಗ ಸೃಷ್ಟಿ ಮಾಡಿವೆ ಎಂದೂ ಅವರು ಹೇಳಿದ್ದಾರೆ.

ಬೈಜೂಸ್, ಅನ್​ಅಕಾಡೆಮಿ, ಓಯೊ, ಓಲಾ ಸೇರಿದಂತೆ ಕೆಲವೊಂದು ಸ್ಟಾರ್ಟಪ್​ಗಳಲ್ಲಿ ಉದ್ಯೋಗ ಕಡಿತ ಮಾಡುತ್ತಿರುವ ಮಧ್ಯೆಯೇ ಈ ವರದಿ ಪ್ರಕಟವಾಗಿದೆ. ಜಾಗತಿಕ ಮಟ್ಟದಲ್ಲಿ ಟೆಕ್ ಕಂಪನಿಗಳು ಆರ್ಥಿಕ ಹಿಂಜರಿತದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಉದ್ಯೋಗಿಗಳ ವಜಾ ಮೊರೆ ಹೋಗಿವೆ. ಮೆಟಾ, ಅಮೆಜಾನ್, ಟ್ವಿಟರ್, ಮೈಕ್ರೋಸಾಫ್ಟ್ ಸೇರಿದಂತೆ ಅನೇಕ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿವೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

bengaluru

LEAVE A REPLY

Please enter your comment!
Please enter your name here