₹10 ಮತ್ತು ₹20 ಪಾಲಿಮರ್ ಬ್ಯಾಂಕ್ನೋಟ್ಗಳ ಕ್ಷೇತ್ರ ಪರೀಕ್ಷೆಗೆ ಕೇಂದ್ರ ಸರ್ಕಾರದ ಅನುಮೋದನೆ
ನವದೆಹಲಿ: ₹10 ಮತ್ತು ₹20 ಮುಖಬೆಲೆಯ ತಲಾ ಒಂದು ಬಿಲಿಯನ್ ಪಾಲಿಮರ್ ಬ್ಯಾಂಕ್ನೋಟ್ಗಳ ಕ್ಷೇತ್ರ ಪರೀಕ್ಷೆಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಗೆ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಕೇಳಲಾದ ಅತಾರಾಂಕಿತ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು, ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆ, 1934ರ ಸೆಕ್ಷನ್ 25ರ ಅನ್ವಯ ಆರ್ಬಿಐ ಈ ಪ್ರಸ್ತಾವನೆ ಸಲ್ಲಿಸಿತ್ತು ಎಂದು ಹೇಳಿದ್ದಾರೆ. ಕ್ಷೇತ್ರ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ₹10 ಮತ್ತು ₹20 ಮುಖಬೆಲೆಯ ಪಾಲಿಮರ್ ಬ್ಯಾಂಕ್ನೋಟ್ಗಳನ್ನು ನಿಯಮಿತವಾಗಿ ಚಲಾವಣೆಗೆ ತರಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಅಧ್ಯಯನಗಳ ಪ್ರಕಾರ ಪಾಲಿಮರ್ ಬ್ಯಾಂಕ್ನೋಟ್ಗಳ ಆಯುಷ್ಯ ಕಾಗದದ ಬ್ಯಾಂಕ್ನೋಟ್ಗಳಿಗಿಂತ ಗಮನಾರ್ಹವಾಗಿ ಹೆಚ್ಚು ಎಂದು ಆರ್ಬಿಐ ತಿಳಿಸಿದೆ. ಪಾಲಿಮರ್ ಬ್ಯಾಂಕ್ನೋಟ್ಗಳ ಪರಿಚಯ ಪ್ರಸ್ತುತ ಆರಂಭಿಕ ಹಂತದಲ್ಲಿದ್ದು, ಡಿಜಿಟಲ್ ಪಾವತಿಗಳ ಮೇಲೆ ಇದರ ಪರಿಣಾಮ ಏನಾದರೂ ಇದ್ದರೆ ಅದು ನಿಯಮಿತ ಚಲಾವಣೆ ಆರಂಭವಾದ ನಂತರವೇ ಅಂದಾಜಿಸಲು ಸಾಧ್ಯವಾಗುತ್ತದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ. ಬ್ಯಾಂಕ್ನೋಟ್ಗಳು ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಗಳು ಸಾರ್ವಜನಿಕರಿಗೆ ಪರಸ್ಪರ ಪೂರಕ ಪಾವತಿ ಸಾಧನಗಳಾಗಿವೆ ಎಂದೂ ಹೇಳಲಾಗಿದೆ.
ಅಸ್ತಿತ್ವದಲ್ಲಿರುವ ಕಾಗದದ ಕರೆನ್ಸಿಯನ್ನು ಸಂಪೂರ್ಣವಾಗಿ ಪಾಲಿಮರ್ ಬ್ಯಾಂಕ್ನೋಟ್ಗಳಿಂದ ಬದಲಾಯಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಆರ್ಬಿಐ ಪ್ರಕಾರ, ಪಾಲಿಮರ್ ಬ್ಯಾಂಕ್ನೋಟ್ಗಳನ್ನು ಕಾಗದದ ಬ್ಯಾಂಕ್ನೋಟ್ಗಳ ಜೊತೆಯಲ್ಲೇ ಚಲಾವಣೆಗೆ ತರಲಾಗುತ್ತದೆ.
