Home ರಾಜಕೀಯ ರಾಜ್ಯಪಾಲರ ಭಾಷಣ ಕಳಪೆ, ಸುಳ್ಳಿನ ಕಂತೆ : ಸಿದ್ದರಾಮಯ್ಯ

ರಾಜ್ಯಪಾಲರ ಭಾಷಣ ಕಳಪೆ, ಸುಳ್ಳಿನ ಕಂತೆ : ಸಿದ್ದರಾಮಯ್ಯ

49
0

ಬೆಂಗಳೂರು :

ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಇಂದು ಮಾಡಿದ ಭಾಷಣ ಸುಳ್ಳಿನ ಕಂತೆ. ರಾಜ್ಯದ ಇತಿಹಾಸದಲ್ಲಿಯೇ ಇಂತಹ ಕಳಪೆ ಭಾಷಣವನ್ನು ಕೇಳಿರಲಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರದ ಸಾಧನೆ ಶೂನ್ಯ. ಹೀಗಾಗಿ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಸರ್ಕಾರದ ಸಾಧನೆಗಳನ್ನು ಹೇಳಿಯೇ ಇಲ್ಲ. ಕೇವಲ ಸುಳ್ಳುಗಳ ಸರಮಾಲೆಯನ್ನು ಸರ್ಕಾರ ರಾಜ್ಯಪಾಲರ ಮೂಲಕ ಹೇಳಿಸಿದೆ ಎಂದರು.

ಸರ್ಕಾರದ ನಿಲುವು, ಯೋಜನೆಗಳು, ಮುನ್ನೋಟದ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಸ್ಪಷ್ಟತೆ ಇರಬೇಕು. ಆದರೆ, ರಾಜ್ಯಪಾಲರು ಇಂದು ಮಾಡಿದ ಭಾಷಣದಲ್ಲಿ ಆ ಯಾವುದೂ ಇಲ್ಲ. ಇದೊಂದು ಸುಳ್ಳಿನ ಕಂತೆ. ರಾಜ್ಯಪಾಲರ ಮೂಲಕ ಸರ್ಕಾರ ಸುಳ್ಳು ಹೇಳಿಸಿದೆ. ರಾಜ್ಯಪಾಲರು ಹೇಳಿದ ಸರ್ಕಾರದ ಸಾಧನೆಗಳೆಲ್ಲವೂ ನಮ್ಮ ಅವಧಿಯಲ್ಲಿ ಆಗಿರುವಂಥದ್ದು. ಈ ಸರ್ಕಾರದ ನಿರ್ಧಿಷ್ಟ ಸಾಧನೆಗಳು ಏನೂ ಇಲ್ಲ. ರಾಜ್ಯಪಾಲರ ಭಾಷಣದಲ್ಲಿ ಗೊತ್ತು, ಗುರಿ ಎಂಬುದೇ ಇಲ್ಲ.

WhatsApp Image 2021 01 28 at 09.45.39

ಯಾವುದೇ ಸರ್ಕಾರಕ್ಕೆ ಒಂದು ದೂರದೃಷ್ಟಿ ಇರಬೇಕು. ಈ ಸರ್ಕಾರದ ಅವಧಿ ಇನ್ನೂ ಎರಡೂವರೆ ವರ್ಷ ಇದೆ. ಈ ಅವಧಿಯಲ್ಲಿ ನಾವು ಏನು ಮಾಡಲಿದ್ದೇವೆ ಎಂಬುದನ್ನು ಹೇಳಬೇಕಿತ್ತು. ರಾಜ್ಯದ ಹಣಕಾಸು ಪರಿಸ್ಥಿತಿ, ನೀರಾವರಿ ಯೋಜನೆಗಳ ಕುರಿತು ಭಾಷಣದಲ್ಲಿ ಪ್ರಸ್ತಾಪ ಮಾಡಿಲ್ಲ.

ರಾಜ್ಯ ಅಭಿವೃದ್ಧಿಯಲ್ಲಿ ಹತ್ತು ವರ್ಷ ಹಿಂದಕ್ಕೆ ಹೋಗಿದೆ. ಎಲ್ಲದಕ್ಕೂ ಸರ್ಕಾರ ಕೊರೊನಾ ನೆಪ ಹೇಳುತ್ತಿದೆ. ಹಣಕಾಸು ಪರಿಸ್ಥಿತಿ ಹದಗೆಡಲು, ಅಭಿವೃದ್ಧಿ ಕಾರ್ಯ ಕುಂಠಿತಗೊಳ್ಳಲು, ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಬಿಡುಗಡೆ ಮಾಡದಿರಲು ಕೊರೊನಾ ಕಾರಣ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ.

ಬಿಜೆಪಿ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾಗಿದೆ. ಈ ಅವಧಿಯಲ್ಲಿನ ಯೋಜನೆ, ಕಾರ್ಯಕ್ರಮಗಳು, ಮುನ್ನೋಟ, ದೂರದೃಷ್ಟಿ ಏನು ಎಂಬುದರ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಏನೂ ಹೇಳಿಲ್ಲ. ಕಾರಣ, ಸರ್ಕಾರದ ಸಾಧನೆ ಶೂನ್ಯ. ಇದು ಸತ್ಯಕ್ಕೆ ದೂರವಾದ ಭಾಷಣ.

ಉತ್ತರ ಕರ್ನಾಟಕ ಜನರಿಗೆ ದ್ರೋಹ :

ಉತ್ತರ ಕರ್ನಾಟಕದ ಬಗ್ಗೆ ಬಿಜೆಪಿಯವರು ಬಹಳ ಮಾತನಾಡುತ್ತಾರೆ. ಉತ್ತರ ಕರ್ನಾಟಕಕ್ಕೆ ಬಹಳ ಅನ್ಯಾಯವಾಗಿದೆ ಎಂದು ಸಚಿವರಾದ ಉಮೇಶ್ ಕತ್ತಿಯವರೇ ಆಗಾಗ ಹೇಳುತ್ತಿದ್ದರು. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಬೆಳಗಾವಿಯಲ್ಲಿ ಸುವರ್ಣ ಸೌಧ ಕಟ್ಟಿಸಿದ್ದು ಏಕೆ ? ಈ ಸರ್ಕಾರ ಇದುವರೆಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಿಲ್ಲ. ಜಂಟಿ ಅಧಿವೇಶನವನ್ನೇ ಬೆಳಗಾವಿಯಲ್ಲಿ ಕರೆಯಬೇಕಿತ್ತು. ಹೀಗಿರುವಾಗ ಉತ್ತರ ಕರ್ನಾಟಕದ ಜನತೆಗೆ ಯಾವ ರೀತಿ ಇವರು ಮುಖ ತೋರಿಸುತ್ತಾರೆ.

WhatsApp Image 2021 01 28 at 12.48.59

ನಮ್ಮ ಅವಧಿಯಲ್ಲಿ ಪ್ರತಿ ವರ್ಷವೂ ಅಲ್ಲಿ ಹತ್ತು ದಿನಗಳ ಕಾಲ ಅಧಿವೇಶನ ನಡೆಸಿದ್ದೇವೆ. ಸುವರ್ಣ ಸೌಧ ಕಟ್ಟಿಸಿದ ಉದ್ದೇಶವಾದರೂ ಏನು ? ಸರ್ಕಾರಿ ಕಚೇರಿಗಳನ್ನು ಅಲ್ಲಿಗೆ ಸ್ಥಳಾಂತರ ಮಾಡುತ್ತೇವೆ. ಉತ್ತರ ಕರ್ನಾಟಕವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದವರು ಈಗ ಅಧಿವೇಶನ ನಡೆಸಲು ತಯಾರಿಲ್ಲ. ಇದು ಉತ್ತರ ಕರ್ನಾಟಕದ ಜನತೆಗೆ ಮಾಡಿರುವ ದ್ರೋಹ. ಹೀಗಾಗಿ ರಾಜ್ಯಪಾಲರ ಭಾಷಣದ ಸಂದರ್ಭದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದೇವೆ. ವರ್ಷಕ್ಕೆ ಒಮ್ಮೆಯಾದರೂ ಬೆಳಗಾವಿಯಲ್ಲಿ ಅಧಿವೇಶನ ನಡೆಯಲೇಬೇಕು. ಇದು ನಮ್ಮ ಆಗ್ರಹ.

ಮಹಾ ಸಿಎಂ ಉದ್ಧಟತನ ಸಹಿಸುವುದಿಲ್ಲ :

ಮಹಾರಾಷ್ಟ್ರ ಸಿಎಂ ಉದ್ಘಟತನ ಪ್ರದರ್ಶನ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಅವರು ಜವಾಬ್ದಾರಿಯಿಂದ ಮಾತನಾಡಬೇಕು. ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ನಮಗೆ ಬೆಳಗಾವಿ ಕರ್ನಾಟಕದ ಭಾಗ. ಆ ಕುರಿತು ಯಾವುದೇ ವಿವಾದವೇ ಇಲ್ಲ. ಬೆಳಗಾವಿ ನಮ್ಮದು ಎಂಬುದು ಈಗಾಗಲೇ ತೀರ್ಮಾನವಾಗಿದೆ. ಅವರ ಉಳಿವಿಗೆ, ರಾಜಕೀಯ ಕಾರಣಕ್ಕೆ ಪದೇ ಪದೇ ಮಹಾರಾಷ್ಟ್ರ ಸಿಎಂ ಈ ವಿಷಯ ಕೆಣಕುತ್ತಾರೆ. ಇದು ಖಂಡನೀಯ. ಮಹಾರಾಷ್ಟ್ರ ಸಿಎಂ ಅವರ ಉದ್ಧಟನತ ವರ್ತನೆಯನ್ನು ಕನ್ನಡಿಗರು ಸಹಿಸುವುದಿಲ್ಲ.

ಪಕ್ಷಗಳ ಬಣ್ಣ ಬಯಲಾಗಲಿ :

ವಿಧಾನ ಪರಿಷತ್ ಉಪ ಸಭಾಪತಿ ಚುನಾವಣೆಗೆ ನಮ್ಮ ಅಭ್ಯರ್ಥಿ ಕಣಕ್ಕಿಳಿಸುತ್ತೇವೆ. ಆತ್ಮಸಾಕ್ಷಿ ಮತಗಳು ನಮಗೆ ಸಿಗಲಿವೆ ಎಂಬ ವಿಶ್ವಾಸವಿದೆ. ಜೆಡಿಎಸ್‍ನವರು ನಾವು ಜಾತ್ಯಾತೀತವಾದಿಗಳು ಎಂದು ಹೇಳಿಕೊಂಡು ಎಲ್ಲೆಡೆ ತಮಟೆ ಬಾರಿಸುತ್ತಾರೆ.

ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ರಾಹುಲ್ ಗಾಂಧಿಯವರ ಮೂಲಕ ಸಿದ್ದರಾಮಯ್ಯ ಹೇಳಿಸಿದರು ಎಂದು ಜೆಡಿಎಸ್ ಮುಖಂಡರು ನನ್ನ ವಿರುದ್ಧ ಆರೋಪ ಮಾಡುತ್ತಾರೆ.

ಯಾವ ರಾಜಕೀಯ ಪಕ್ಷಗಳ ನಿಲುವು ಏನು ? ಅವರ ಬಣ್ಣ ಯಾವ ರೀತಿ ಬಯಲಾಗುತ್ತದೆ ಎಂಬುದನ್ನು ನೋಡಬೇಕಲ್ಲವೇ ? ಹೀಗಾಗಿ ಉಪಸಭಾಪತಿ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧಾರ ಮಾಡಿದ್ದೇವೆ.

ವಿಶ್ವನಾಥ್ ಅವರು ಮಂತ್ರಿಯಾಗಲು ಅನರ್ಹ ಎಂದು ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಈ ಮೂಲಕ ನ್ಯಾಯಾಲಯ ಕಾನೂನು, ಸಂವಿಧಾನದ ವಿಧಿ ವಿಧಾನ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

LEAVE A REPLY

Please enter your comment!
Please enter your name here