ಹಾನಗಲ್:
ಹಾನಗಲ್ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿ ಕಮಲದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ 2023ರ ಚುನಾವಣೆಗೆ ಇಲ್ಲಿನ ಮತದಾರರು ಮುನ್ನುಡಿ ಬರೆಯಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹಾನಗಲ್ ಮತ ಕ್ಷೇತ್ರದ ಹೊಂಕಣ ಗ್ರಾಮದಲ್ಲಿ ಅವರು ರೋಡ್ ಶೋದಲ್ಲಿ ಮಾತನಾಡಿದರು.
ಇತ್ತೀಚೆಗೆ ವಿಧಾನಸೌಧಕ್ಕೆ ಸಿದ್ದರಾಮಯ್ಯನವರು ಹಾಗೂ ಡಿಕೆ ಶಿವಕುಮಾರ್ ಚಕ್ಕಡಿ ಏರಿ ಬಂದಿದ್ದರು. ಹಗ್ಗ ಸಿದ್ದರಾಮಯ್ಯ ಕೈಯ್ಯಲ್ಲಿ. ಬಾರಿಕೋಲು ಡಿಕೆಶಿ ಕೈಯಲ್ಲಿ. ಇವರಿಬ್ಬರ ಎಳೆದಾಟದಲ್ಲಿ ಚಕ್ಕಡಿಯಲ್ಲಿ ಇದ್ದ ಶಾಸಕರು ಕೆಳಗೆ ದಬದಬನೆ ಕೆಳಗೆ ಬಿದ್ದರು.
ಇದೇ ರೀತಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು 2023ರ ಚುನಾವಣೆಯಲ್ಲಿ ದಬದಬನೇ ಬೀಳುತ್ತಾರೆ. ಇದು ಟ್ರೇಲರ್ ಮಾತ್ರ. ಹಾನಗಲ್ ಕ್ಷೇತ್ರದಿಂದ ಕಾಂಗ್ರೆಸ್ ಸೋಲು ಆರಂಭವಾಗಲಿದೆ. ಕಾಂಗ್ರೆಸ್ ಸೋಲಿನ ಮುನ್ನುಡಿ ಹಾನಗಲ್ ನಿಂದ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭವಿಷ್ಯ ನುಡಿದರು.
ಹಾನಗಲ್ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸಿಎಂ ಉದಾಸಿ ಅವರು ಅವಿರತವಾಗಿ ಶ್ರಮಿಸಿದ್ದಾರೆ. ಕೆರೆ ತುಂಬಿಸುವ ಯೋಜನೆ, ಏತ ನೀರಾವರಿ, ಕಾಲೇಜು, ಬಸ್ ನಿಲ್ದಾಣ ಎಲ್ಲ ಬಗೆಯ ಅಭಿವೃದ್ಧಿ ಮಾಡಿದ್ದಾರೆ. ಹಾನಗಲ್ ಕ್ಷೇತ್ರದ ಜನರ ನಾಡಿಮಿಡಿತ ಅರ್ಥಮಾಡಿಕೊಂಡು 38 ವರ್ಷಗಳ ಕಾಲ ರಾಜಕೀಯ ಮಾಡಿದ್ದಾರೆ. ಅವರ ರಾಜಕೀಯ ಜೀವನ ಹಾನಗಲ್ ಕ್ಷೇತ್ರದ ಅಭಿವೃದ್ಧಿಗಾಗಿ ಮುಡಿಪಾಗಿಟ್ಟಿದ್ದರು. ಅವರ ಅಕಾಲಿಕ ನಿಧನದ ನಂತರ ಉಪಚುನಾವಣೆ ಎದುರಾಗಿದೆ. ಹಾನಗಲ್ ನಲ್ಲಿ ಸಿಎಂ ಉದಾಸಿ ಅವರು ಆರಂಭ ಮಾಡಿದ ಅಭಿವೃದ್ಧಿಯ ಪರ್ವ ಮುಂದುವರೆಯಬೇಕಾದರೆ ಶಿವರಾಜ್ ಸಜ್ಜನ್ ಅವರನ್ನು ನೀವೆಲ್ಲರೂ ಸೇರಿ ಪ್ರಚಂಡ ಬಹುಮತದಿಂದ ಆಯ್ಕೆ ಮಾಡಿ ಕಾಂಗ್ರೆಸ್ಸನ್ನು ಮನೆಗೆ ಕಳಿಸಬೇಕು ಎಂದು ಕರೆ ನೀಡಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಹಾನಗಲ್ ಕ್ಷೇತ್ರ ಅಭಿವೃದ್ಧಿಯಾಗಿದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಕಾಂಗ್ರೆಸ್ಸಿನವರು ಅಭಿವೃದ್ಧಿ ಹೊಂದಿದ್ದಾರೆ ಎಂದು ಬೊಮ್ಮಾಯಿ ಅವರು ನುಡಿದರು.