
Hazardous sediment found in Kingfisher beer: Rs 25 crore worth beer Confiscated
ಮೈಸೂರು:
ರಾಸಾಯನಿಕ ಪರೀಕ್ಷಾ ವರದಿಯಲ್ಲಿ ಪ್ರತಿಷ್ಠಿತ ಕಿಂಗ್ ಫಿಶರ್ ಬಿಯರ್ ಮಾನವ ಬಳಕೆಗೆ ಯೋಗ್ಯವಲ್ಲ ಎಂಬ ಅಂಶ ಪತ್ತೆಯಾಗಿದ್ದು, ರಾಜ್ಯ ಅಬಕಾರಿ ಇಲಾಖೆಯು 25 ಕೋಟಿ ರೂಪಾಯಿ ಮೌಲ್ಯದ ಎರಡು ಪ್ರಮುಖ ಬ್ರಾಂಡ್‌ಗಳನ್ನು ವಶಪಡಿಸಿಕೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅಬಕಾರಿ ಪೊಲೀಸರು, ದಾಸ್ತಾನು ನಾಶಪಡಿಸಲು ಇಲಾಖೆ ಕ್ರಮ ಕೈಗೊಂಡಿದೆ ಎಂದು ಮೈಸೂರು ಗ್ರಾಮಾಂತರ ಅಬಕಾರಿ ಉಪ ಆಯುಕ್ತ ಎ ರವಿಶಂಕರ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ ನ ನಂಜನಗೂಡು ಘಟಕದಲ್ಲಿ ತಯಾರಿಸಲಾಗಿದ್ದ ಕಿಂಗ್ ಫಿಶರ್ ಸ್ಟ್ರಾಂಗ್ ಬಿಯರ್ ಮತ್ತು ಕಿಂಗ್ ಫಿಶರ್ ಅಲ್ಟ್ರಾ ಲಾಗರ್ ಬಿಯರ್ ಬ್ಯಾಚ್ ನಂಬರ್ 7ಸಿ ಮತ್ತು 7ಇ 2023ರಂದು ಬಾಟಿಲಿಂಗ್ ಆದ ಬಿಯರ್ ನಲ್ಲಿ ಸೆಡಿಮೆಂಟ್ ಅಂಶ ಕಂಡುಬಂದಿದೆ.
ನಂಜನಗೂಡಿನ ಘಟಕದಲ್ಲಿ ತಯಾರಿಸಲಾಗಿದ್ದ ಕಿಂಗ್ಫಿಶರ್ ಸ್ಟ್ರಾಂಗ್ನಲ್ಲಿ ಸೆಡಿಮೆಂಟ್ ಅಂಶ ಪತ್ತೆಯಾಗಿದೆ. ಹೀಗಾಗಿ ಒಟ್ಟು 78,678 ಬಿಯರ್ ಬಾಕ್ಸ್ಗಳನ್ನು ತಡೆಹಿಡಿಯಲಾಗಿದೆ. ಗುಣಮಟ್ಟದ ಬಿಯರ್ ತಯಾರಿಸದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ರಿಟೈಲ್ನಲ್ಲೂ ಸೇಲ್ ಆಗದಂತೆ ತಡೆಹಿಡಿಯಲಾಗಿದೆ. ಮನುಷ್ಯರು ಕುಡಿಯಲು ಇದು ಯೋಗ್ಯವಲ್ಲ ಎಂದು ಇನ್ಹೌಸ್ ಕೆಮಿಸ್ಟ್ ವರದಿ ನೀಡಿದೆ. ಈ ವರದಿ ಆಧರಿಸಿ ಕ್ರಮ ಕಗೊಳ್ಳಲಾಗಿದೆ ಎಂದು ಎ ರವಿಶಂಕರ್ ಅವರು ಮಾಹಿತಿ ನೀಡಿದ್ದಾರೆ.