ತುಮಕೂರು : ಎರಡು ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ ಮೂವರು ಸೇರಿ ಐವರು ಮೃತಪಟ್ಟಿರುವ ಘಟನೆ ತಾಲೂಕಿನ ಕಸಬಾ ವ್ಯಾಪ್ತಿಯ ಕೊರಟಗೆರೆ-ಮಧುಗಿರಿ ಗಡಿಭಾಗದ ಕಾಟಗಾನಹಟ್ಟಿಯ ಬಳಿ ರವಿವಾರ ಸಂಜೆ ನಡೆದಿದೆ.
ಮೃತರನ್ನು ಪಾವಗಡ ಎತ್ತಿನಹಳ್ಳಿಯ ಜನಾರ್ದನ ರೆಡ್ಡಿ (63), ಅವರ ಪುತ್ರಿ ಸಿಂಧೂ (25), ಸಿಂಧೂ ಪುತ್ರ ಅಂಶು (8) ಹಾಗೂ ಇನ್ನೊಂದು ಕಾರಿನಲ್ಲಿದ್ದ ಚಾಲಕ ನಾಗರಾಜು (27), ಸಿದ್ದಗಂಗಪ್ಪ (45) ಎಂದು ಗುರುತಿಸಲಾಗಿದೆ.
ಮೃತ ಜನಾರ್ದನ ರೆಡ್ಡಿ ಸಂಬಂಧಿ ಗೀತಾ ಮತ್ತು ಅವರ ಪುತ್ರ ಯೋಧ (8) ಹಾಗೂ ಕಾರು ಚಾಲಕ ಆನಂದ್ ಮತ್ತು ಮೃತ ಸಿಂಧೂ ಅವರ ಒಂದು ವರ್ಷದ ಮಗುವಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಜನಾರ್ದನ ರೆಡ್ಡಿ ಸೇರಿದಂತೆ ಏಳು ಮಂದಿ ಕಾರಿನಲ್ಲಿ ಎತ್ತಿನಹಳ್ಳಿ ಗ್ರಾಮದಿಂದ ಬೆಂಗಳೂರಿಗೆ ತೆರಳುತ್ತಿದ್ದರು. ನಾಗರಾಜು, ಸಿದ್ಧಗಂಗಪ್ಪ ಬೆಂಗಳೂರಿನಿಂದ ಮಧುಗಿರಿ ಮಾರ್ಗವಾಗಿ ಕಾರೇನಹಳ್ಳಿಗೆ ತೆರಳುತ್ತಿದ್ದರು ಎನ್ನಲಾಗಿದೆ.
ಮಧುಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.