ಬೆಂಗಳೂರು:
ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ನೀಡುವುದಾಗಿ ನಂಬಿಸಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬುವವರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಸೇರಿದಂತೆ ಆರು ಆರೋಪಿಗಳನ್ನು ಸೆಪ್ಟೆಂಬರ್ 23ರವರೆಗೆ ಸಿಸಿಬಿ ಕಸ್ಟಡಿಗೆ ಆದೇಶಿಸಲಾಗಿದೆ.
ಪ್ರಕರಣ ಸಂಬಂಧ ಕರಾವಳಿ ಮೂಲದ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಸೇರಿದಂತೆ ಶ್ರೀಕಾಂತ್, ರಮೇಶ್, ಗಗನ್, ಪ್ರಜ್ವಲ್, ಧನರಾಜ್ ನನ್ನು ಬಂಧಿಸಿದ್ದ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದು ಇಂದು ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಿತ್ತು.
ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪಿಗಳನ್ನ ಹಾಜರುಪಡಿಸಿದರು. ಆರೋಪಿಗಳ ವಿರುದ್ಧ 5 ಕೋಟಿಗೂ ಹೆಚ್ಚು ಹಣ ವಂಚನೆ ಇದ್ದು, ಕೃತ್ಯ ಎಸಗಲು ವ್ಯವಸ್ಥಿತವಾಗಿ ಸಂಚು ರೂಪಿಸಿದ್ದರು.
ಬಂಧಿತರಿಂದ ಹಣವನ್ನ ರಿಕವರಿ ಮಾಡಿಕೊಳ್ಳಬೇಕಿದೆ. ಈ ಸಂಬಂಧ 10 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಬೇಕು ಎಂದು ಸಿಸಿಬಿ ಪರ ವಕೀಲರು ಮನವಿ ಮಾಡಿದರು. ಮನವಿಗೆ ಪುರಸ್ಕರಿಸಿದ ನ್ಯಾಯಾಲಯವು ಸೆ.23ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿತು. ಪ್ರಕರಣದ ಮತ್ತೊಬ್ಬ ಆರೋಪಿತ ಗಗನ್ ಕಡೂರು ಎಂಬಾತನ್ನ ನಿನ್ನೆ ಬಂಧಿಸಿ ಈಗಾಗಲೇ ಪೊಲೀಸ್ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ. ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.