
ಬೆಂಗಳೂರು: ಪ್ರಸಿದ್ಧ ಇತಿಹಾಸಕಾರ, ಲೇಖಕ ಹಾಗೂ ಚಿಂತಕರಾದ ಡಾ. ರಾಮಚಂದ್ರ ಗುಹಾ ಅವರನ್ನು 2025ನೇ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ – ಕರ್ನಾಟಕಕ್ಕೆ ರಾಜ್ಯ ಸರ್ಕಾರ ಆಯ್ಕೆ ಮಾಡಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಪ್ರತಿವರ್ಷ ನೀಡಲಾಗುವ ಈ ಗೌರವಾನ್ವಿತ ಪ್ರಶಸ್ತಿಯನ್ನು, ಸತ್ಯ, ಅಹಿಂಸೆ, ಶಾಂತಿ ಮತ್ತು ಸೇವಾ ಮನೋಭಾವನೆಗಳಾದ ಗಾಂಧೀಜಿಯವರ ಮೌಲ್ಯಗಳನ್ನು ಸಮಾಜದಲ್ಲಿ ಹರಡುವಲ್ಲಿ ಮಹತ್ತರ ಕೊಡುಗೆ ನೀಡಿದ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಪ್ರದಾನ ಮಾಡಲಾಗುತ್ತದೆ.
ರಾಜ್ಯಾದ್ಯಂತ ಗಾಂಧೀ ಜಯಂತಿ ಆಚರಣೆ ಅಂಗವಾಗಿ, ಸಾರ್ವಜನಿಕರು, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗಾಂಧೀ ತತ್ವಗಳನ್ನು ಸಮಕಾಲೀನ ಸಮಾಜಕ್ಕೆ ತಲುಪಿಸುವಲ್ಲಿ ವಿಶಿಷ್ಟ ಕೊಡುಗೆ ನೀಡಿರುವ ಡಾ. ಗುಹಾ ಅವರನ್ನು ಈ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಆಧುನಿಕ ಭಾರತದ ಇತಿಹಾಸ, ರಾಜಕೀಯ ಚಳವಳಿಗಳು, ಪರಿಸರ ಹೋರಾಟಗಳು ಹಾಗೂ ಕ್ರಿಕೆಟ್ ಕುರಿತ ತಮ್ಮ ಅಧ್ಯಯನ ಮತ್ತು ಕೃತಿಗಳ ಮೂಲಕ ಡಾ. ಗುಹಾ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಅವರ ಪ್ರಮುಖ ಕೃತಿಗಳು:
Also Read: Historian Ramachandra Guha Selected for Karnataka’s 2025 Mahatma Gandhi Seva Award
- India After Gandhi – ಸ್ವಾತಂತ್ರ್ಯಾನಂತರ ಭಾರತದ ಇತಿಹಾಸ
- A Corner of a Foreign Field – ಭಾರತೀಯ ಕ್ರಿಕೆಟ್ನ ಸಾಮಾಜಿಕ ಇತಿಹಾಸ
- Gandhi Before India – ಮಹಾತ್ಮ ಗಾಂಧೀಜಿಯವರ ಜೀವನಚರಿತ್ರೆಯ ಮೊದಲ ಭಾಗ
- Gandhi: The Years That Changed the World – ಜೀವನಚರಿತ್ರೆಯ ಎರಡನೇ ಭಾಗ
- The Unquiet Woods – ತಳಮಟ್ಟದ ಪರಿಸರ ಚಳವಳಿಗಳ ಅಧ್ಯಯನ
ಈ ಕೃತಿಗಳು ಸಂಶೋಧನಾತ್ಮಕವಾಗಿರುವುದಷ್ಟೇ ಅಲ್ಲದೆ, ಸಾಮಾನ್ಯ ಓದುಗರಿಗೂ ಸುಲಭವಾಗಿ ತಲುಪುವ ಶೈಲಿಯಲ್ಲಿ ಬರೆದಿರುವುದರಿಂದ ಗಾಂಧೀ ತತ್ವಗಳ ಪ್ರಚಾರ ಮತ್ತು ಚಿಂತನೆಗೆ ಪ್ರೇರಣೆಯಾಗಿವೆ. ಡಾ. ಗುಹಾ ಅವರ ಗಾಂಧೀಜಿಯವರ ಜೀವನಚರಿತ್ರೆಯ ಎರಡು ಸಂಪುಟಗಳು ಕನ್ನಡ ಸೇರಿದಂತೆ ಅನೇಕ ಭಾಷೆಗಳಿಗೆ ಅನುವಾದಗೊಂಡಿವೆ.
ರಾಜ್ಯ ಸರ್ಕಾರ ಈ ಪ್ರಶಸ್ತಿಯ ಮೂಲಕ ಯುವಪೀಳಿಗೆಗೆ ಗಾಂಧೀ ಆದರ್ಶಗಳನ್ನು ಪರಿಚಯಿಸಿ, ಸತ್ಯ, ಅಹಿಂಸೆ, ಶಾಂತಿ ಮತ್ತು ಸೇವಾ ಮನೋಭಾವನೆಗಳನ್ನು ಬಲಪಡಿಸಲು ಬದ್ಧವಾಗಿದೆ. “ಡಾ. ರಾಮಚಂದ್ರ ಗುಹಾ ಅವರಿಗೆ ಈ ಪ್ರಶಸ್ತಿ ಪ್ರದಾನವಾಗುವುದು ಸಮಾಜದಲ್ಲಿ ಗಾಂಧೀ ಆದರ್ಶಗಳ ಸಂವಾದ ಮತ್ತು ಅಧ್ಯಯನಕ್ಕೆ ಪ್ರೇರಣೆಯಾದಂತಾಗಿದೆ” ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.