ಬೆಂಗಳೂರು:
ಹೋಮ್ ಗಾರ್ಡ್‌ವೊಬ್ಬರು ನೈತಿಕ ಪೊಲೀಸ್ ಆಗಿ ವರ್ತಿಸುವುದಲ್ಲದೆ, ತನ್ನಿಂದ ಹಣ ವಸೂಲಿ ಮಾಡಿದ್ದಾರೆ ಎಂದು ದೆಹಲಿಯ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ವೈಟ್‌ಫೀಲ್ಡ್ ಪೊಲೀಸ್ ವಿಭಾಗದ ಕುಂದಲಹಳ್ಳಿಯ ಉದ್ಯಾನದಲ್ಲಿ ತನ್ನ ಪುರುಷ ಸ್ನೇಹಿತನೊಂದಿಗೆ ಕುಳಿತುಕೊಂಡಿದ್ದೇ ತನ್ನ ಏಕೈಕ ‘ಅಪರಾಧ’ ಎಂದು ಹೇಳಿದ್ದಾಳೆ.
ಭಾನುವಾರ ಮಧ್ಯಾಹ್ನ ಘಟನೆ ನಡೆದಿದ್ದು, ಮಂಗಳವಾರ ಸಂತ್ರಸ್ತೆ ಅರ್ಷಾ ಲತೀಫ್ (25) ತನಗಾದ ಅನುಭವವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ ನಗರ ಪೊಲೀಸರಿಗೆ ಟ್ಯಾಗ್ ಮಾಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ಹೋಮ್ ಗಾರ್ಡ್ ಬಂದಿದ್ದ ಬೈಕ್‌ನ ಚಿತ್ರಗಳನ್ನೂ ಅವರು ಹಂಚಿಕೊಂಡಿದ್ದಾರೆ. ಅನುಮತಿ ಪಡೆಯದೆ ಪಾರ್ಕ್‌ನಲ್ಲಿ ಕುಳಿತಿದ್ದಕ್ಕೆ ಆರೋಪಿ ಆಕೆಯ ಸ್ನೇಹಿತನಿಂದ 1000 ರೂ. ವಸೂಲಿ ಮಾಡಿದ್ದಾರೆ ಎಂದು ದೂರಿದ್ದಾರೆ.
ಬಿಬಿಎಂಪಿಗೆ ಹೊಂದಿಕೊಂಡಿರುವ ಗೃಹರಕ್ಷಕ ವಿ.ಮಂಜುನಾಥ ರೆಡ್ಡಿ (47) ಎಂಬಾತನನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ. ಈತನನ್ನು ಬಿಬಿಎಂಪಿಯು ಐಟಿಐ ಕಾಲೋನಿ ಘಟಕದಲ್ಲಿ ಗಸ್ತು ತಿರುಗಲು ನಿಯೋಜಿಸಿದ್ದು, ಜ. 29ರಂದು ಮಧ್ಯಾಹ್ನ 2.30ರ ಸುಮಾರಿಗೆ ಯುಪಿಐ ಮೂಲಕ ಹಣ ಸುಲಿಗೆ ಮಾಡಿದ್ದರು.
ದೆಹಲಿಯಲ್ಲಿ ಎಂಎನ್‌ಸಿಯೊಂದರಲ್ಲಿ ಕೆಲಸ ಮಾಡುತ್ತಿರುವ ಅರ್ಷಾ, ನಗರದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ತನ್ನ ಸ್ನೇಹಿತನನ್ನು ಭೇಟಿ ಮಾಡಲು ಬೆಂಗಳೂರಿಗೆ ಭೇಟಿ ನೀಡಿದ್ದರು.
ಅರ್ಷಾ ಅವರ ಟ್ವೀಟ್‌ನಲ್ಲಿ, ‘ಬೆಂಗಳೂರಿಗೆ ಭೇಟಿಯ ಸಮಯದಲ್ಲಿ ಆಘಾತಕಾರಿ ಅನುಭವವಾಗಿದೆ. 29/1/23 ರಂದು ಮಧ್ಯಾಹ್ನ ನನ್ನ ಸ್ನೇಹಿತ ಮತ್ತು ನಾನು ಕುಂದನಹಳ್ಳಿ ಕೆರೆಗೆ ಭೇಟಿ ನೀಡಿ ಕುಳಿತುಕೊಂಡಿದ್ದೆವು. ಬಳಿಕ ಅಲ್ಲಿ ಕುಳಿತುಕೊಳ್ಳಲು ನಮಗೆ ಅನುಮತಿ ಇಲ್ಲ ಎಂದು ಪೋಲೀಸರು ಕಿರುಕುಳ ನೀಡಲು ಪ್ರಾರಂಭಿಸಿದರು.
ಕಳೆದ ಎರಡು ತಿಂಗಳಲ್ಲಿ ಖಾಕಿ ತೊಟ್ಟ ವ್ಯಕ್ತಿಗಳು ಅಮಾಯಕರಿಂದ ಹಣ ವಸೂಲಿ ಮಾಡಿರುವ ನಾಲ್ಕನೇ ಘಟನೆ ಇದಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ಇಬ್ಬರು ಪೊಲೀಸರನ್ನು ತಡರಾತ್ರಿ ವಾಕಿಂಗ್ ಮಾಡುತ್ತಿದ್ದ ದಂಪತಿಯಿಂದ ಹಣ ವಸೂಲಿ ಮಾಡಿದ್ದಕ್ಕಾಗಿ ಅಮಾನತುಗೊಳಿಸಲಾಗಿತ್ತು.
ಅದಾದ ಕೆಲವು ದಿನಗಳ ನಂತರ, ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದ್ದಕ್ಕಾಗಿ ದಂಪತಿಯಿಂದ ಹಣ ಪಡೆದಿದ್ದಕ್ಕಾಗಿ ಆಡುಗೋಡಿ ಪೊಲೀಸ್ ಠಾಣೆಯ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಯಿತು. ಜನವರಿಯಲ್ಲಿ ಬಂಡೆಪಾಳ್ಯ ಪೊಲೀಸ್ ಠಾಣೆಯ ಇಬ್ಬರು ಪೊಲೀಸರನ್ನು ಬ್ಯಾಗ್‌ನಲ್ಲಿ ಗಾಂಜಾ ಇಟ್ಟು ಯುವಕರಿಂದ ಸುಲಿಗೆ ಮಾಡಿದ್ದಕ್ಕಾಗಿ ಅಮಾನತುಗೊಳಿಸಲಾಗಿತ್ತು.