Home ಬೆಂಗಳೂರು ನಗರ ಕೊರೊನಾ ಸೋಂಕು ನಿವಾರಣೆಗೆ ರಾಸಾಯನಿಕ ದ್ರಾವಣ

ಕೊರೊನಾ ಸೋಂಕು ನಿವಾರಣೆಗೆ ರಾಸಾಯನಿಕ ದ್ರಾವಣ

66
0

ಸಿಂಪರಣೆ ಕಾರ್ಯಕ್ಕೆ ಚಾಲನೆ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು:

ಕೋವಿಡ್ ಎರಡನೇ ಅಲೆಯ ನಿಯಂತ್ರಣಕ್ಕೆ ರಾಜ್ಯಾದ್ಯಂತ ಕೊರೊನಾ ಸೋಂಕಿತ ಪ್ರದೇಶಗಳಲ್ಲಿ ರಾಸಾಯನಿಕ ದ್ರಾವಣವನ್ನು ಸಿಂಪಡಿಸುವ ಕಾರ್ಯಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು.

ಬೆಂಗಳೂರಿನ ಟೌನ್ ಹಾಲ್ ಬಳಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಸಾಯನಿಕ ದ್ರಾವಣವನ್ನು ಸಿಂಪಡಿಸುವ ವಾಹನಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಸಚಿವ ಬೊಮ್ಮಾಯಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಳೆದ ಬಾರಿ ಕೋವಿಡ್ ಸೋಂಕು ಹರಡಿದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ವತಿಯಿಂದ ಸೋಂಕು ಹೆಚ್ಚು ಜನರಿಗೆ ತಗುಲಿದ ಪ್ರದೇಶದಲ್ಲಿ ಕೋವಿಡ್ ನಿಯಂತ್ರಣ ರಾಸಾಯನಿಕ ದ್ರಾವಣವನ್ನು ಸಿಂಪಡಿಸಲಾಗಿತ್ತು. ಈಗ ಎರಡನೆಯ ಅಲೆ ನಿಯಂತ್ರಿಸುವ ಸಂಬಂಧ ಇಲಾಖೆ ಇಂದಿನಿಂದ ರಾಜ್ಯಾದ್ಯಂತ ರಾಸಾಯನಿಕ ದ್ರಾವಣ ಸಿಂಪಡಿಸುವ ಕೆಲಸ ಆರಂಭಿಸಿದೆ. ಈ ಸೋಂಕನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ವಿವಿಧ ಮಾದರಿಯ 12 ಬೃಹತ್ ವಾಹನಗಳು ರಾಸಾಯನಿಕ ಸಿಂಪರಣೆ ಕಾರ್ಯಾಚರಣೆ ಆರಂಭಿಸಲಿವೆ. ಸಣ್ಣ ರಸ್ತೆ ಗಳಿರುವ ಪ್ರದೇಶಗಳಲ್ಲಿ ಸಣ್ಣ ವಾಹನಗಳನ್ನು ದ್ರಾವಣ ಸಿಂಪಡಿಸಲು ಬಳಕೆ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಪೊಲೀಸ್ ಮಹಾನಿರ್ದೇಶಕರಾದ ಅಮರ ಕುಮಾರ ಪಾಂಡೆ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here