Home ಬೆಂಗಳೂರು ನಗರ ಸರ್ಕಾರದ ಬೇಜವಾಬ್ದಾರಿಗೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು?: ಡಿ.ಕೆ. ಶಿವಕುಮಾರ್

ಸರ್ಕಾರದ ಬೇಜವಾಬ್ದಾರಿಗೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು?: ಡಿ.ಕೆ. ಶಿವಕುಮಾರ್

72
0

ಬೆಂಗಳೂರು:

‘ಚಿಕ್ಕಬಳ್ಳಾಪುರದ ಅಕ್ರಮ ಕಲ್ಲು ಕ್ವಾರಿ ಬಳಿ ಜಿಲೆಟಿನ್ ಸ್ಫೋಟದಿಂದ 6 ಜನ ಜೀವ ಕಳೆದುಕೊಂಡಿರುವುದಕ್ಕೆ ರಾಜ್ಯ ಸರ್ಕಾರದ ಬೇಜವಾಬ್ದಾರಿಯೇ ಕಾರಣ. ಸರ್ಕಾರದ ಅಸಡ್ಡೆಗೆ ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕು?’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕಳೆದ ಒಂದು ತಿಂಗಳಲ್ಲೇ ಎರಡನೇ ಬಾರಿ ಇಂತಹ ದುರ್ಘಟನೆ ಸಂಭವಿಸಿದೆ. ಶಿವಮೊಗ್ಗದಲ್ಲಿನ ಸ್ಫೋಟ ಸಮಯದಲ್ಲೇ, ಈ ಸ್ಫೋಟಕಗಳ ನಿರ್ವಹಣೆ, ಸಾಗಣೆ ಬಗ್ಗೆ ಒಂದು ಸುರಕ್ಷಿತ ವ್ಯವಸ್ಥೆ ನಿರ್ಮಿಸಬೇಕು, ನೀತಿ-ನಿಯಮಗಳ ಕಟ್ಟುನಿಟ್ಟು ಪಾಲನೆಗೆ ಕ್ರಮ ಕೈಗೊಳ್ಳಬೇಕು ಎಂದು ನಾನು ಹೇಳಿದ್ದೆ.

ಆದರೆ ತನ್ನ ಆಂತರಿಕ ಸಮಾಸ್ಯೆಗಳಲ್ಲೇ ಮುಳುಗಿರುವ ಈ ಸರಕಾರಕ್ಕೆ ಇತ್ತ ಗಮನ ಹರಿಸಲು ಸಾಧ್ಯವಾಗಿಲ್ಲ. ಮಾಧ್ಯಮಗಳ ಮುಂದೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದು ಬಿಟ್ಟರೆ, ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕ್ರಮ ಕೈಗೊಂಡಿದ್ದರೆ ಇಂತಹ ದುರಂತ ಮರುಕಳಿಸುತ್ತಿರಲಿಲ್ಲ ಎಂದು ಶಿವಕುಮಾರ್ ಅವರು ಕಿಡಿಕಾರಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಎನ್ನುವ ಮಾತು ಹಾಸ್ಯಾಸ್ಪದವಾಗಿದೆ. ಹೇಳಿಕೆ ನೀಡುವ ಸರಕಾರದ ಪ್ರತಿನಿಧಿಗಳು ಜೋಕರ್ ಗಳಂತೆ ಕಾಣುತ್ತಿದ್ದಾರೆ. ಇದರ ಪರಿಣಾಮವೇ ಚಿಕ್ಕಬಳ್ಳಾಪುರದಲ್ಲಿ ಆರು ಮುಗ್ಧ ಜೀವಿಗಳ ಬಲಿ ಆಗಿರುವುದು.

ಅಕ್ರಮ ಗಣಿಗಾರಿಕೆ ನಿಯಂತ್ರಣ ಮಾಡುತ್ತೇವೆ ಎನ್ನುವ ರಾಜ್ಯ ಸರ್ಕಾರ, ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿಲ್ಲ ಎಂಬುದಕ್ಕೆ ಈ ದುರಂತ ಸಾಕ್ಷಿ. ಈ ಸರ್ಕಾರ ಹೇಳುವುದೊಂದು, ಮಾಡುವುದೊಂದು.

ಸರ್ಕಾರ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಜತೆಗೆ ಈ ಘಟನೆಗೆ ಕಾರಣವಾದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.

ರಾಜ್ಯ ಸರ್ಕಾರ ಇನ್ನಾದರೂ ನಿಜವಾಗಿ ಎಚ್ಚೆತ್ತುಕೊಂಡು, ಅಮಾಯಕ ಜೀವಗಳು ಬಲಿಯಾಗದಂತೆ ನೋಡಿಕೊಳ್ಳಬೇಕು’ ಎಂದು ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಬಲ್ಲಾಪುರ ಬಳಿ ಜೆಲಾಟಿನ್ ಸ್ಫೋಟದಲ್ಲಿ 6 ಜನರು ಮೃತ https://kannada.thebengalurulive.com/six-dead-in-gelatine-blast-near-chikballapur/

LEAVE A REPLY

Please enter your comment!
Please enter your name here