ಬೆಂಗಳೂರು:
ಕರ್ನಾಟಕದಲ್ಲಿ ಹೆಚ್‌ಎಸ್‌ಆರ್‌ಪಿ ಅಥವಾ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ಸ್ ಅನ್ನು ಪಡೆಯಲು ಕರ್ನಾಟಕ ಸಾರಿಗೆ ಇಲಾಖೆಯ ವೆಬ್‌ಸೈಟ್ https://transport.karnataka.gov.in ಅಥವಾ www.siam.in ಗೆ ಭೇಟಿ ನೀಡಬೇಕು. ಅಲ್ಲಿ ಬುಕ್ ಹೆಚ್‌ಎಸ್‌ಆರ್‌ಪಿ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ವಾಹನದ ಉತ್ಪಾದಕ ಕಂಪನಿಯನ್ನು ಆಯ್ಕೆ ಮಾಡಿ. ಬಳಿಕ ಅಲ್ಲಿ ಬೇಸಿಕ್ ವೆಹಿಕಲ್ ಡಿಟೇಲ್ಸ್ ಕೇಳಿರುವುದನ್ನು ಭರ್ತಿ ಮಾಡಬೇಕು. ಅದಾದ ಬಳಿಕ ಡೀಲರ್ ಲೊಕೇಶನ್ ಅನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಸೆಲೆಕ್ಟ್ ಮಾಡಿಕೊಳ್ಳಬೇಕು. ಹೆಚ್‌ಎಸ್‌ಆರ್‌ಪಿಯನ್ನು ಫಿಕ್ಸ್ ಮಾಡುವುದಕ್ಕಾಗಿ ಡೀಲರ್ ಲೊಕೇಶನ್ ಸೆಲೆಕ್ಟ್ ಮಾಡಬೇಕಾಗಿರುವಂಥದ್ದು. ಹೆಚ್‌ಎಸ್‌ಆರ್‌ಪಿಗೆ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು. ನಗದು ಪಾವತಿ ಮಾಡಬೇಕಾದ್ದಿಲ್ಲ.
ಇಷ್ಟು ಮಾಡಿದ ಬಳಿಕ ವಾಹನದ ಮಾಲೀಕರ ಮೊಬೈಲ್ ನಂಬರ್‌ಗೆ ಒಟಿಪಿ ಬರುತ್ತದೆ. ಮಾಲೀಕರು ತಮ್ಮ ಸಮಯಾವಕಾಶ ನೋಡಿಕೊಂಡು ನಂಬರ್ ಪ್ಲೇಟ್ ಅನ್ನು ವಾಹನಕ್ಕೆ ಜೋಡಿಸಲು ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಬಹುದು. ಬಳಿಕ ವಾಹನ ಮಾಲೀಕರು ನಿಗದಿ ಮಾಡಿಕೊಂಡು ಅಂಗೀಕೃತವಾದ ದಿನಾಂಕ ಮತ್ತು ಸಮಯಕ್ಕೆ ಅವರ ವಾಹನ ಉತ್ಪಾದಕರು/ ಡೀಲರ್ ಬಳಿ ಹೋಗಿ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ವಾಹನಕ್ಕೆ ಅಳವಡಿಸಬಹುದು. ಕೆಲವು ಡೀಲರ್‌ಗಳು ವಾಹನ ಮಾಲೀಕರ ಮನೆಬಾಗಿಲಿಗೆ ಈ ಸೇವೆಯನ್ನು ಒದಗಿಸಬಹುದು.
ಎಚ್‌ಎಸ್‌ಆರ್‌ಪಿ ಕುರಿತು ಸಾರ್ವಜನಿಕರಲ್ಲಿ ಸಾಕಷ್ಟು ಗೊಂದಲಗಳಿವೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ (MoRTH) ಆದೇಶದ ಪ್ರಕಾರ, ವಾಹನಗಳು HSRP ನಂಬರ್ ಪ್ಲೇಟ್‌ಗಳನ್ನು ಅಳವಡಿಸಬೇಕು. ಕೇಂದ್ರ ಸರ್ಕಾರವು ಈ ಕ್ರಮದ ಮೂಲಕ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಬಯಸಿದೆ. ಎಚ್‌ಎಸ್‌ಆರ್‌ಪಿಯನ್ನು ಪರಿಚಯಿಸುವ ಪ್ರಮುಖ ಕಾರಣವೆಂದರೆ ಅಪರಾಧಿಗಳು ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸುವ ನಕಲಿ ನೋಂದಣಿ ಸಂಖ್ಯೆಗಳನ್ನು ತಡೆಗಟ್ಟುವುದು ಮತ್ತು ಸಂಚಾರ ಉಲ್ಲಂಘನೆಗಾಗಿ ವಾಹನಗಳನ್ನು ಟ್ರ್ಯಾಕ್ ಮಾಡುವುದಾಗಿದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರವು ಆಗಸ್ಟ್ 17, 2023 ರಂದು ಆದೇಶಗಳನ್ನು ಹೊರಡಿಸಿತ್ತು, ಆದರೆ ಇದುವರೆಗೆ ಸುಮಾರು 20,000 ಜನರು ಮಾತ್ರ ಮುಂದೆ ಬಂದು ಬದಲಾವಣೆ ಮಾಡಿಕೊಂಡಿದ್ದಾರೆ. ಜನರಲ್ಲಿ ಅರಿವು ಕಡಿಮೆಯಾಗಿದೆ, ಜನರಲ್ಲಿ ಸಾಕಷ್ಟು ಪ್ರಶ್ನೆಗಳೂ ಕೂಡ ಮೂಡತೊಡಗಿದೆ. ಜನರು ಯಾವುದೇ ಅಧಿಕೃತ ಡೀಲರ್‌ನಿಂದ ನಂಬರ್ ಪ್ಲೇಟ್ ಬದಲಾಯಿಸಬಹುದು. ತಮಗೆ ಸೂಕ್ತವಾದ ಟೈಮ್ ಸ್ಲಾಟ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು ಅಥವಾ ತಮ್ಮ ಮನೆ ಅಥವಾ ಕಚೇರಿಯಿಂದಲೂ ಮಾಡಿಕೊಳ್ಳಬಹುದು ಎಂದು ಭಾರತೀಯ ನೋಂದಣಿ ಪ್ಲೇಟ್ ತಯಾರಕರ ಸಂಘದ ಕಾರ್ಯಕಾರಿ ಸದಸ್ಯ ಮತ್ತು ವಕ್ತಾರ ಸುಧೀರ್ ಗೋಯೆಲ್ ಹೇಳಿದ್ದಾರೆ.
ಹಳೆಯ ವಾಹನಗಳಿಗೆ ಪ್ಲೇಟ್ ಅಳವಡಿಕೆ ನವೆಂಬರ್ 17 ಕೊನೆಯ ದಿನವಾಗಿದೆ. ಏಪ್ರಿಲ್ 2019 ಕ್ಕಿಂತ ಮೊದಲು ನೋಂದಣಿ ಮಾಡಿಸಿಕೊಂಡ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಲಘು ಮೋಟಾರು ವಾಹನ, ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರ್ಯಾಕ್ಟರ್, ಪ್ರಯಾಣಿಕರ ಕಾರು ಸೇರಿ ಎಲ್ಲ ಹಳೆಯ ವಾಹನಗಳಿಗೆ ಈ ನಿಯಮ ಅನ್ವಯವಾಗಲಿದೆ.
ಸಾರ್ವಜನಿಕ ಸೂಚನೆ : HSRP ನಂಬರ್ ಪಡೆಯುವ ಪ್ರಕ್ರಿಯೆ.
— ಸಾರಿಗೆ ಇಲಾಖೆ ,Transport Department Karnataka (@tdkarnataka) September 16, 2023
Public Notice : HSRP Number Plate Procurement Process. @RLR_BTM pic.twitter.com/kHxOAlsZA0
ಹೆಚ್‌ಎಸ್‌ಆರ್‌ಪಿ ಎಂದರೇನು?
ಹೆಚ್‌ಎಸ್‌ಆರ್‌ಪಿ ಎಂಬುದು ವಾಹನಗಳ ನೋಂದಣಿ ನಂಬರ್ ಪ್ಲೇಟ್ ಆಗಿದ್ದು, ಅಲ್ಯೂಮಿನಿಯಂ ಲೋಹದಲ್ಲಿ ತಯಾರಿಸಿದ ನಂಬರ್ ಪ್ಲೇಟ್. ಬಳಕೆಯಿಲ್ಲದ ಎರಡು ಲಾಕ್‌ಗಳನ್ನು ಹೊಂದಿದೆ. ಮುಂಭಾಗದ ಮತ್ತು ಹಿಂಭಾಗದ ನಂಬರ್ ಪ್ಲೇಟ್‌ನ ಎಡಬದಿಯ ಮೇಲ್ತುದಿಯಲ್ಲಿ ಕ್ರೋಮಿಯಂ ಹಾಲೋಗ್ರಾಂ ಇದ್ದು, ಅದರಲ್ಲಿ ಆಶೋಕಚಕ್ರದ ಚಿತ್ರವಿದೆ. ಇದು 20 ಎಂಎಂX 20 ಎಂಎಂ ಗಾತ್ರದಲ್ಲಿ ಹಾಟ್ ಸ್ಟಾಂಪಿಂಗ್ ಮೂಲಕ ಲಗತ್ತಿಸಲಾಗುತ್ತದೆ. ನಕಲಿ ನಂಬರ್ ಪ್ಲೇಟ್ ಅಳವಡಿಸುವುದನ್ನು ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ.