ಬೆಂಗಳೂರು:
ಆಧಾರ್ ಕಾರ್ಡಿನಿಂದ ಹಿಡಿದು ಆಸ್ತಿ ಹಕ್ಕುಪತ್ರದವರಗೆ 9 ಇಲಾಖೆಯ 79 ಸೇವೆಗಳನ್ನು ಜನರ ಮನೆ ಬಾಗಿಲಿಗೇ ತಲುಪಿಸುವ ‘ಜನಸೇವಕ’ ಕಾರ್ಯಕ್ರಮಕ್ಕೆ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭಾರೀ ಜನಸ್ಪಂದನ ವ್ಯಕ್ತವಾಗಿದೆ ಎಂದು ಕ್ಷೇತ್ರದ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಭಾನುವಾರ ಅವರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಯಶವಂತಪುರದ ಅಟಲ್ ಉದ್ಯಾನ ಮತ್ತು ಕೋದಂಡರಾಮಪುರದ ಬಿಬಿಎಂಪಿ ಶಾಲೆ ಆವರಣದಲ್ಲಿ ಮುಂದುವರಿದ ‘ಜನಸೇವಕ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಲ್ಲೇಶ್ವರಂನಲ್ಲಿ ನ.1ರಿಂದಲೇ ಜನಸೇವಕ ಕಾರ್ಯಕ್ರಮವು ಚಾಲನೆ ಪಡೆದುಕೊಂಡಿದ್ದು, ಇತ್ತೀಚೆಗೆ ಕ್ಷೇತ್ರವ್ಯಾಪ್ತಿಯ ಎಲ್ಲ 7 ವಾರ್ಡುಗಳಿಗೂ ಇದನ್ನು ವಿಸ್ತರಿಸಲಾಗಿದೆ. ಇದರ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸಲು ಮನೆ ಮನೆಗೂ ಜನಸೇವಕ ಮಾರ್ಗದರ್ಶನ ಕೈಪಿಡಿಯನ್ನು ತಲುಪಿಸಲಾಗುತ್ತಿದೆ ಎಂದು ಅವರು ಹೇಳಿದರು.
ನಮ್ಮ ಮಲ್ಲೇಶ್ವರದಲ್ಲಿ ಹಮ್ಮಿಕೊಳ್ಳಲಾದ 'ಜನ ಸೇವಕ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕ್ಷೇತ್ರದ ಜನತೆಗೆ ಈ ಯೋಜನೆ ಬಗ್ಗೆ ಮಾಹಿತಿ ನೀಡಿದೆ.
— Dr. Ashwathnarayan C. N. (@drashwathcn) December 19, 2021
ಜನಸೇವೆಯೇ ಜನಾರ್ಧನ ಸೇವೆ ಎಂದು ನಂಬಿರುವ ನಮ್ಮ ಸರ್ಕಾರ ನಾಗರಿಕರಿಗೆ ಅಗತ್ಯ ಸೇವೆಗಳನ್ನು ಅವರ ಮನೆಬಾಗಿಲಿಗೆ ತಲುಪಿಸುವ ವಿನೂತನ ಯೋಜನೆ ರೂಪಿಸಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಕೋರಿಕೆ. pic.twitter.com/9EkotYGsea
ಜನಸೇವಕ ಉಪಕ್ರಮದಡಿ ಜನರಿಗೆ ಅಗತ್ಯವಿರುವ ಸೇವೆಗಳು ಮನೆ ಬಾಗಿಲಿಗೇ ಬರುತ್ತಿವೆ. ನಿಗದಿತ ಸರಕಾರಿ ಶುಲ್ಕ ಮತ್ತು ಸೇವಾಶುಲ್ಕವನ್ನು ಡಿಜಿಟಲ್ ಪಾವತಿ ಮಾಡಿದರೆ ಸೇವೆಗಳು ನಿಗದಿತ ದಿನಗಳಲ್ಲಿ ನಿರಾಯಾಸವಾಗಿ ಸಿಗಲಿವೆ. ಇದು ಸಾರ್ವಜನಿಕರಿಗೆ ತುಂಬಾ ಸಂತಸ ತಂದಿದೆ ಎಂದು ಅವರು ಹೇಳಿದರು.
ಜನಸೇವಕ ಕಾರ್ಯಕ್ರಮದಡಿ ಈಗ ಇರುವ ಸೇವೆಗಳ ಜತೆಗೆ ಮತ್ತಷ್ಟು ಸೇವೆಗಳನ್ನು ಸೇರಿಸಲಾಗುವುದು. ಈ ಸಂಬಂಧ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು ಎಂದು ಸಚಿವರು ನುಡಿದರು.
ಈ ಸಂದರ್ಭದಲ್ಲಿ ಅವರು ನೂರಾರು ಜನರಿಗೆ ಹಲವು ಸೇವೆಗಳನ್ನು ವಿತರಿಸಿ, ಪ್ರಮಾಣಪತ್ರಗಳನ್ನು ಪ್ರದಾನ ಮಾಡಿದರು