ಬೆಂಗಳೂರು:
ಅಲ್ಪಸಂಖ್ಯಾತ ಸಮುದಾಯದ, ಅದರಲ್ಲೂ ಮುಸ್ಲೀಂ ಸಮುದಾಯದ ಹೆಚ್ಚೆಚ್ಚು ಕಾರ್ಯಕರ್ತರು, ಮುಖಂಡರು ಬಿಜೆಪಿ ಸೇರುತ್ತಿದ್ದು, ಈ ಮೂಲಕ ಪಕ್ಷವು ಅಲ್ಪಸಂಖ್ಯಾತರ ವಿರೋಧಿ ಎಂದು ಬೊಬ್ಬೆ ಹೊಡೆಯುವ ಪ್ರತಿಪಕ್ಷಗಳಿಗೆ ಸ್ಪಷ್ಟ ಸಂದೇಶ ನೀಡಿದಂತಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ನಗರ ರಾಜಮಹಲ್ ಎಕ್ಸ್‌ಟೆನ್ಷನ್‌ನ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಆರ್.ಗೀತಾಂಜಲಿ, ಆರ್.ವೇಣುಕುಮಾರ್ ಹಾಗೂ ಶಕೀಲ್ ಅಹಮದ್ ಮತ್ತವರ ನೂರಾರು ಬೆಂಬಲಿಗರನ್ನು ಬಿಜೆಪಿಗೆ ಬರ ಮಾಡಿಕೊಂಡ ನಂತರ ಮಾತನಾಡಿದ ಅವರು; ಬಿಜೆಪಿ ರಾಷ್ಟ್ರೀಯ ಪಕ್ಷ. ಸಹಬಾಳ್ವೆ, ಸೌಹಾರ್ದತೆಯನ್ನು ನಂಬಿರುವ ಪಕ್ಷ. ವಿನಾಕಾರಣ ಪಕ್ಷದ ವಿರುದ್ಧ ಹುಯಿಲೆಬ್ಬಿಸುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಈ ಮೂಲಕ ಬಿಜೆಪಿ ಏನೆಂಬುದು ಗೊತ್ತಾಗಲಿದೆ ಎಂದರು.
ಪಕ್ಷಕ್ಕೆ ಇಷ್ಟು ಪ್ರಮುಖರು, ಮುಖಂಡರು, ಕಾರ್ಯಕರ್ತರು ಸೇರ್ಪಡೆಯಾಗಿರುವುದು ಸಂತಸ ಉಂಟು ಮಾಡಿದೆ. ಎಲ್ಲರೂ ಪಕ್ಷವನ್ನು ಕಟ್ಟಲಿದ್ದಾರೆ. ರಾಜ್ಯದಲ್ಲಿ ಮತ್ತೊಮ್ಮೆ ಪಕ್ಷ ಅಧಿಕಾರಕ್ಕೆ ಬರಲು ಇವರೆಲ್ಲರೂ ಶ್ರಮಿಸಲಿದ್ದಾರೆಂದು ಸಚಿವರು ಹೇಳಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ದಿನವೇ ಮುಸ್ಲೀಂ ಸಮುದಾಯದವರು ದೊಡ್ಡ ಪ್ರಮಾಣದಲ್ಲಿ ಬಿಜೆಪಿ ಸೇರಿರುವುದು ನನಗೆ ಅಪಾರ ಸಂತೋಷ ಉಂಟು ಮಾಡಿದೆ. ರಾಜ್ಯದ ಮುಂದಿನ ರಾಜಕೀಯಕ್ಕೆ ಇದು ಸ್ಪಷ್ಟ ದಿಕ್ಸೂಚಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬಿಜೆಪಿ ಮುಖಂಡರಾದ ಕೇಶವಮೂರ್ತಿ ಮತ್ತಿತರರು ಇದ್ದರು.