ಡಾ.ಸಿ.ಎನ್.ಅಶ್ವತ್ಥನಾರಾಯಣರ ಮಲ್ಲೇಶ್ವರ ಕ್ಷೇತ್ರದಲ್ಲಿ ಪಾರಂಪರಿಕ ಕಟ್ಟಡಕ್ಕೆ ಮರುಜೀವ ಯದುವೀರ್ ಕೃಷ್ಣರಾಜೇಂದ್ರ ಒಡೆಯರ್, ಜರ್ಮನ್ ಕಾನ್ಸುಲೇಟ್ ಅಧಿಕಾರಿಗಳ ಮೆಚ್ಚುಗೆ
ಬೆಂಗಳೂರು:
ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಹಾಗೂ ಮೈಸೂರು ಸಂಸ್ಥಾನದಲ್ಲಿ ಹಂಗಾಮಿ ದಿವಾನರಾಗಿದ್ದ ಎಚ್.ವಿ.ನಂಜುಂಡಯ್ಯ ಅವರು ವಾಸವಿದ್ದ ಹಾಗೂ ತದ ನಂತರ ಮಲ್ಲೇಶ್ವರದ ಸರಕಾರಿ ಬಾಲಕಿಯರ ಪ್ರೌಢಶಾಲೆಗೆ ದಾನ ಮಾಡಿದ್ದ ಭವ್ಯ ಭಂಗಲೆಯನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಒತ್ತಾಸೆ ಮೇರೆಗೆ ಜೀರ್ಣೋದ್ಧಾರ ಮಾಡಲಾಗುತ್ತಿದೆ.
ಡಿಸಿಎಂ ಅವರು ಸೋಮವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪ್ರಗತಿಯನ್ನು ಪರಿಶೀಲನೆ ನಡೆಸಿದರು. ವಿಶೇಷವೆಂದರೆ, ಬೆಂಗಳೂರು ನಗರದಲ್ಲಿರುವ ಜರ್ಮನ್ ರಾಯಭಾರ ಕಚೇರಿಯ ಹಿರಿಯ ಅಧಿಕಾರಿಗಳು ಡಿಸಿಎಂ ಜತೆ ಈ ಭಂಗಲೆಗೆ ಭೇಟಿ ನೀಡಿ ಅಲ್ಲಿನ ನಿರ್ಮಾಣ ಶೈಲಿಯನ್ನು ಕಂಡು ಚಕಿತರಾದರು.
ನಗರದ ಪ್ರಮುಖ ಪಾರಂಪರಿಕ ಕಟ್ಟಡವಾಗಿರುವ ಈ ಭಂಗಲೆಯಲ್ಲಿ ನಂಜುಂಡಯ್ಯ ಅವರು ವಾಸವಿದ್ದರು. 1915ರಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಲಾಗಿತ್ತು. ಇದು ʼಎಚ್‌ವಿಎನ್ ಭಂಗಲೆʼ ಎಂದೇ ಪ್ರಖ್ಯಾತಿಯಾಗಿದೆ. ಕಟ್ಟಡ ಹಳತಾದಂತೆಲ್ಲ ಅದಕ್ಕೆ ಅಲ್ಲಲ್ಲಿ ಧಕ್ಕೆ ಉಂಟಾಗಿತ್ತು. ಇದನ್ನು ಗಮನಿಸಿದ್ದ ಡಿಸಿಎಂ ಅವರು ಬಿಬಿಎಂಪಿ ನೆರವಿನೊಂದಿಗೆ ಜೀರ್ಣೋದ್ಧಾರ ಕಾರ್ಯ ಕೈಗೊಂಡಿದ್ದಾರೆ.
2 ಕೋಟಿ ರೂ. ವೆಚ್ಚ:
“ಇಡೀ ನಗರಕ್ಕೆ ಹೆಮ್ಮೆ ತರುವ ಕಟ್ಟಡ ಇದಾಗಿದೆ. ಮಲ್ಲೇಶ್ವರದಲ್ಲಿ ಇದು ಇರುವುದು ನಮ್ಮ ಭಾಗ್ಯವೇ ಸರಿ. ಇದನ್ನ ಉಳಿಸಿ ಸಂರಕ್ಷಣೆ ಮಾಡುವ ಉದ್ದೇಶದಿಂದ ಈ ಕಾಮಗಾರಿ ಕೈಗೊಳ್ಳಲಾಗಿದೆ. ಎಸ್ತೆಟಿಕ್ ಆರ್ಕಿಟೆಕ್ಟ್ ಸಂಸ್ಥೆಯವರು ಜೀರ್ಣೋದ್ಧಾರ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ಬಿಬಿಎಂಪಿ 2 ಕೋಟಿ ರೂ. ಅನುದಾನ ನೀಡಿದ್ದು, ಕೆಲಸ ಭರದಿಂದ ಸಾಗುತ್ತಿದೆ” ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದರು.
ಹಳೆಯ ಅಥವಾ ಪಾರಂಪರಿಕ ಕಟ್ಟಡಗಳು ಎಂದರೆ ಜರ್ಮನ್ನರಿಗೆ ಅಚ್ಚುಮೆಚ್ಚು. ಅದಕ್ಕಾಗಿ ಇವತ್ತು ಬೆಂಗಳೂರಿನ ಜರ್ಮನ್ ಕಾನ್ಸುಲೇಟ್ ಜನರಲ್ ಆಗಿರುವ ಆಕ್ಚಿಮ್ ಬರ್ಕಾರ್ಟ್ ಹಾಗೂ ಮೈಸೂರು ರಾಜವಂಶಸ್ಥರಾದ ಶ್ರೀ ಯದುವೀರ್ ಕೃಷ್ಣರಾಜೇಂದ್ರ ಒಡೆಯರ್ ಸ್ಥಳಕ್ಕೆ ಆಗಮಿಸಿ ಭಂಗಲೆಯಲ್ಲಿ ನಡೆಯುತ್ತಿರುವ ಕೆಲಸವನ್ನು ವೀಕ್ಷಣೆ ಮಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ, ಇಡೀ ಬೆಂಗಳೂರಿನ ಕೀರ್ತಿಯನ್ನು ಹೆಚ್ಚಿಸುವ ಕಾರ್ಯ ಇದಾಗಿದೆ ಎಂದು ಡಿಸಿಎಂ ಹೇಳಿದರು.
ಚಕಿತರಾದ ಜರ್ಮನ್ನರು:
ಈ ಭಂಗಲೆಯಲ್ಲಿ ಆ ಕಾಲಕ್ಕೆ ಬೃಹತ್ ಗಾತ್ರದ ಸೋನಾ ಬಾತ್ ವ್ಯವಸ್ಥೆ ನಿರ್ಮಾಣವಾಗಿದೆ. ಇದನ್ನು ಕಂಡು ಜರ್ಮನ್ ರಾಜತಾಂತ್ರಿಕರು ಚಕಿತರಾದರು. ಕಟ್ಟಡದ ವಿನ್ಯಾಸ, ಗಾಳಿ-ಬೆಳಕಿನ ವ್ಯವಸ್ಥೆ, ಕಲ್ಲು ಮತ್ತು ಮರದ ಕೆತ್ತನೆ ಇತ್ಯಾದಿಗಳನ್ನು ಕಂಡು ಜರ್ಮನ್ ಕಾನ್ಸುಲೇಟ್ ಜನರಲ್ ಆಗಿರುವ ಆಕ್ಚಿಮ್ ಬರ್ಕಾರ್ಟ್ ಅವರು ಚಕಿತರಾದರು.
ಶ್ರೀ ಯದುವೀರ್ ಕೃಷ್ಣರಾಜೇಂದ್ರ ಒಡೆಯರ್ ಅವರು ಕೂಡ, ಪಾರಂಪರಿಕ ಕಟ್ಟಡವನ್ನು ಜೀರ್ಣೋದ್ಧಾರ ಮಾಡಿಸುತ್ತಿರುವ ಡಿಸಿಎಂ ಆಸಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಇಂಥ ಅಪರೂಪದ ಕಟ್ಟಡಗಳನ್ನು ಉಳಿಸಿ ಸಂರಕ್ಷಣೆ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅವರು; ಈ ವರ್ಷಾಂತ್ಯಕ್ಕೆ ಕಾಮಗಾರಿ ಮುಗಿಯುತ್ತದೆ. ಈ ಕಟ್ಟಡವನ್ನು ಪುನರುದ್ಧಾರ ಮಾಡುತ್ತಿರುವುದು ನಮಗೆ ಹೆಮ್ಮೆಯ ಸಂಗತಿ. ಕಾಮಗಾರಿ ಮುಗಿದ ಮೇಲೆ ಇಡೀ ಮಲ್ಲೇಶ್ವರವನ್ನು ಪ್ರತಿಬಿಂಬಿಸುವ ಮ್ಯೂಸಿಯಂ ರೀತಿಯಲ್ಲಿ ಇದನ್ನು ಅಭಿವೃದ್ಧಿ ಮಾಡಲಾಗುವುದು. ಆ ಮೂಲಕ ನಂಜುಂಡಯ್ಯ ಅವರ ಹೆಸರನ್ನು ಚಿರಸ್ಥಾಯಿಗೊಳಿಸಲಾಗುವುದು ಎಂದರು.
Visited Shri HV Nanjundaiah's century-old residence in Malleshwaram to see the restoration work along with HH Maharaja KC Yaduveer Wadiyar, German Consul General Achim Burkart and Deputy Consul General, Karl Philipp Ehlerding.
— Dr. Ashwathnarayan C. N. (@drashwathcn) March 15, 2021
Celebrating #NammaBengaluru's cultural heritage! pic.twitter.com/aa9bk4RM0J
ಕಳೆದ ವರ್ಷದ ನವೆಂಬರ್‌ನಲ್ಲಿ ಜೀರ್ಣೋದ್ಧಾರ ಕೆಲಸ ಶುರುವಾಗಿದೆ. ಕೆಲಸ ಆರಂಭಿಸುವ ಮುನ್ನ ವ್ಯಾಪಕ ಅಧ್ಯಯನ-ಸಂಶೋಧನೆ ಮಾಡಲಾಗಿದೆ. ಎಲ್ಲಿಯೂ ಮೂಲ ಸ್ವರೂಪಕ್ಕೆ ಧಕ್ಕೆ ಇಲ್ಲದೆ ಇಡೀ ಕಟ್ಟಡವನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ. ಅಲ್ಲಲ್ಲಿ ಶಿಥಿಲಗೊಂಡಿರುವ ಕಂಬಗಳು, ಮರದ ಕೆತ್ತನೆ. ಹಲಗೆಗಳು ಇತ್ಯಾದಿಗಳನ್ನು ಅತ್ಯಂತ ಜತನದಿಂದ ರಿಪೇರಿ ಮಾಡುವ ಅಥವಾ ಅದೇ ಶೈಲಿಯಲ್ಲಿ ಬದಲಿಸುವ ಕೆಲಸ ನಡೆಯುತ್ತಿದೆ. ಈ ವಿಷಯದಲ್ಲಿ ತಜ್ಞರಾಗಿರುವ ಅನೇಕರು ಕೆಲಸ ಮಾಡುತ್ತಿದ್ದಾರೆಂದು ಡಿಸಿಎಂ ಮಾಹಿತಿ ನೀಡಿದರು.
ಈ ಸಂಸದರ್ಭದಲ್ಲಿ ಎಚ್.ವಿ. ನಂಜುಂಡಯ್ಯ ಅವರ ಕುಟುಂಬದವರು ಇದ್ದು, ಜೀರ್ಣೋದ್ಧಾರ ಕೆಲಸಗಳನ್ನು ವೀಕ್ಷಣೆ ಮಾಡಿದರು. ಜರ್ಮನ್ ಕಾನ್ಸುಲೇಟ್‌ನ ಉಪ ಕಾನ್ಸುಲ್ ಜನರಲ್ ಕಾರ್ಲ್ ಫಿಲಿಪ್, ಜರ್ಮನ್ ಕಾನ್ಸುಲೇಟ್‌ನ ಸಾಂಸ್ಕೃತಿಕ ವಿಭಾಗದ ಅಧಿಕಾರಿ ಆನ್ ಕ್ರಿಸ್ಟಿನ್ ಸ್ಮಿತ್, ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿ ಸುಜಾತಾ ಸುಂದರಂ, ಬಿಬಿಎಂಪಿ ಕಾರ್ಯ ನಿರ್ವಾಹಕ ಎಂಜಿನಿಯರ್ ಪಾಪ ರೆಡ್ಡಿ ಹಾಗೂ ಎಸ್ತೆಟಿಕ್ ಆರ್ಕಿಟೆಕ್ಟ್ ಸಂಸ್ಥೆಯ ಅಧಿಕಾರಿಗಳು ಕೂಡ ಹಾಜರಿದ್ದರು.