Home ರಾಜಕೀಯ ಉಳಿದ ಎರಡೂವರೆ ವರ್ಷ ನಾನೇ ಸಿಎಂ: ಯಡಿಯೂರಪ್ಪ

ಉಳಿದ ಎರಡೂವರೆ ವರ್ಷ ನಾನೇ ಸಿಎಂ: ಯಡಿಯೂರಪ್ಪ

39
0

ಬೆಂಗಳೂರು:

ಉಳಿದ ಎರಡೂವರೆ ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ಪೂರ್ಣಗೊಳಿಸುತ್ತೇನೆ. ಪೂರ್ಣಾವಧಿಗೆ ನಾನೇ ಮುಖ್ಯಮಂತ್ರಿ ಎಂದು ಬಿ.ಎಸ್ ಯಡಿಯೂರಪ್ಪ ಅವರು ಗುರುವಾರ ಸ್ಪಷ್ಟಪಡಿಸಿದ್ದಾರೆ.

ಇಂದು ವಿಧಾನಸೌಧದಲ್ಲಿ ಸಚಿವರ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಒಂದೂವರೆ ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದು, ಉಳಿದ ಅವಧಿಯೂ ನಾನೇ ಮುಕ್ಯಮಂತ್ರಿ ಆಗಿರುತ್ತೇನೆ. ನಾನು ಪೂರ್ಣಾವಧಿ ಮುಖ್ಯಮಂತ್ರಿ ಎಂಬುದನ್ನು ಈಗಾಗಲೇ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಒಂದಿಬ್ಬರು ಶಾಸಕರಷ್ಟೇ ಪತ್ರ ಬರೆದು, ಹೇಳಿಕೆ ನೀಡಿರಬಹುದು. ಶಾಸಕರ ವಿಭಾಗವಾರು ಸಭೆಯನ್ನು ಕರೆದಿದ್ದೇನೆ. ಅಲ್ಲಿ ಎಲ್ಲವನ್ನು ಚೆರ್ಚಿಸುತ್ತೇನೆ ಎಂದು ಅವರು ಹೇಳುವ ಮೂಲಕ ತಮ್ಮನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲವೆಂದರು.

ಕರ್ನಾಟಕದಲ್ಲಿ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಶೇ.60ಕ್ಕೂ ಹೆಚ್ಚು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. 5,728 ಗ್ರಾಮ ಪಂಚಾಯಿತಿಗಳ ಪೈಕಿ 3,800 ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ. ಇದಕ್ಕೆ ಬಿಜೆಪಿಯ ಸಾಮೂಹಿಕ ನಾಯಕತ್ವ ಕಾರಣ. ನಮ್ಮ ಕಾರ್ಯಕರ್ತರ ಶ್ರಮದ ಪ್ರತಿಫಲವಾಗಿದೆ. 3000 ಸಾವಿರಕ್ಕೂ ಹೆಚ್ಚು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು ಅತ್ಯಂತ ಸಂತಸದ ವಿಷಯವಾಗಿದೆ ಎಂದರು.

ಅಭಿವೃದ್ಧಿ ಭೂಪಟದಲ್ಲಿ ಕರ್ನಾಟಕವನ್ನು ಒಂದನೇ ಸ್ಥಾನಕ್ಕೆ ಕೈಗೊಂಡು ಹೋಗುವ ಬಗ್ಗೆ ಸಚಿವ ಸಂಪುಟದ ಸಹೋದ್ಯೋಗಿಗಳ ಜತೆ ಚರ್ಚೆ ಮಾಡುತ್ತಿದ್ದೇವೆ. ಇದರ ಮಧ್ಯೆ ಬರಗಾಲ, ಅತಿ ವೃಷ್ಠಿ, ಕೋವಿಡ್ ನಂತಹ ಸಂದಿಗ್ದ ಪರಿಸ್ಥಿತಿಯನ್ನು ಎದುರಿಸಿದ್ದೇವೆ. ಆರ್ಥಿಕ ಸಂಕಷ್ಟದ ನಡುವೆಯೂ ಬಜೆಟ್ ನಲ್ಲಿ ತಿಳಿಸಿದಂತಹ ಗುರಿಯನ್ನು ತಲುಪುವ ಕೆಲಸ ಮಾಡುತ್ತೇವೆ. ರಾಜ್ಯವನ್ನು ಅಭಿವೃದ್ಧಿಯ ಭೂಪಟದಲ್ಲಿ 1ನೇ ಸ್ಥಾನದಲ್ಲಿರುವುದನ್ನು ನೋಡಬೇಕು. ಈ ಪ್ರಯತ್ನ ಮಾಡುವ ನಿಟ್ಟಿನಲ್ಲಿ ನಮ್ಮ ಸಂಪುಟದ ಸಹೋದ್ಯೋಗಿಗಳ ಜೊತೆಗೆಗೂಡಿ ಕೆಲಸ ಮಾಡುತ್ತೇನೆ. ಕೊರೋನಾದಂತಹ ಸಂಕಷ್ಟದ ಕಾಲದಲ್ಲೂ ರಾಜ್ಯದ ಅಭಿವೃದ್ದಿ ಪ್ರಗತಿ ಚಕ್ರ ಮುನ್ನಡೆಯುವಂತೆ ನೋಡಿಕೊಳ್ಳುತ್ತಿದ್ದೇವೆ. ಪ್ರಧಾನಿ ಮಾರ್ಗದರ್ಶನದಲ್ಲಿ ಇಡೀ ದೇಶದಲ್ಲಿ ಕೋವಿಡ್ ರೋಗವನ್ನ ಯಶಸ್ವಿಯಾಗಿ ನಿಯಂತ್ರಿಸಲಾಗಿದೆ. ನಮ್ಮ ಸರ್ಕಾರ ಕರ್ನಾಟದಲ್ಲೂ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿದೆ. ರೈತರು, ಕಾರ್ಮಿಕರು, ಆಟೋಚಾಲಕರು ಇತ್ಯಾದಿ ದುಡಿಯುವ ವರ್ಗದವರಿಗೆ ಪರಿಹಾರ ನೀಡಿ ಅವರ ಹಿತಾಸಕ್ತಿಯನ್ನ ಕಾಪಾಡಿದೆ. ಕೋವಿಡ್ ಸಂಕಷ್ಟದಲ್ಲೂ ವ್ಯಾಪಾರ ವ್ಯವಹಾರಕ್ಕೆ ಅನುವು ಮಾಡಿ ಕೊಟ್ಟಿದೆ. ವಿದೇಶೀ ನೇರ ಬಂಡವಾಳ ಹರಿದುಬರುತ್ತಿರುವುದು ಇದಕ್ಕೆ ಪೂರಕವಾಗಿದೆ.1.54 ಕೋಟಿ ಮೊತ್ತದ 90 ಹೂಡಿಕೆ ಪ್ರಸ್ತಾಪಗಳು ಬಂದಿವೆ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ವಿರೋಧ ಪಕ್ಷಗಳು ನರೇಂದ್ರ ಮೋದಿ ಅವರನ್ನ ಟೀಕೆ ಮಾಡಬಹುದು. ಆದರೆ, ಮೋದಿ ರೂಪಿಸಿರುವ ದೂರದೃಷ್ಟಿ ಕಾರ್ಯಕ್ರಮಗಳನ್ನ ಟೀಕಿಸಲು ಸಾಧ್ಯವಿಲ್ಲ. ಕಿಸಾನ್ ಯೋಜನೆ, ಜಗಜೀವನ್ ಮಿಷನ್ ಯೋಜನೆ, ಮಾಸಿಕ ಪಿಂಚಣಿ ಯೋಜನೆ, ಬೇಟಿ ಬಚಾವೋ ಬೇಟಿ ಪಡಾವೋ ಮೊದಲಾದ ಯೋಜನೆಗಳು ನಮ್ಮ ಮುಂದಿದೆ. ಪ್ರಧಾನಿ ಮೋದಿ ಅವರ ದೂರದೃಷ್ಟಿಯ ಈ ಕಾರ್ಯಕ್ರಮಗಳನ್ನು ರೈತರು ಅರ್ಥ ಮಾಡಿಕೊಂಡು ತಮ್ಮ ಪ್ರತಿಭಟನೆಗಳನ್ನ ಕೈಬಿಡಬೇಕು ಎಂದು ಮನವಿ ಮಾಡಿದರು.

ದೇಶಾದ್ಯಂತ ನಡೆದ ಎಲ್ಲಾ ಸಾರ್ವತ್ರಿಕ ಚುನಾವಣೆ, ಉಪಚುನಾವಣೆ, ಸ್ಥಳೀಯ ಸಂಸ್ಥೆ ಚನಾವಣೆಗಳಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿರುವುದಕ್ಕೆ ಪ್ರಧಾನಿ ಮೋದಿ ಅವರ ಸ್ಫೂರ್ತಿದಾಯಕ ನಾಯಕತ್ವ ಕಾರಣ. ಕರ್ನಾಟಕದಲ್ಲೂ ಡಿಸೆಂಬರ್​ನಲ್ಲಿ ನಡೆದ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ 12ರಲ್ಲಿ ಗೆದ್ದಿತ್ತು. ಆರ್ ಆರ್ ನಗರ, ಶಿರಾ ಉಪಚುನಾವಣೆಯಲ್ಲಿ ನಮ್ಮ ಪಕ್ಷ ಗೆದ್ದಿದೆ. ಈ ಹಿಂದೆ ಪಕ್ಷ ಜಯಗಳಿಸದ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿ ಸಾಮರ್ಥ್ಯ ನಿರೂಪಿಸಿದ್ದೇವೆ ಎಂದು ಅವರು ಹೇಳಿಕೊಂಡರು.

ರೈತರಿಗೆ ಅನುಕೂಲಕರವಾದಂತೆ ಕಾಯ್ದೆಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದೆ. ಆದರೆ ಇದನ್ನು ತಪ್ಪಾಗಿ ಅರ್ಥೈಸುವ ಮೂಲಕ ರೈತರನ್ನು ದಾರಿ ತಪ್ಪಿಸುವಂತ ಕೆಲಸವನ್ನು ಕೆಲವು ಪಕ್ಷಗಳು ಮಾಡುತ್ತಿವೆ. 2025 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಬೇಕು ಎನ್ನುವ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ರೂಪಿಸಿದೆ. ರೈತರ ಅಭಿವೃದ್ಧಿಗಾಗಿ ಕೃಷಿ ಮಾರುಕಟ್ಟೆ ಸುಧಾರಣೆಗಾಗಿ ಕಾಯ್ದೆಗೆ ತಿದ್ದುಪಡಿ ತಂದಿದ್ದಾರೆ. ಆ ಮೂಲಕ ರೈತರು ಎಲ್ಲಿ ಬೇಕಾದರು ತಾವು ಬೆಳೆದಂತ ಬೆಳೆಯನ್ನು ಮಾರಾಟ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ಎಪಿಎಂಸಿ ಕಾಯ್ದೆಯನ್ನು ಅವರು ಸಮರ್ಥಿಸಿಕೊಂಡರು. UNI

LEAVE A REPLY

Please enter your comment!
Please enter your name here