ಬೆಂಗಳೂರು:
ಬಜೆಟ್ ಸಂಬಂಧ ಚರ್ಚೆಗೆ ವಿಭಾಗವಾರು ಬಿಜೆಪಿ ಶಾಸಕರ ಸಭೆಯ ಬದಲಾಗಿ ಪಕ್ಷದ ಶಾಸಕಾಂಗದ ಸಭೆ ಕರೆಯುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಅವರಿಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಪತ್ರ ಮುಖೇನ ಒತ್ತಾಯ ಮಾಡಿದ್ದಾರೆ.

ಜನವರಿ 4 ಮತ್ತು 5 ರಂದು ವಿಭಾಗವಾರು ಶಾಸಕರ ಸಭೆ ಕರೆಯಲಾಗಿದೆ. ಆದರೆ ಈ ಮೊದಲು ವಿಭಾಗವಾರು ಶಾಸಕರ ಸಭೆ ಕರದಾಗ ಶಾಸಕರು ತಮ್ಮ ತಮ್ಮ ಕ್ಷೇತ್ರದ ಅಭಿವೃದ್ಧಿಯ ಕುರಿತು ಸಲ್ಲಿಸಿದ ಮನವಿಗೆ ಮುಖ್ಯಮಂತ್ರಿಗಳು ತಕ್ಷಣ ಹಣ ಬಿಡುಗಡೆ ಮಾಡಿ ಎಂದು ಷರಾ ಬರೆದರೂ ಇದುವರೆಗೂ ಹಣ ಬಿಡುಗಡೆಯಾಗಿಲ್ಲ. ಹೀಗಾಗಿ ವಿಭಾಗವಾರು ಸಭೆಗಳು ವಿಘಲವಾಗಿವೆ. ಇದರಿಂದ ಶಾಸಕರ ಮನಸ್ಸಿಗೆ ನೋವಾಗಿದೆ. ತಮ್ಮ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ , ಅನೇಕ ಕಾಮಗಾರಿಗಳಿಗೆ ಇನ್ನೂ ಹಣ ಬಿಡುಗಡೆಯಾಗಿಲ್ಲ. ಅಲ್ಲದೇ ಶಾಸಕರು ಮುಖ್ಯಮಂತ್ರಿಗಳ ಭೇಟೆಗೆ ಹೋದರೆ ಸಿಗುತ್ತಿಲ್ಲ. ಬಹುಶಃ ಇದು ಅವರ ಅನಾರೋಗ್ಯದ ದೃಷ್ಟಿಯಿಂದ ಸಿಗುತ್ತಿಲ್ಲವೆಂದು ಭಾವಿಸಲಾಗಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ರಾಜ್ಯದ ವಿವಿಧ ನಿಗಮ, ಮಂಡಳಿಗಳಿಗೆ ಸ್ಥಳೀಯ ಪ್ರಾಧಿಕಾರಗಳಿಗೆ ಅಧ್ಯಕ್ಷರ ಹುದ್ದೆಗೆ ಮತ್ತು ನಾಮನಿರ್ದೇಶನ ಮಾಡುವಲ್ಲಿ ಸಹ ಶಾಸಕರನ್ನು ಕಡೆಗಣಿಸಿದ್ದರಿಂದ ಅನೇಕ ಕಾರ್ಯಕರ್ತರಿಗೆ ನೋವಾಗಿದೆ. ಕೇವಲ ವಿಭಾಗವಾರು ಸಭೆ ಕರೆಯುವುದು ಸಮಂಜಸವಲ್ಲ. ಆದ್ದರಿಂದ ರಾಜ್ಯಾಧ್ಯಕ್ಷರು ಮತ್ತು ಮುಖ್ಯಮಂತ್ರಿಗಳು ವಿಭಾಗವಾರು ಶಾಸಕರ ಸಭೆಯ ಬದಲಾಗಿ ಜನವರಿ 4 ಅಥವಾ 5 ರಂದು ಪೂರ್ತಿ ಬೆಳಿಗ್ಗೆಯಿಂದ ಸಂಜೆಯವರೆಗೂ ಇಡೀ ದಿನ ರಾಜ್ಯದ ಎಲ್ಲ ನಮ್ಮ ಪಕ್ಷದ ಶಾಸಕಾಂಗದ ಸಭೆ ಕರೆದು “ ಅವರ ಆವಹಾಲುಗಳನ್ನು ಮತ್ತು ಅಭಿವೃದ್ಧಿ ಪರ ಕಾರ್ಯಕೆಲಸಗಳ ಮೇಲೆ ಬೆಳಕು ಚೆಲ್ಲಲು ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ. UNI