ಬೆಂಗಳೂರು: ನಾನು ಈ ಸರಕಾರದ ಕಾನೂನು ಬಾಹಿರ ಕೃತ್ಯಗಳ ಬಗ್ಗೆ ಮೊದಲ ದಿನದಿಂದಲೂ ಮಾತನಾಡುತ್ತಲೇ ಇದ್ದೇನೆ. ಇದನ್ನು ಸಹಿಸಲಾಗದೆ ಸರಕಾರದಲ್ಲಿ ದೊಡ್ಡ ಮಟ್ಟದ ಒಳಸಂಚು ನಡೆಯುತ್ತಿದೆ. ನನಗೆ ಖುದ್ದು ಸಿಎಂ ಮನೆಯಿಂದಲೇ ಮಾಹಿತಿ ಬರುತ್ತಿದೆ. ಸಿಎಂ ಕಾನೂನು ತಜ್ಞರು ಏನು ಮಾಡ್ತಿದ್ದಾರೆ, ಏನೆಲ್ಲಾ ಶೋಧ ಮಾಡುತ್ತಾ ನನ್ನ ವಿರುದ್ಧ ಮಸಲತ್ತು ಮಾಡುತ್ತಿದ್ದಾರೆ ಎನ್ನುವ ವಿಷಯ ನನಗೆ ಗೊತ್ತಾಗುತ್ತಿದೆ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ನೀವೊಬ್ಬರೇ ಅಲ್ಲ ಕಾನೂನು ತಜ್ಞರು. ಎಸ್ಐಟಿ ಅಧಿಕಾರಿಗಳ ಬಳಿ ಪ್ರಕರಣದ ದಾಖಲೆಗಳು ಇದೆಯೋ ಇಲ್ವೋ ಗೊತ್ತಿಲ್ಲ. ನಾನು ಸಾಯಿ ವೆಂಕಟೇಶ್ವರ ಪ್ರಕರಣದ ದಾಖಲೆಗಳನ್ನು ಭದ್ರವಾಗಿ ಇಟ್ಟುಕೊಂಡಿದ್ದೇನೆ ಎಂದು ಹೇಳಿದ್ದಾರೆ. ನಾನು ಮನಸ್ಸು ಮಾಡಿದ್ದರೆ ನಾನು ಸಿಎಂ ಆಗಿದ್ದಾಗಲೇ ಕೇಸ್ ಮುಚ್ಚಿ ಹಾಕಬಹುದಿತ್ತು. ಆದ್ರೆ ನಾನು ಹಾಗೆ ಮಾಡಲಿಲ್ಲ. ಕಾಂಗ್ರೆಸ್ ನನ್ನ ವಿರುದ್ಧ ಪಿತೂರಿ ಮಾಡಿದೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.