ಜನಗಣತಿ 2027: ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮೊಬೈಲ್ ಮೂಲಕ ಸ್ವಯಂ ಗಣತಿ ಪೂರ್ಣಗೊಳಿಸಿದರು
ಬೆಂಗಳೂರು: ಜನಗಣತಿ 2027ರ ಅಂಗವಾಗಿ ಪರಿಚಯಿಸಲಾದ ಡಿಜಿಟಲ್ ಸ್ವಯಂ ಗಣತಿ ವ್ಯವಸ್ಥೆಗೆ ಚಾಲನೆ ನೀಡುವಂತೆ, ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಬುಧವಾರ ತಮ್ಮ ಮೊಬೈಲ್ ಮೂಲಕ ಸ್ವಯಂ ಗಣತಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.
ಏಪ್ರಿಲ್ 1ರಿಂದ ಏಪ್ರಿಲ್ 15, 2026ರವರೆಗೆ ಎಲ್ಲಾ ನಾಗರಿಕರು ಅಧಿಕೃತ ವೆಬ್ಸೈಟ್ se.census.gov.in ಮೂಲಕ ತಮ್ಮ ಮಾಹಿತಿಯನ್ನು ಆನ್ಲೈನ್ನಲ್ಲಿ ದಾಖಲಿಸಬೇಕು ಎಂದು ಅವರು ಮನವಿ ಮಾಡಿದರು. ಈ ಪ್ರಕ್ರಿಯೆ ಸರಳ ಮತ್ತು ಸುರಕ್ಷಿತವಾಗಿದ್ದು, ಸಾರ್ವಜನಿಕರಿಗೆ ಸುಲಭವಾಗಿ ಭಾಗವಹಿಸಲು ಅನುಕೂಲ ಮಾಡಿಕೊಡುತ್ತದೆ ಎಂದು ತಿಳಿಸಿದರು.
ತಮ್ಮ ಅನುಭವ ಹಂಚಿಕೊಂಡ ಅವರು, ಮೊಬೈಲ್ ಸಂಖ್ಯೆ ಮತ್ತು OTP ಮೂಲಕ 5ರಿಂದ 10 ನಿಮಿಷಗಳಲ್ಲಿ ಸ್ವಯಂ ಗಣತಿಯನ್ನು ಪೂರ್ಣಗೊಳಿಸಬಹುದು ಎಂದು ಹೇಳಿದರು. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸ್ವಯಂ ಗಣತಿ ಗುರುತು ಸಂಖ್ಯೆ (Self-Enumeration ID) ಲಭ್ಯವಾಗುತ್ತದೆ. ಈ ಸಂಖ್ಯೆಯನ್ನು ಏಪ್ರಿಲ್ 16ರಿಂದ ಮೇ 15ರವರೆಗೆ ಮನೆಮನೆಗೆ ಭೇಟಿ ನೀಡುವ ಗಣತಿದಾರರಿಗೆ ನೀಡಿದಲ್ಲಿ ಪರಿಶೀಲನೆ ಮತ್ತು ತಿದ್ದುಪಡಿ ಪ್ರಕ್ರಿಯೆ ವೇಗವಾಗಿ ನಡೆಯಲಿದೆ ಎಂದು ಹೇಳಿದರು.
ಮೊಬೈಲ್ ಅಥವಾ ಕಂಪ್ಯೂಟರ್ ಸೌಲಭ್ಯ ಇಲ್ಲದವರು ಸಮೀಪದ ಕಂಪ್ಯೂಟರ್ ಕೇಂದ್ರಗಳು ಅಥವಾ ಸ್ನೇಹಿತರ ಸಹಾಯದಿಂದ ತಮ್ಮ ಮಾಹಿತಿಯನ್ನು ಸಲ್ಲಿಸಿ ನೋಂದಣಿ ಸಂಖ್ಯೆಯನ್ನು ಪಡೆಯಬೇಕು ಎಂದು ಸಲಹೆ ನೀಡಿದರು.
“ನಮ್ಮ ಜನಗಣತಿ – ನಮ್ಮ ಅಭಿವೃದ್ಧಿ” ಎಂಬ ಧ್ಯೇಯದೊಂದಿಗೆ ನಡೆಯುತ್ತಿರುವ ಜನಗಣತಿ 2027, ರಾಜ್ಯ ಮತ್ತು ದೇಶದ ಭವಿಷ್ಯ ರೂಪಿಸುವ ಮಹತ್ವದ ಕಾರ್ಯಕ್ರಮವಾಗಿದೆ. ಸಂಗ್ರಹವಾಗುವ ದತ್ತಾಂಶವು ಆರೋಗ್ಯ, ಶಿಕ್ಷಣ, ವಸತಿ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸೂಕ್ತ ಯೋಜನೆ ರೂಪಿಸಲು ನೆರವಾಗುತ್ತದೆ ಎಂದು ಅವರು ಹೇಳಿದರು.
ನಿಖರ ಮಾಹಿತಿಯನ್ನು ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಮಾತ್ರವಲ್ಲ, ರಾಜ್ಯದ ಅಭಿವೃದ್ಧಿಗೆ ನೀಡುವ ಕೊಡುಗೆ ಕೂಡ ಆಗಿದೆ ಎಂದು ಅವರು ತಿಳಿಸಿದರು. ಯಾವುದೇ ವ್ಯಕ್ತಿ ಗಣತಿಯಿಂದ ಹೊರಗುಳಿಯದಂತೆ ಸರ್ಕಾರ ಕ್ರಮ ಕೈಗೊಂಡಿದ್ದು, ನಿಗದಿತ ಅವಧಿಯಲ್ಲಿ ಸ್ವಯಂ ಗಣತಿಯನ್ನು ಪೂರ್ಣಗೊಳಿಸುವಂತೆ ನಾಗರಿಕರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜನಗಣತಿ ನಿರ್ದೇಶಕ ರಾಮಚಂದ್ರನ್ ಅವರು ಸ್ವಯಂ ಗಣತಿ ವ್ಯವಸ್ಥೆಯ ಕುರಿತು ಮುಖ್ಯ ಕಾರ್ಯದರ್ಶಿಗಳಿಗೆ ವಿವರವಾದ ಮಾಹಿತಿ ನೀಡಿದರು.
