Home ಬೆಂಗಳೂರು ನಗರ ರಮೇಶ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯುವಷ್ಟು ಕಿರುಕುಳವಾಗುತ್ತಿದೆ: ಸಿಡಿ ಯುವತಿ

ರಮೇಶ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯುವಷ್ಟು ಕಿರುಕುಳವಾಗುತ್ತಿದೆ: ಸಿಡಿ ಯುವತಿ

115
0
ಚಿತ್ರ ಕ್ರೆಡಿಟ್: https://tv9kannada.com/

ಬೆಂಗಳೂರು:

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರೊಂದಿಗೆ ರಾಸಲೀಲೆ ಸಿಡಿಯಲ್ಲಿ ಕಾಣಿಸಿಕೊಂಡಿದ್ದ ಯುವತಿ ಬೆಳ್ಳಂಬೆಳ್ಳಗೆ ನಾಲ್ಕನೇ ವಿಡಿಯೋ ಬಿಡುಗಡೆಗೊಳಿಸಿದ್ದಾರೆ.

ಶುಕ್ರವಾರ ಸಂಜೆ ಲೀಕ್ ಆಗಿದ್ದ ಆಡಿಯೋ ಕ್ಲಿಪ್ ತನ್ನದೇ ಎಂದು ಯುವತಿ ಒಪ್ಪಿಕೊಂಡಿದ್ದಾರೆ.

ವಿಡಿಯೋದಲ್ಲಿ ಯುವತಿ, ರಮೇಶ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯುವಷ್ಟು ನನಗೆ ಕಿರುಕುಳವಾಗುತ್ತಿದೆ. ಮಾರ್ಚ್ 2ರಂದು ನನ್ನ ಸಿಡಿ ರಿಲೀಸ್ ಆದಾಗ ಭಯ ಆಗಿತ್ತು. ಮಾಧ್ಯಮಗಳಲ್ಲಿ ಸುದ್ದಿ ನೋಡಿ ಆತಂಕವಾಗಿತ್ತು.

ಮಾಧ್ಯಮಗಳಲ್ಲಿ ನನಗೆ ನರೇಶ್ ಒಬ್ಬರೇ ಪರಿಚಯ. ಹಾಗಾಗಿ ನರೇಶ ಅಣ್ಣನಿಗೆ ಫೋನ್ ಮಾಡಿ ಸಹಾಯ ಕೇಳಿದೆ. ಅದಕ್ಕೆ ನರೇಶ್ ಅಣ್ಣ, ಈ ವಿಚಾರದಲ್ಲಿ ನಾನು ತುಂಬಾ ಚಿಕ್ಕವನು. ಇದಕ್ಕೆ ಪೊಲಿಟಿಕಲ್ ಸಪೋರ್ಟ್ ಬೇಕು ಎಂದು ಹೇಳಿದ್ದರು. ತುಂಬಾ ದೊಡ್ಡವರ ಜೊತೆ ಮಾತಾಡೋಣ ಎಂದು ಹೇಳಿದ್ದರು.

ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯರನ್ನು ಸಂಪರ್ಕಿಸಿ ಸಹಾಯ ಕೇಳೋಣ ಎಂದು ಅವರು ಹೇಳಿದರು. ನಾನು ಹೇಳಿದ ಸ್ಥಳಕ್ಕೆ ನರೇಶ್ ಅಣ್ಣ ನನ್ನನ್ನು ಪಿಕ್ ಮಾಡಿದರು. ಡಿ.ಕೆ.ಶಿವಕುಮಾರ್ ಮನೆ ಬಳಿ ಬಂದಾಗ ನನ್ನ ಕುಟುಂಬಸ್ಥರು ಪದೇ ಪದೇ ಫೋನ್ ಮಾಡುತ್ತಿದ್ದರು. ಅಮ್ಮ ಅಳುತ್ತಿದ್ದಾಗ ಸಮಾಧಾನ ಮಾಡೋಕೆ ಮುಂದಾದೆ. ಅವರು ಅಳುವುದು ನೋಡಿ ನಾನು ಏನು ಮಾಡಿಲ್ಲ. ಕುಟುಂಬಸ್ಥರ ಆತಂಕ ನೋಡಿ ಭಯ ಆಗಿದ್ದರಿಂದ ಅವರ ಸಮಾಧಾನಕ್ಕೆ ಮುಂದಾಗಿ, ಡಿ.ಕೆ.ಶಿವಕುಮಾರ್ ಮನೆ ಬಳಿ ಬಂದಿದ್ದೇನೆ. ಅವರನ್ನು ಭೇಟಿಯಾಗಿ ಎಲ್ಲ ಹೇಳುತ್ತೇನೆ ಎಂದು ಹೇಳಿದೆ. ಆದರೆ, ನಮಗೆ ಡಿ.ಕೆ.ಶಿವಕುಮಾರ್ ಸಿಗದ ಕಾರಣ ವಾಪಸ್ಸು ಅಲ್ಲಿಂದ ಹೊರಡಬೇಕಾಯಿತು.

ನಮ್ಮ ಮನೆಯವರು ಎಲ್ಲಿ ಇದ್ದಾರೆ ನನಗೆ ಗೊತ್ತಿಲ್ಲ. ಆಡಿಯೋ ಕ್ಲಿಪ್​ ಕೂಡ ಎಲ್ಲಿಂದ ಅವರಿಗೆ ಸಿಕ್ತು ಎಂದು ಗೊತ್ತಿಲ್ಲ. ಈಗ ಆಡಿಯೋ ಕ್ಲಿಪ್ ಹೊರ ಬಂದಿರುವುದು ನೋಡುತ್ತಿದ್ದರೆ ನಮ್ಮ ಅಪ್ಪ ಅಮ್ಮನಿಗೆ ರಕ್ಷಣೆ ಇಲ್ಲ ಅನ್ನಿಸುತ್ತಿದೆ. ನಾನು ಸುರಕ್ಷಿತವಾಗಿದ್ದು, ನನ್ನನ್ನು ಯಾರು ಕಿಡ್ನಾಪ್ ಮಾಡಿಲ್ಲ.

ಎಸ್​ಐಟಿ ಅವರಿಗೆ ಇಷ್ಟೇ ಕೇಳಿಕೊಳ್ಳುತ್ತಿದ್ದು, ನೀವು ರಕ್ಷಣೆ ಕೊಡ್ತೀವಿ ಎಂದು ಹೇಳುತ್ತಿದ್ದೀರಿ. ಆದರೆ, ನಮ್ಮ ಅಮ್ಮನಿಗೆ ಎಲ್ಲಿ ಇದ್ದರೋ ಅಲ್ಲಿಗೆ ಹೋಗಿ ರಕ್ಷಣೆ ಕೊಡುವುದು ಅಲ್ಲ. ಅವರು ಎಲ್ಲಿ ಇದ್ದರೂ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಬನ್ನಿ. ನಮ್ಮ ಅಮ್ಮ-ಅಪ್ಪ, ಅಜ್ಜಿ ಹಾಗೂ ಇಬ್ಬರು ತಮ್ಮಂದಿರನ್ನು ಬೆಂಗಳೂರಿಗೆ ಕರೆದುಕೊಂಡು ಬನ್ನಿ. ನಾಳೆ ಏನಾಗುತ್ತೆ ಅಂತಾ ಹೇಳಲು ಆಗಲ್ಲ, ಯಾರಿಗೂ ಗೊತ್ತಿಲ್ಲ. ಆದ್ದರಿಂದ ನಾನು ಇಷ್ಟೇ ಹೇಳೋದು, ನಮ್ಮ ಅಪ್ಪ ಅಮ್ಮ ಎಲ್ಲಿ ಇದ್ದರೂ, ಅವರನ್ನು ಕರೆದುಕೊಂಡು ಬಂದು ಬೆಂಗಳೂರಲ್ಲೇ ಇರಿಸಬೇಕು. ನಾನು ಏನಾದರು ಹೇಳಿಕೆ ಕೊಡಬೇಕು ಎಂದರೇ ನಮ್ಮ ಅಪ್ಪ-ಅಮ್ಮ, ಅಜ್ಜಿ ಹಾಗೂ ಇಬ್ಬರೂ ತಮ್ಮಂದಿರು ನನ್ನ ಕಣ್ಣ ಮುಂದೇ ಇರಬೇಕು. ಅವರಿಗೆ ರಕ್ಷಣೆ ಇಲ್ಲ ಎನಿಸುತ್ತಿದೆ ಎಂದು ಯುವತಿ ಅಳಲು ತೋಡಿಕೊಂಡಿದ್ದಾಳೆ.

ರಮೇಶ್ ಜಾರಕಿಹೊಳಿ, ಒಂದು ದಿನದಲ್ಲಿ ಸರ್ಕಾರ ಬೀಳಿಸಿಬಲ್ಲೆ. ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ. ಅವರನ್ನು ಜೈಲಿಗೆ ಹಾಕಿಸುತ್ತೇನೆ ಎಂದು ಬಹಿರಂಗವಾಗಿಯೇ ಬೆದರಿಕೆ ಹಾಕುತ್ತಾರೆ. ಎಷ್ಟೇ ಹಣ ಖರ್ಚಾಗಲಿ ಅಂದರೆ ಏನರ್ಥ ಅನ್ನೋದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ನಾಳೆ ನನ್ನನ್ನೇ ಕೊಲ್ಲಬಹುದು ಅಥವಾ ಅಪ್ಪ-ಅಮ್ಮನ ಜೀವಕ್ಕೆ ಅಪಾಯ ಉಂಟು ಮಾಡಬಹುದು. ದಯವಿಟ್ಟು ಅಪ್ಪ-ಅಮ್ಮನ ಬೆಂಗಳೂರಿಗೆ ಕರೆ ತಂದು ರಕ್ಷಣೆ ಕೊಡಿ ಎಂದು ಯುವತಿ ಮನವಿ ಮಾಡಿಕೊಂಡಿದ್ದಾರೆ.

ಕಳೆದ 24 ದಿನಗಳಿಂದ ತುಂಬಾ ಟಾರ್ಚರ್ ಆಗುತ್ತಿದೆ. ನಾನು ಏನೇ ಹೇಳಲು ಬಂದರು ಅದು ರಿವರ್ಸ್ ಆಗುತ್ತಿದೆ. ನನ್ನ ಮಾನ, ಮರ್ಯಾದೆ ಹೋಗಿದೆ. ಸಂತ್ರಸ್ತೆ ಆಗಿರುವುದರಿಂದ ನ್ಯಾಯ ಸಿಗಬೇಕು ಎಂದು ವಿಡಿಯೋದಲ್ಲಿ ಯುವತಿ ಮನವಿ ಮಾಡಿದ್ದಾಳೆ.

ಟಿ.ವಿ.ಯವರು ಯಾವುದೇ ಸುದ್ದಿ ಮಾಡಿದರೂ, ಅದು ನಿಜವೂ ಸುಳ್ಳೂ ಎಂದು ತಿಳಿದುಕೊಂಡು ಮಾಡಬೇಕು. ಇಲ್ಲ ಸಲ್ಲದ ಸುದ್ದಿ ಹಾಗೂ ಏನು ಮಾಡಲು ಹೋಗಿ ಇನ್ನೇನು ಆಗುತ್ತಿದೆ. ಇದರಿಂದ ತುಂಬಾ ಕಿರುಕುಳವಾಗುತ್ತಿದೆ ಎಂದು ಯುವತಿ ದೂರಿದ್ದಾರೆ.

LEAVE A REPLY

Please enter your comment!
Please enter your name here