Home ಕರ್ನಾಟಕ ಮಾಧ್ಯಮದವರು ಏನೇ ಬರೆದರೂ ನಮ್ಮನ್ನು ತಿದ್ದಲು ಬರೆಯುತ್ತಿದ್ದಾರೆ ಎಂದು ಭಾವಿಸುತ್ತೇನೆ: ಡಿಸಿಎಂ ಡಿ.ಕೆ. ಶಿವಕುಮಾರ್

ಮಾಧ್ಯಮದವರು ಏನೇ ಬರೆದರೂ ನಮ್ಮನ್ನು ತಿದ್ದಲು ಬರೆಯುತ್ತಿದ್ದಾರೆ ಎಂದು ಭಾವಿಸುತ್ತೇನೆ: ಡಿಸಿಎಂ ಡಿ.ಕೆ. ಶಿವಕುಮಾರ್

12
0

ರಾಮನಗರ: ಮಾಧ್ಯಮದವರು ನನ್ನ ಬಗ್ಗೆ ಏನೇ ಬರೆದರೂ ನಾನು ಬೇಸರ ಮಾಡಿಕೊಳ್ಳುವುದಿಲ್ಲ. ಕೆಲವರು ಪರಿಶೀಲನೆ ಮಾಡದೇ ತಪ್ಪು ಸುದ್ದಿ ಬರೆಯುತ್ತಾರೆ. ಅವರು ಏನೇ ಬರೆದರೂ ನಮ್ಮನ್ನು ತಿದ್ದಲು ಬರೆಯುತ್ತಿದ್ದಾರೆ ಎಂದು ಭಾವಿಸುತ್ತೇನೆ. ಅವರ ಬರವಣಿಗೆಯನ್ನು ಸಂತೋಷದಿಂದ ಸ್ವೀಕರಿಸುತ್ತೇನೆ.

ಕೆಲವರು ಸುದ್ದಿಗಳನ್ನು ವೈಭವೀಕರಿಸಲು ಪ್ರಯತ್ನಿಸುತ್ತಾರೆ. ಕನಕಪುರದಲ್ಲಿ ನಡೆದ ಒಂದೆರಡು ಪ್ರಕರಣಗಳಿಗೆ ಯಾವ ರೀತಿಯ ಬಣ್ಣ ಕೊಡಲಾಗಿತ್ತು ಎಂದು ನೋಡಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೀವು ಒಂದು ಪ್ರಮುಖ ಅಂಗ. ನಾಲ್ಕೂ ಅಂಗಗಳು ಪರಸ್ಪರ ಒಬ್ಬರು ಮತ್ತೊಬ್ಬರು ತಿದ್ದಬೇಕು. ಕೆಲವು ಮಾಧ್ಯಮಗಳಲ್ಲಿ ಎಲ್ಲವನ್ನು ಟೀಕೆ ಮಾಡುವ ಪ್ರವೃತ್ತಿ ಇದೆ.

ಈಗ ಸಮಾಜ ನಿಮಗಿಂತಲೂ ಹೆಚ್ಚು ವೇಗವಾಗಿದೆ. ಸಿಟಿಜನ್ ಜರ್ನಲಿಸಂ ಎಂಬ ಪರಿಕಲ್ಪನೆ ಆರಂಭವಾಗಿದ್ದು, ಹಳ್ಳಿಯಲ್ಲಿರುವ ಹುಡುಗ ತಮ್ಮ ವಿಚಾರವನ್ನು ತಾನೇ ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಾನೆ. ಮಾಧ್ಯಮಗಳಲ್ಲಿ ಸ್ಪರ್ಧೆ ಹೆಚ್ಚಾಗಿದೆ.

ಟಿವಿ ಮತ್ತು ಯೂಟೂಬ್ ಚಾನೆಲ್ ಗಳು ಹೆಚ್ಚಾಗಿದ್ದು, ಪತ್ರಿಕೆಗಳ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಪ್ರಾಮಾಣಿಕವಾಗಿರುವ ಮಾಧ್ಯಮಗಳಿಗೆ ಸಮಾಜ ಗೌರವ ನೀಡುತ್ತದೆ. ಹೀಗಾಗಿ ನೀವು ಬಹಳ ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗುತ್ತದೆ.

ಇತ್ತೀಚೆಗೆ ತುಂಗಾಭದ್ರ ಅಣೆಕಟ್ಟಿಗೆ ಭೇಟಿ ನೀಡಿದ್ದೆ. ಅಣೆಕಟ್ಟಿನ ಕ್ರಸ್ಟ್ ಗೇಟ್ ಮುರಿದಾಗ ವಿರೋಧ ಪಕ್ಷಗಳ ನಾಯಕರು ನಮ್ಮ ವಿರುದ್ಧ ಮುಗಿಬಿದ್ದರು. ನನ್ನಿಂದಲೇ ಗೇಟ್ ಮುರಿದಿರುವಂತೆ ಮಾತನಾಡಿದರು. ಅವರು ತಮ್ಮ ಚಟಕ್ಕಾಗಿ ಮಾತನಾಡುತ್ತಿದ್ದರು. ನಾನು ಆಗ ಅವರಿಗೆ ಉತ್ತರ ನೀಡಲಿಲ್ಲ. ಐದು ದಿನಗಳಲ್ಲೇ ಗೇಟ್ ದುರಸ್ತಿ ಮಾಡಿಸಿದೆವು. ಆಗ ನಾನು ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ ಎಂದು ಉತ್ತರ ಕೊಟ್ಟಿದ್ದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮತ್ತೆ ಆಣೆಕಟ್ಟು ತುಂಬಲಿದೆ.

ಮಾಧ್ಯಮದವರು ತಮ್ಮ ಸಮಸ್ಯೆಗಳ ವಿಚಾರವಾಗಿ ಮನವಿ ಪತ್ರ ನೀಡಿದ್ದೀರಿ. ನಿಮ್ಮ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದೇನೆ. ಮೂರ್ನಾಲ್ಕು ದಿನಗಳ ನಂತರ ಅವರನ್ನು ಭೇಟಿ ಮಾಡಿ. ಇಷ್ಟೆಲ್ಲಾ ಮಾಡಿದರೂ ನೀವು ನಮ್ಮ ವಿರುದ್ಧ ಬರೆಯುತ್ತೀರಿ ಎಂದೂ ಗೊತ್ತಿದೆ. ಬರೆಯಿರಿ ಪರವಾಗಿಲ್ಲ.

“ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ, ನಾವೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು” ಎಂದು ಇಂದಿರಾ ಗಾಂಧಿ ಅವರು ಹೇಳಿದ್ದಾರೆ. ಅದೇ ರೀತಿ ಮಾಧ್ಯಮಗಳು ಸುದ್ದಿ ಪ್ರಕಟಿಸುವ ಮುನ್ನ ಸತ್ಯಾಂಶಗಳನ್ನು ಶೋಧಿಸಬೇಕು. ಈಗ ಮಾಧ್ಯಮಗಳು ಹೆಚ್ಚಾಗಿ ಅವರು ಹೀಗೆ ಹೇಳಿದರು, ಇವರು ಹೀಗೆ ಹೇಳಿದ್ದಾರೆ ಎಂದು ಪ್ರಶ್ನೆ ಮಾಡುವಿರಿಯೇ ಹೊರತು, ಅವರು ಹೇಳಿರುವುದರಲ್ಲಿ ಸತ್ಯಾಸತ್ಯತೆ ಇದೆಯೋ ಇಲ್ಲವೋ ಎಂದು ಪರಿಶೀಲಿಸುವುದಿಲ್ಲ. ಮಾಧ್ಯಮದವರು ಹೇಳಿದರು ಎಂದು ನಾವು ಪರಿಶೀಲನೆ ಮಾಡದೇ ಉತ್ತರ ಕೊಟ್ಟರೆ ನಮ್ಮ ಮರ್ಯಾದೆಯೂ ಹೋಗುತ್ತದೆ. ಹೀಗಾಗಿ ವಾಸ್ತವಾಂಶಗಳನ್ನು ಪರಿಶೀಲಿಸಿ ನಂತರ ಸುದ್ದಿ ಪ್ರಕಟಿಸಿ.

ಮಾಧ್ಯಮಗಳಲ್ಲಿ ಅಪರಾಧ ಹಾಗೂ ಸಿನಿಮಾ ಸುದ್ದಿಗಳೇ ವೈಭವೀಕೃತ ಆಗುತ್ತಿವೆ. ಹೀಗಾಗಿ ಅವುಗಳನ್ನೇ ಹೆಚ್ಚಾಗಿ ತೋರಿಸುತ್ತೇವೆ ಎಂದು ನನ್ನ ಅನೇಕ ಮಾಧ್ಯಮ ಸ್ನೇಹಿತರೇ ಹೇಳಿದ್ದಾರೆ.

ನೀವು ನಿಮ್ಮ ಆತ್ಮಬಲ ಕಳೆದುಕೊಳ್ಳಬೇಡಿ. ಮನುಷ್ಯ ಹುಟ್ಟಿದ ನಂತರ ಬದುಕುತ್ತಾನೆ. ಆದರೆ ಸಾಯುವ ಮುನ್ನ ಏನು ಸಾಧನೆ ಮಾಡಿದೆ, ಯಾವ ಆದರ್ಶ ಇಟ್ಟುಕೊಂಡು ಬದುಕಿದೆ ಎಂಬುದು ಬಹಳ ಮುಖ್ಯವಾಗುತ್ತದೆ.

ಸಾಧಿಸುತ್ತೇನೆ ಎಂಬ ಛಲ ಇದ್ದರೆ ಯಾವುದೂ ಅಸಾಧ್ಯವಲ್ಲ, ಸೋಲು ನಮ್ಮನ್ನು ಕಾಡುವುದಿಲ್ಲ. ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಅದಕ್ಕೆ ಪೂರಕವಾಗಿ ಶ್ರಮ ಇರಬೇಕು. ಮಾಧ್ಯಮಗಳ ಎಷ್ಟೋ ಲೇಖನಗಳು ಸರ್ಕಾರಗಳನ್ನು ಪರಿವರ್ತನೆ ಮಾಡಿವೆ. ಜೆ.ಹೆಚ್ ಪಟೇಲ್ ಅವರ ಕಾಲದಲ್ಲಿ ಬೆಂಗಳೂರಿಗರಿಗೆ ನೀರು ಪೂರೈಸುವ ಸಂಸ್ಥೆಯನ್ನು ಖಾಸಗೀಕರಣ ಮಾಡಬೇಕು ಎಂಬ ವಿಚಾರದಲ್ಲಿ ಎಂ ಸಿ ನಾಣಯ್ಯನವರು ಭಾಷಣ ಮಾಡಿದ್ದರು. ನಿಮ್ಮ ಬರವಣಿಗೆ ವಿಚಾರಧಾರೆ, ಸರ್ಕಾರ ಹಾಗೂ ಸಮಾಜಕ್ಕೆ ಆಧಾರ ಸ್ತಂಭವಾಗಬೇಕು. ಸರ್ಕಾರವನ್ನು ಟೀಕಿಸಿ ತಿದ್ದುವುದು ಸರ್ವೇ ಸಾಮಾನ್ಯ.

ಈ ಜಿಲ್ಲೆಯಿಂದ ಮೂವರು ಸಿಎಂಗಳಾಗಿದ್ದರು. ಕೆಂಗಲ್ ಹನುಮಂತಯ್ಯ, ದೇವೇಗೌಡರು ಹಾಗೂ ಕುಮಾರಸ್ವಾಮಿ ಎಂದು ನಿಮ್ಮ ಅಧ್ಯಕ್ಷರು ಹೇಳಿದರು. ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರೂ ಕನಕಪುರದಿಂದ ವಿಧಾನಸಭೆಗೆ ಹೋಗಿದ್ದರು. ಅವರೆಲ್ಲ ಯಾವ ಸಾಕ್ಷಿ ಗುಡ್ಡೆ ಬಿಟ್ಟು ಹೋಗಿದ್ದಾರೆ ಎಂಬುದನ್ನೂ ನೀವು ಹೇಳಬೇಕು. ಕೆಂಗಲ್ ಹನುಮಂತಯ್ಯ ಅವರು ವಿಧಾನ ಸೌಧ ಕಟ್ಟಿಸಿದ್ದಾರೆ. ಅದೇ ರೀತಿ ಬೇರೆಯವರ ಸಾಧನೆ ಏನು ಎಂದು ಹೇಳಬೇಕು. ಕುಮಾರಸ್ವಾಮಿ ಅವರು ಈಗ ನಮ್ಮ ಜಿಲ್ಲೆ ಬಿಟ್ಟು ಹೋಗಿದ್ದಾರೆ, ಈಗ ಆ ವಿಚಾರಕ್ಕೆ ತಲೆಕೆಡಿಸಿಕೊಳ್ಳುವುದು ಬೇಡ. ಚರ್ಚೆ ಮಾಡುವುದೂ ಬೇಡ. ಅವರು ಮಂಡ್ಯಕ್ಕೆ ಹೋಗಿದ್ದಾರೆ. ಅವರು ಕಾರ್ಖಾನೆ ಮಾಡುತ್ತಾರಂತೆ ಮಾಡಲಿ, ನಾವು ಅದಕ್ಕಾಗಿ ಕಾಯುತ್ತಾ ಕೂತಿರೋಣ. ನಮ್ಮ ಹುಡುಗರನ್ನು ಕೆಲಸಕ್ಕೆಂದು ಅಲ್ಲಿಗೆ ಕಳುಹಿಸೋಣ. ನಮ್ಮ ಸರ್ಕಾರದಿಂದ ಅವರಿಗೆ ಯಾವ ಸಹಕಾರ ಬೇಕೋ ಕೊಡೋಣ.

ನೀವು ನಿಮ್ಮ ಆತ್ಮಸಾಕ್ಷಿ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ ಎಂದು ಮನವಿ ಮಾಡುತ್ತೇನೆ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದು ನಾನು ಹೇಳುತ್ತಿರುತ್ತೇನೆ. ನನ್ನ ಪ್ರಕರಣದ ತೀರ್ಪಿನ ಬಳಿಕ ನನ್ನ ದೈವಶಕ್ತಿ ದರ್ಶನಕ್ಕೆ ಹೋದಾಗ ನನ್ನ ಶಾಸಕ ಮಿತ್ರರಿಗೆ ಈ ಮಾತನ್ನು ಹೇಳಿದ್ದೆ. ನನ್ನ ಪ್ರಕರಣದ ತೀರ್ಪಿಗೆ ಕೆಲವರು ಆತಂಕಕ್ಕೆ ಒಳಗಾಗಿದ್ದರು. ಇದು ನನ್ನ ಪ್ರಕರಣವನ್ನು ಸಿಬಿಐ ತನಿಖೆ ಮಾಡಬೇಕಾ ಅಥವಾ ಲೋಕಾಯುಕ್ತ ತನಿಖೆ ಮಾಡಬೇಕಾ ಎಂಬುದಷ್ಟೇ ವಿಚಾರ. ಯಾರೇ ತನಿಖೆ ಮಾಡಲಿ. ನಾನು ತಪ್ಪು ಮಾಡಿಲ್ಲ. ನಾನು ಸರಿಯಾಗಿದ್ದು, ಕೊಡುವ ಲೆಕ್ಕ ಸರಿಯಿದ್ದರೆ ಅಷ್ಟೇ ಸಾಕು. ವಿವಿಧ ಹಂತದ ನ್ಯಾಯಾಲಯಗಳಿವೆ. ಎಲ್ಲಾದರೂ ಒಂದು ಕಡೆ ನ್ಯಾಯ ಸಿಗುತ್ತದೆ.

ನಾನು ತಿಹಾರ್ ಜೈಲಲ್ಲಿ ಇದ್ದಾಗಲೂ ಕಂಗೆಡದೆ ಪುಸ್ತಕ ಓದುತ್ತಾ ಕುಳಿತಿದ್ದೆ. ನಾನು ಎಂದಿಗೂ ನನ್ನ ಆತ್ಮವಿಶ್ವಾಸ ಕಳೆದುಕೊಳ್ಳುವುದಿಲ್ಲ. ನನಗೆ ಯಾರು ತೊಂದರೆ ಕೊಡುತ್ತಾ ಬಂದಿದ್ದಾರೆ ಎಂದು ಹೇಳುವುದಿಲ್ಲ. ನಾನು ಎಂದಿಗೂ ಹಿಟ್ ಅಂಡ್ ರನ್ ಮಾಡುವುದಿಲ್ಲ. ನಾನು ಮಾತು ಕೊಟ್ಟರೆ ಅದನ್ನು ಉಳಿಸಿಕೊಳ್ಳುತ್ತೇನೆ.

LEAVE A REPLY

Please enter your comment!
Please enter your name here