ಹುಬ್ಬಳ್ಳಿ:
ನನ್ನ ರಕ್ತದಲ್ಲಿ ಬರೆದುಕೊಡುತ್ತೇನೆ. ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಜಗದೀಶ್ ಶೆಟ್ಟರ್ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಗಳವಾರ ಹೇಳಿದರು.
ಹುಬ್ಬಳ್ಳಿ ನಗರದ ಕ್ಯೂಬಿಕ್ಸ್ ಹೋಟೆಲ್‌ನಲ್ಲಿ ಮಂಗಳವಾರ ಲಿಂಗಾಯತ ಮುಖಂಡರ ಹಾಗೂ ಧಾರವಾಡ ವಿಭಾಗ ಮಟ್ಟದ ಸಂಘಟನಾತ್ಮಕ ಸಭೆಯನ್ನು ನಡೆಸಿದರು.
ಸಭೆಯಲ್ಲಿ ಹಲವು ಲಿಂಗಾಯತ ನಾಯಕರು ಪಾಲ್ಗೊಂಡಿದ್ದರು. ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, ಈ ಬಾರಿಯ ಚುನಾವಣೆಯಲ್ಲಿ ಪಕ್ಷ ದ್ರೋಹಿ ಜಗದೀಶ್ ಶೆಟ್ಟರ್ ಗೆಲ್ಲಬಾರದು ಎಂದು ಹೇಳಿದ್ದು, ಇದಕ್ಕಾಗಿ ಹಗಲು-ರಾತ್ರಿ ಶ್ರಮಿಸಬೇಕೆಂದು ಹೇಳಿದ್ದಾರೆ. ಈ ಕರೆಗೆ ಎಲ್ಲಾ ನಾಯಕರು ಒಪ್ಪಿಕೊಂಡಿದ್ದಾರೆಂದು ತಿಳಿದುಬಂದಿದೆ.
#WATCH | "I will give it in writing with blood that Jagadish Shetter will not win from here," says BJP leader BS Yediyurappa in a meeting in Hubballi.
— ANI (@ANI) April 26, 2023
Congress leader Jagadish Shettar is contesting from Hubli-Dharwad Central Assembly constituency in Karnataka
(Video source:BJP) pic.twitter.com/mdfj3PgsxH
ಸಭೆ ಬಳಿಕ ಮಾತನಾಡಿರುವ ಯಡಿಯೂರಪ್ಪ ಅವರು, ಶೆಟ್ಟರ್’ಗೆ ನಾವು ಏನು ಅನ್ಯಾಯ ಮಾಡಿದ್ದೇವೆ. ವಿಶೇಷ ಕಾರಣಕ್ಕೆ ಅಭ್ಯರ್ಥಿ ಮಾಡಲಾಗುತ್ತಿಲ್ಲ. ಬದಲಾಗಿ ಕೇಂದ್ರದಲ್ಲಿ ಸಚಿವ ಸ್ಥಾನ, ಪತ್ನಿಗೆ ಟಿಕೆಟ್ ನೀಡುತ್ತೇವೆಂದು ಹೇಳಿದರೂ ಪಕ್ಷಕ್ಕೆ ದ್ರೋಹ ಎಸಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆಂದು ಕಿಡಿಕಾರಿದರು.
ಮಾತ್ರವಲ್ಲದೇ, ಬಿಜೆಪಿ ಎಲ್ಲಾ ಅಧಿಕಾರವನ್ನು ನೀಡಿದಾಗಲೂ ಪಕ್ಷಕ್ಕೆ ದ್ರೋಹ ಮಾಡಿ ಕಾಂಗ್ರೆಸ್ ಸೇರಿರುವ ಜಗದೀಶ ಶೆಟ್ಟರ ಅವರಿಗೆ ತಕ್ಕಪಾಠ ಕಲಿಸಬೇಕು ಎಂದು ಕರೆ ನೀಡಿದರು.
ಸಮುದಾಯದ ಜನರು ಅಪಪ್ರಚಾರಕ್ಕೆ ಕಿವಿ ಕೊಡಬಾರದು. ಯಾವುದೇ ಸಮೀಕ್ಷೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಯಾರ ಬೆಂಬಲ ಕೇಳದೆ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರಲು ಪಣ ತೊಟ್ಟಿದ್ದೇವೆ. ”ರಾಜ್ಯಕ್ಕೆ ಐದು ಬಾರಿ ಮೋದಿ ಬರಲಿದ್ದಾರೆ. ಯಾವ ಶಕ್ತಿ ಸಹ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ. ಅಭ್ಯರ್ಥಿಗಳ ಗೆಲುವಿಗೆ ನಾವು ಶ್ರಮಿಸಬೇಕು. ಶೆಟ್ಟರ ಜತೆ ಇದ್ದವರನ್ನು ಕರೆಸಿ ಮಾತನಾಡಬೇಕು. ಅವರನ್ನು ಯಾವುದೇ ಕಾರಣಕ್ಕೂ ಕ್ಷಮಿಸಲು ಸಾಧ್ಯವಿಲ್ಲ. ಶೆಟ್ಟರ ಗೆಲ್ಲಲು ಸಾಧ್ಯವಿಲ್ಲ. ಇದನ್ನು ನಾನು ನನ್ನ ರಕ್ತದಲ್ಲಿ ಬರೆದುಕೊಡುತ್ತೇನೆ. ಪಕ್ಷದ ಅಭ್ಯರ್ಥಿಗಳ ಗೆಲ್ಲಿಸಲು ನಾನು ನಾಲ್ಕೈದು ಬಾರಿ ಪ್ರಚಾರಕ್ಕೆ ಬರುತ್ತೇನೆಂದು ಹೇಳಿದರು.
ಪಕ್ಷದ ಅಭ್ಯರ್ಥಿ ಪರವಾಗಿ ಬುಧವಾರ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಈ ರ್ಯಾಲಿಯಲ್ಲಿ ನಾನೂ ಪಾಲ್ಗೊಳ್ಳುತ್ತೇನೆ. ರಾಜಕೀಯ ದೊಂಬರಾಟ ಮಾಡುತ್ತಿರುವವರಿಗೆ ಪಾಠ ಕಲಿಸಬೇಕು. ರ್ಯಾಲಿಯಲ್ಲಿ ಪಾಲ್ಗೊಂಡ ಜನರ ಘೋಷಣೆಯಿಂದ ಮನೆಯಲ್ಲಿ ಕುಳಿತಿರುವ ಶೆಟ್ಟರ್ ಗೆ ನಡುಕ ಉಂಟಾಗಬೇಕು ಎಂದು ತಿಳಿಸಿದರು.
ಶೆಟ್ಟರ್ ಅವರನ್ನು ಮನೆಗೆ ಕಳುಹಿಸಬೇಕು. ಅವರು ಜೀವನದಲ್ಲಿ ಇಂತಹ ಕೆಲಸ ಮತ್ತೆ ಮಾಡಬಾರದು. ರ್ಯಾಲಿ ಅದಕ್ಕೆ ಉತ್ತರ ನೀಡಬೇಕು. ಈ ಕ್ಷೇತ್ರವನ್ನು ಸವಾಲಾಗಿ ಸ್ವೀಕರಿಸಿ ಶೆಟ್ಟರ್ ಕಂಪನಿಗೆ ಪಾಠ ಕಲಿಸಬೇಕು, ಇಂದಿನಿಂದ ನಾನು ಶೆಟ್ಟರ್ ಹೆಸರು ಹೇಳಲು ಇಷ್ಟ ಪಡುವುದಿಲ್ಲ. ಅವರು ನಂಬಿಕೆ ದ್ರೋಹಿ, ವಿಶ್ವಾಸ ದ್ರೋಹಿ. ಪಕ್ಷಕ್ಕೆ ದ್ರೋಹ ಬಗೆಯುವವರನ್ನು ಜನರು ಸುಮ್ಮನೆ ಬಿಡಬಾರದು. ಎಲ್ಲಾ ಮುಖಂಡರು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಒಂದಾಗಿ ಕೆಲಸ ಮಾಡಬೇಕು ಎಂದರು