Home ಬೆಂಗಳೂರು ನಗರ ಹೈಕೋರ್ಟ್ ಚಾಟಿ ಬಳಿಕ ಎಂಜಿನಿಯರ್ ವಿರುದ್ಧ ಕ್ರಮಕ್ಕೆ ಸರ್ಕಾರ ಮುಂದು

ಹೈಕೋರ್ಟ್ ಚಾಟಿ ಬಳಿಕ ಎಂಜಿನಿಯರ್ ವಿರುದ್ಧ ಕ್ರಮಕ್ಕೆ ಸರ್ಕಾರ ಮುಂದು

67
0
Karnataka High Court

ಬೆಂಗಳೂರು:

ಕೋವಿಡ್ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಲಾಕ್‍ಡೌನ್ ಜಾರಿಯಲ್ಲಿದ್ದಾಗ ಟೆಂಡರ್ ಆಹ್ವಾನಿಸದೇ 5.02 ಕೋಟಿ ರೂ.ಮೊತ್ತದ ಕಾರ್ಯಾದೇಶ ನೀಡಿ ಗುತ್ತಿಗೆದಾರರಿಂದ ಕೆಲಸ ಮಾಡಿಸಿದ್ದ ಕಾರ್ಯಕಾರಿ ಎಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.

ಮಂಡ್ಯ ಜಿಲ್ಲೆಯ ನಾಗೇಗೌಡ ಅವರ ಮನವಿಗೆ ರಾಜ್ಯ ಸರಕಾರವು ಸಮ್ಮತಿಸಿರುವುದರಿಂದ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಇತ್ಯರ್ಥಪಡಿಸಿದೆ.

ಕೋವಿಡ್‌ನಿಂದ ಇಡೀ ದೇಶದಲ್ಲಿ ಲಾಕ್‌ಡೌನ್‌ ಜಾರಿಯಿದ್ದಾಗ ಟೆಂಡರ್‌ ಆಹ್ವಾನಿಸದೇ ₹5.02 ಕೋಟಿ ಮೊತ್ತದ ಕಾರ್ಯಾದೇಶ ನೀಡಿ ಕೆಲಸ ಮಾಡಿಸಿದ್ದ ಕಾರ್ಯಕಾರಿ ಎಂಜಿನಿಯರ್‌ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ತನಿಖೆ ನಡೆಸಲು ಅನುಮತಿಸಲಾಗಿದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದ್ದು, ಇದನ್ನು ಪರಿಗಣಿಸಿ ಹೈಕೋರ್ಟ್‌ ಅರ್ಜಿಯನ್ನು ಇತ್ಯರ್ಥಪಡಿಸಿದೆ.

“ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅವರು 2023ರ ಏಪ್ರಿಲ್‌ 11ರಂದು ಕಾರ್ಯಕಾರಿ ಎಂಜಿನಿಯರ್‌ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಗೆ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ 17(ಎ) ಅಡಿ ಸಕ್ಷಮ ಪ್ರಾಧಿಕಾರ (ರಾಜ್ಯ ಸರ್ಕಾರ) ಅನುಮತಿಸಿರುವ ಆದೇಶ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರೂ ಅದು ನಿವೃತ್ತ ಕಾರ್ಯಕಾರಿ ಎಂಜಿನಿಯರ್‌ ಮೂರನೇ ಪ್ರತಿವಾದಿ ಕೆ ಶ್ರೀನಿವಾಸ್‌ ಅಥವಾ ತನಿಖಾ ಸಂಸ್ಥೆಯ ಮೇಲೆ ಪೂರ್ವಾಗ್ರಹ ಉಂಟು ಮಾಡಲಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಈ ಹಿನ್ನೆಲೆಯಲ್ಲಿ ಶ್ರೀನಿವಾಸ್‌ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 420, 406, 409, 465, 468, 471, 477ಎ ಜೊತೆಗೆ 120ಬಿ, ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ 7, 8, 9, 13(1)(ಸಿ) ಮತ್ತು (ಡಿ) ಅಡಿ ತನಿಖೆ ಮುಂದುವರಿಯಲಿದೆ.

ಮಾರ್ಚ್‌ 27ರ ಆದೇಶದಲ್ಲಿ ನ್ಯಾಯಾಲಯವು “ಕಾರ್ಯಕಾರಿ ಎಂಜಿನಿಯರ್‌ ಆಗಲಿ ಅಥವಾ ಅನುಮತಿ ನಿರಾಕರಿಸಿದ ಸಕ್ಷಮ ಪ್ರಾಧಿಕಾರವಾಗಲಿ ತನ್ನ ಹಣ ಕಳೆದುಕೊಂಡಿಲ್ಲ. ಸಾರ್ವಜನಿಕರ ಹಣ ಇಲ್ಲಿ ವಿನಿಯಮಯವಾಗಿದೆ. ಲೋಕಾಯುಕ್ತರ ಮುಂದಿದ್ದ ಪ್ರಕ್ರಿಯೆಯು ಈಗಾಗಲೇ ಮುಕ್ತಾಯವಾಗಿದ್ದರೂ ಸಕ್ಷಮ ಪ್ರಾಧಿಕಾರವು ಅನುಮತಿ ನೀಡಲು ನಿರಾಕರಿಸಿರುವುದಕ್ಕೆ ನಮಗೆ ಆಘಾತವಾಗಿದೆ” ಎಂದು ಪೀಠವು ಹೇಳಿತ್ತು.

ಹೇಮಾವತಿ ಎಡದಂಡೆ ಕಾಲುವೆ ಘಟಕದ ತ್ಯಾಜ್ಯ ವಿಯರ್ ಕಾಲುವೆ ಮತ್ತು ಅದರ ಗೋಡೆಯ ದುರಸ್ತಿ ಕಾರ್ಯಗಳಿಗೆ, ತೂಬು ಕಾಲುವೆಯ ರಿಪೇರಿಗೆ ಮತ್ತಿತರ ಕೆಲಸಕ್ಕಾಗಿ 2020ರ ಮಾರ್ಚ್‌ 27ರಂದು ಗುತ್ತಿಗೆದಾರ ಪಿ ಕೆ ಶಿವರಾಮು ಎಂಬವರಿಗೆ ಈಗ ನಿವೃತ್ತರಾಗಿರುವ ಕಾರ್ಯಕಾರಿ ಎಂಜಿನಿಯರ್‌ ಕೆ ಶ್ರೀನಿವಾಸ್‌ ಅವರು ಕಾರ್ಯಾದೇಶ ನೀಡಿದ್ದಾರೆ ಎಂದು ಅಧಿಕೃತ ದಾಖಲೆಗಳನ್ನು ಪರಿಶೀಲಿಸಿದಾಗ ತಿಳಿದು ಬಂದಿದೆ ಎಂದು ನ್ಯಾಯಾಲಯ ಹೇಳಿತ್ತು.

2020ರ ಮಾರ್ಚ್‌ 24ರಂದು ಇಡೀ ದೇಶ ಲಾಕ್‌ಡೌನ್‌ನಲ್ಲಿದ್ದಾಗ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯಿದೆಯಲ್ಲಿ ವಿನಾಯಿತಿ ನಿಬಂಧನೆಯ ಲಾಭ ಪಡೆದು ಈ ಕೆಲಸ ಮಾಡಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿತ್ತು.

ಇಡೀ ದೇಶ ಲಾಕ್‌ಡೌನ್‌ನಲ್ಲಿದ್ದಾಗ ಟೆಂಡರ್‌ ಕರೆಯದೇ ಕಾರ್ಯಾದೇಶ ನೀಡಿರುವ ಕಾರ್ಯಕಾರಿ ಎಂಜಿನಿಯರ್ ಅವರ ವಿರುದ್ಧದ ತನಿಖೆಗೆ ಅನುಮತಿ ನೀಡಲು ನಿರಾಕರಿಸಿರುವ ದಾಖಲೆಗಳನ್ನು ಸಲ್ಲಿಸಬೇಕು ಎಂದು ನ್ಯಾಯಾಲಯವು ಆದೇಶಿಸಿತ್ತು. ಮೂರು ದಿನದಲ್ಲಿ ಕೆಲಸ ಮುಗಿಸಿದ್ದು, ಇದಕ್ಕಾಗಿ ₹5.02 ವೆಚ್ಚವಾಗಿದೆ ಎಂದು ಗುತ್ತಿಗೆದಾರ ಬಿಲ್‌ ಸಲ್ಲಿಸಿದ್ದರು. ಇದನ್ನು ಒಪ್ಪಿ ಮಾರ್ಚ್‌ 31ರಂದು ಕಾರ್ಯಕಾರಿ ಎಂಜಿನಿಯರ್‌ ಅವರು ಬಿಲ್‌ ಪಾವತಿ ಮಾಡಿದ್ದರು.

ಇದನ್ನು ಪ್ರಶ್ನಿಸಿ ಅರ್ಜಿದಾರರು ಶ್ರೀನಿವಾಸ್‌ ಮತ್ತು ಇತರರ ವಿರುದ್ಧ ವಿಚಾರಣಾಧೀನ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯವು ತನಿಖೆಗೆ ಆದೇಶಿಸಿತ್ತು.

ಲೋಕಾಯುಕ್ತರ ಮುಂದೆ ಇದೇ ರೀತಿಯ ಪ್ರಕರಣ ವಿಚಾರಣೆಗೆ ಬಾಕಿ ಇದೆ ಎಂದು ಸಕ್ಷಮ ಪ್ರಾಧಿಕಾರವು ಅನುಮತಿ ನೀಡಲು ತನಿಖಾಧಿಕಾರಿ ಕೋರಿಕೆಗೆ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

LEAVE A REPLY

Please enter your comment!
Please enter your name here