ಬೆಂಗಳೂರು, ಮಾ.25: ‘ಸಂವಿಧಾನ ಬದಲಿಸುತ್ತೇವೆಂದು ಹೇಳಿರುವುದು ಬಿಜೆಪಿ ಪಕ್ಷದ ನಾಯಕರು. ನಾನು ಸಂವಿಧಾನ ಬದಲಿಸುತ್ತೇನೆಂದು ಹೇಳಿದ್ದರೆ ಇಂದೇ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ನನ್ನ ಹೇಳಿಕೆ ತೆಗೆಸಿ ನೋಡಲಿ. ಬಿಜೆಪಿಯವರ ಆರೋಪದಲ್ಲಿ ಯಾವ ಅರ್ಥವೂ ಇಲ್ಲ. ನನ್ನ ಸಂದರ್ಶನವನ್ನು ಪೂರ್ಣವಾಗಿ ನೋಡಿ, ನಾನು ಅಲ್ಲಿ ಏನು ಮಾತನಾಡಿದ್ದೇನೆಂದು ಕೇಳಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಬೆಂಗಳೂರಿನ ಕುಮಾರಪಾರ್ಕ್ ನಲ್ಲಿರುವ ಸರಕಾರಿ ಗೃಹ ಕಚೇರಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.
ಸಂವಿಧಾನ ಬದಲಾವಣೆ ವಿಚಾರವಾಗಿ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ನನಗೆ ತಲೆಕೆಟ್ಟಿಲ್ಲ. ನಾನು ಸಂದರ್ಶನದಲ್ಲಿ ಸತ್ಯ ಮಾತನಾಡಿರುವುದನ್ನು ಹಾಗೂ ನನ್ನ ರಾಜಕೀಯ ನಿಲುವನ್ನು ನೋಡಿ ಬಿಜೆಪಿಯವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ನಾನು ಸಂವಿಧಾನ ಬದಲಿಸುತ್ತೇನೆ ಎಂದು ಎಲ್ಲಿ ಹೇಳಿದ್ದೇನೆ? ನಾನು ಹೇಳಿದ್ದರೆ ಅದನ್ನು ಒಪ್ಪಿಕೊಳ್ಳುತ್ತಿದ್ದೆ. ಸಂವಿಧಾನ ಜಾರಿಗೆ ತಂದವರು ನಾವು, ನಾವು ಅದನ್ನು ರಕ್ಷಣೆ ಮಾಡುತ್ತಿದ್ದೇವೆ. ಬಿಜೆಪಿಯವರು ತಮ್ಮ ಹುಳುಕುಗಳನ್ನು ಮುಚ್ಚಿಹಾಕಲು ಈ ವಿಚಾರ ಪ್ರಸ್ತಾಪಿಸಿದ್ದಾರೆ. ನಮ್ಮ ನಾಯಕರು ದಡ್ಡರಲ್ಲ, ನಾನು ಏನು ಮಾತನಾಡಿದ್ದೇನೆ ಎಂದು ಅವರು ನೋಡಿದ್ದಾರೆ. ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿರುವುದು ಬಿಜೆಪಿ ಪಕ್ಷದ ನಾಯಕರು. ನಾನು ಸಂವಿಧಾನ ಬದಲಿಸುತ್ತೇನೆ ಎಂದು ಹೇಳಿದ್ದರೆ ಇಂದೇ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ನನ್ನ ಹೇಳಿಕೆ ತೆಗೆಸಿ ನೋಡಲಿ. ಬಿಜೆಪಿ ಅವರ ಆರೋಪದಲ್ಲಿ ಯಾವ ಅರ್ಥವೂ ಇಲ್ಲ. ನನ್ನ ಸಂದರ್ಶನವನ್ನು ಪೂರ್ಣವಾಗಿ ನೋಡಿ, ನಾನು ಅಲ್ಲಿ ಏನು ಮಾತನಾಡಿದ್ದೇನೆ ಎಂದು ಕೇಳಿ ಎಂದು ಮಾಧ್ಯಮ ಹಾಗೂ ರಾಜಕೀಯ ಸ್ನೇಹಿತರಲ್ಲಿ ಮನವಿ ಮಾಡುತ್ತೇನೆ” ಎಂದರು.
ಈ ವಿಚಾರವಾಗಿ ದೆಹಲಿ ನಾಯಕರು ನಿಮ್ಮ ಬಳಿ ಸ್ಪಷ್ಟನೆ ಕೇಳಿದ್ದಾರಾ ಎಂದು ಕೇಳಿದಾಗ, “ಹೌದು, ನನಗೆ ಕೇಳಿದ್ದಾರೆ. ನಾನು ದಾಖಲೆ ತೆಗೆದು ನೋಡಿ ಎಂದು ಹೇಳಿದ್ದೆ. ಅವರು ನೋಡಿದ್ದು, ನಂತರ ಅವರಿಗೆ ನಾನು ಹಾಗೇ ಹೇಳಿಲ್ಲ ಎಂಬುದರ ಅರಿವಾಗಿದೆ” ಎಂದರು.
ನೀವು ಹೋದ ಕಡೆ ಕಪ್ಪು ಬಾವುಟ ಪ್ರದರ್ಶಿಸಲು ಬಿಜೆಪಿಯವರು ನಿರ್ಧರಿಸಿದ್ದಾರಂತೆ ಎಂದು ಕೇಳಿದಾಗ, “ಅವರಿಗೆ ನನ್ನ ಮೇಲೆ ವಿಶೇಷ ಪ್ರೀತಿ. ನನ್ನ ಬಗ್ಗೆ ಮಾತನಾಡದಿದ್ದರೆ, ಅವರಿಗೆ ನಿದ್ದೆ ಬರುವುದಿಲ್ಲ. ಅದಕ್ಕಾಗಿ ಮಾತನಾಡುತ್ತಾರೆ, ಮಾತನಾಡಲಿ. ತಮಿಳುನಾಡಿನಲ್ಲಿ ಕಪ್ಪು ಬಾವುಟ ನೋಡಬೇಕು ಎಂದು ಕಾದು ಕುಳಿತಿದ್ದೆ. ನನಗೆ ಮಾಧ್ಯಮಗಳ ಮೈಕ್ ಹೊರತಾಗಿ ಯಾವ ಕಪ್ಪು ಬಾವುಟವೂ ಕಾಣಲಿಲ್ಲ” ಎಂದು ತಿಳಿಸಿದರು.