Home ರಾಜಕೀಯ Mekedatu | ಮೇಕೆದಾಟು ವಿಚಾರವಾಗಿ ನ್ಯಾಯಾಲಯದಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

Mekedatu | ಮೇಕೆದಾಟು ವಿಚಾರವಾಗಿ ನ್ಯಾಯಾಲಯದಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

5
0

ಬೆಂಗಳೂರು, ಮಾ.25 “ಮೇಕೆದಾಟು ವಿಚಾರವಾಗಿ ನಾವು ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯ ಸಿಗುವ ವಿಶ್ವಾಸವಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಬೆಂಗಳೂರಿನ ಕುಮಾರಪಾರ್ಕ್ ನಲ್ಲಿರುವ ಸರಕಾರಿ ಗೃಹ ಕಚೇರಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಜಲಸಂಪನ್ಮೂಲ ಸಚಿವರೂ ಆಗಿರುವ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.

ಮೇಕೆದಾಟು ಯೋಜನೆಗೆ ಅವಕಾಶ ನೀಡುವುದಿಲ್ಲ ಎಂಬ ತಮಿಳುನಾಡು ಸಚಿವ ದೊರೈ ಮುರುಗನ್ ಹೇಳಿಕೆ ಬಗ್ಗೆ ಕೇಳಿದಾಗ, “ನಮ್ಮ ನೀರು ನಮ್ಮ ಹಕ್ಕು. ಅವರು ಅವರದೇ ಆದ ರಾಜಕೀಯ ನಿಲುವು ತೆಗೆದುಕೊಂಡಿದ್ದಾರೆ. ಈ ಹಿಂದೆ ಅನೇಕ ಬಾರಿ ಜೆ.ಎಚ್. ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಹೋಗಿ ಮಾತುಕತೆ ಮಾಡಲಾಗಿತ್ತು. ನಾವು ಈ ವಿಚಾರದಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದು, ಅಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ. ನ್ಯಾಯಾಲಯದ ತೀರ್ಪಿಗೆ ಯಾರೂ ಅಡ್ಡಿ ಮಾಡಲು ಸಾಧ್ಯವಿಲ್ಲ. ಅವರು ತಮ್ಮ ವಾದ ಮಾಡಲಿ, ನಾವು ನಮ್ಮ ವಾದ ಮಂಡಿಸುತ್ತೇವೆ” ಎಂದು ತಿಳಿಸಿದರು.

ಮೇಕೆದಾಟು ಯೋಜನೆ ಡಿಪಿಆರ್ ಸಲ್ಲಿಕೆ ಮಾಡಿಲ್ಲ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ಡಿಪಿಆರ್ ಸಲ್ಲಿಕೆ ಮಾಡಲಾಗಿದೆ. ಈ ಯೋಜನೆ ಜಾರಿಗೆ ನಾವು ಬದ್ಧವಾಗಿದ್ದೇವೆ. ಕೇಂದ್ರ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಿದ್ದು, ನ್ಯಾಯಾಲಯದಲ್ಲಿಯೂ ಹೋರಾಟ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

ತಮಿಳುನಾಡು ಸಿಎಂ ನಿಮ್ಮ ಸ್ನೇಹಿತರು, ಅವರನ್ನು ಒಪ್ಪಿಸಿ ಈ ಯೋಜನೆ ಜಾರಿ ಮಾಡಿ ಎಂಬ ಬಿಜೆಪಿ ಆಗ್ರಹದ ಬಗ್ಗೆ ಕೇಳಿದಾಗ, “ತಮಿಳುನಾಡಿನವರು ಅವರದೇ ಆದ ರಾಜಕೀಯ ನಿಲುವು ತೆಗೆದುಕೊಂಡಿದ್ದಾರೆ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಕೈ ಹಿಡಿದು ಒಪ್ಪಿಗೆ ಕೊಡಿಸುವುದಾಗಿ ಹೇಳಿದ್ದರು. ಅವರು ಯಾಕೆ ಕೊಡಿಸುತ್ತಿಲ್ಲ. ರಾಜಕೀಯದಲ್ಲಿ ಅನೇಕ ಒತ್ತಡಗಳಿರುತ್ತವೆ. ಈ ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಅನುಕೂಲವಾಗಲಿದೆ. ಸಮುದ್ರಕ್ಕೆ ವ್ಯರ್ಥವಾಗಿ ಹೋಗುತ್ತಿರುವ ನೀರನ್ನು ಸಂಗ್ರಹಿಸಲು ನೆರವಾಗಲಿದೆ. ಹೀಗಾಗಿ ಈ ಯೋಜನೆಗೆ ಸಹಕಾರ ನೀಡಿ ಎಂದು ತಮಿಳುನಾಡಿನವರಿಗೆ ಮನವಿ ಮಾಡುತ್ತೇನೆ. ಕೃಷ್ಣಾ ನೀರು ಸಂಬಂಧ ಆಂಧ್ರ ಪ್ರದೇಶ ಸಿಎಂ ಜತೆ ಚರ್ಚೆಗೆ ದಿನಾಂಕ ಕೇಳಿದ್ದು, ಅವರು ದಿನಾಂಕ ನಿಗದಿ ಮಾಡಿದ ಬಳಿಕ ಹೋಗಿ ಭೇಟಿ ಮಾಡುವೆ” ಎಂದು ತಿಳಿಸಿದರು.

LEAVE A REPLY

Please enter your comment!
Please enter your name here