ಸೆಪ್ಟೆಂಬರ್ 10ರಿಂದ 22ರವರೆಗೆ ವಿಜಯಪುರದಲ್ಲಿ ಭಾರತೀಯ ಸೇನಾ ನೇಮಕಾತಿ ರ್ಯಾಲಿ; ಅಭ್ಯರ್ಥಿಗಳಿಗೆ ARO ಮಂಗಳೂರು ಸೂಚನೆ
ಬೆಂಗಳೂರು: ಆರ್ಮಿ ರಿಕ್ರೂಟಿಂಗ್ ಆಫೀಸ್ (ARO) ಮಂಗಳೂರು ವತಿಯಿಂದ ಭಾರತೀಯ ಸೇನಾ ನೇಮಕಾತಿ ರ್ಯಾಲಿಯನ್ನು 2026ರ ಸೆಪ್ಟೆಂಬರ್ 10ರಿಂದ 22ರವರೆಗೆ ವಿಜಯಪುರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಸಲಾಗುವುದು ಎಂದು ಡಿಫೆನ್ಸ್ PRO ಬೆಂಗಳೂರು ಎಕ್ಸ್ನಲ್ಲಿ ಪ್ರಕಟಿಸಿದೆ.
ಕರ್ನಾಟಕ ಮತ್ತು ಕೇರಳದ ಎಲ್ಲಾ ಜಿಲ್ಲೆಗಳ ರಿಲಿಜಿಯಸ್ ಟೀಚರ್ ಜೂನಿಯರ್ ಕಮಿಷನ್ಡ್ ಆಫೀಸರ್ (RT JCO), ಸೋಲ್ಜರ್ ಟೆಕ್ನಿಕಲ್ ನರ್ಸಿಂಗ್ ಅಸಿಸ್ಟೆಂಟ್ (Sol Tech NA), ಸಿಪಾಯಿ ಫಾರ್ಮಾ ಮತ್ತು ಹವಿಲ್ದಾರ್ ಎಜುಕೇಶನ್ ಅಭ್ಯರ್ಥಿಗಳಿಗೆ ಈ ರ್ಯಾಲಿ ಅನ್ವಯವಾಗಲಿದೆ.
ಇದರ ಜೊತೆಗೆ ARO ಮಂಗಳೂರು ವ್ಯಾಪ್ತಿಯ ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್ಮನ್ (10ನೇ ತರಗತಿ) ಮತ್ತು ಅಗ್ನಿವೀರ್ ಟ್ರೇಡ್ಸ್ಮನ್ (8ನೇ ತರಗತಿ) ಅಭ್ಯರ್ಥಿಗಳೂ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.
ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಂಡು, ಅದರಲ್ಲಿ ನೀಡಿರುವ ಎಲ್ಲ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಲಾಗಿದೆ.
ಅಗ್ನಿವೀರ್ ಕ್ಲರ್ಕ್/SKT ಮತ್ತು ಅಗ್ನಿವೀರ್ WMP ಅಭ್ಯರ್ಥಿಗಳ ನೇಮಕಾತಿ ರ್ಯಾಲಿಯನ್ನು ನಂತರ 2026ರ ಅಕ್ಟೋಬರ್ನಲ್ಲಿ ARO ಕ್ಯಾಲಿಕಟ್ ಅಡಿಯಲ್ಲಿ ನಡೆಸಲಾಗುವುದು ಎಂದು ಡಿಫೆನ್ಸ್ PRO ಬೆಂಗಳೂರು ತಿಳಿಸಿದೆ.
ಹಣ ಅಥವಾ ಇತರ ಅನುಕೂಲಗಳ ಬದಲಾಗಿ ಸೇನೆಗೆ ಆಯ್ಕೆ ಮಾಡಿಸುವುದಾಗಿ ಭರವಸೆ ನೀಡುವ ಮಧ್ಯವರ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ. ಭಾರತೀಯ ಸೇನೆಗೆ ಆಯ್ಕೆಯು ಸಂಪೂರ್ಣವಾಗಿ ಅರ್ಹತೆ ಮತ್ತು ನಿಗದಿತ ನೇಮಕಾತಿ ಪ್ರಕ್ರಿಯೆಗಳ ಆಧಾರದ ಮೇಲೆಯೇ ನಡೆಯುತ್ತದೆ ಎಂದು ಡಿಫೆನ್ಸ್ PRO ಬೆಂಗಳೂರು ತಿಳಿಸಿದೆ.
