Home ಬೆಂಗಳೂರು ನಗರ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ವಿಸ್ಟ್ರಾನ್‌ ಕಂಪನಿಗೆ ಭೇಟಿ

ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ವಿಸ್ಟ್ರಾನ್‌ ಕಂಪನಿಗೆ ಭೇಟಿ

104
0

ಆಡಳಿತ ಮಂಡಳಿ ಹಾಗೂ ಕಾರ್ಮಿಕರೊಂದಿಗೆ ಚರ್ಚೆ

ಬೆಂಗಳೂರು:

ಹಿಂಸಾಚಾರದಂತಹ ಅನವಶ್ಯಕ ಘಟನೆಗಳಿಂದ ಸಾವಿರಾರು ಉದ್ಯೋಗಿಗಳ ಜೀವನ ಬೀದಿಪಾಲಾಗುವ ಸಮಸ್ಯೆ ಎದುರಾಗುತ್ತದೆ. ಇನ್ನು ಮುಂದೆ ಯಾವುದೇ ರೀತಿಯ ಸಮಸ್ಯೆಗಳು ಉದ್ಭವಿಸಿದಲ್ಲಿ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಿ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ ಶೆಟ್ಟರ್‌ ವಿಸ್ಟ್ರಾನ್‌ ಉದ್ಯೋಗಿಗಳಿಗೆ ಸಲಹೆ ನೀಡಿದರು.

ಇತ್ತೀಚಿನ ಘಟನೆಯ ನಂತರ ಉತ್ಪಾದನೆ ಆರಂಭಿಸಿರುವ ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್‌ ಕಂಪನಿಗೆ ರಾಜ್ಯ ಸರಕಾರದ ಉನ್ನತ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಕಾರ್ಮಿಕರೊಂದಿಗೆ ಸಂವಾದ ನಡೆಸಿದ ಅವರು ಕಾರ್ಮಿಕರ ಈಗಿನ ಸ್ಥಿತಿಗತಿಯ ಬಗ್ಗೆ ವಿಚಾರಿಸಿದರು. ಕಾರ್ಮಿಕರು ಕೆಲವೇ ಜನರ ಮುಂಗೋಪದಿಂದಾಗಿ ಸಾವಿರಾರು ಕಾರ್ಮಿಕರು ಸಮಸ್ಯೆ ಅನುಭವಿಸಬೇಕಾಯಿತು ಎಂದು ಅಂದು ನಡೆದ ಪರಿಸ್ಥಿತಿಯನ್ನು ಸಚಿವರ ಮುಂದೆ ವಿವರಿಸಿದರು.

ನಂತರ ಸಚಿವ ಜಗದೀಶ್‌ ಶೆಟ್ಟರ್‌ ಅವರು ಮಾತನಾಡಿ, ಹಿಂಸಾಚಾರ ದಂತಹ ಅನವಶ್ಯಕ ಘಟನೆಗಳಿಂದ ಯಾವುದೇ ಸಮಸ್ಯೆಗೂ ಪರಿಹಾರ ದೊರಕುವುದಿಲ್ಲ. ಅಂದು ನಡೆದ ಘಟನೆಯಿಂದಾಗಿ ಕಾರ್ಖಾನೆ ಮುಚ್ಚಬೇಕಾಯಿತು. ಅಲ್ಲದೆ, ಸಾವಿರಾರು ಕಾರ್ಮಿಕರು ಹಲವಾರು ಅನವಶ್ಯಕ ಗೊಂದಲಕ್ಕೀಡಾಗಬೇಕಾಯಿತು. ಆದ್ದರಿಂದ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉದ್ಭವವಾದಲ್ಲಿ ನಿಮ್ಮ ಮೇಲಾಧಿಕಾರಿಗಳೀಗೆ ಮೊದಲು ತಿಳಿಸಬೇಕು. ಅಲ್ಲಿಯೂ ಪರಿಹಾರ ದೊರಕದೇ ಇದ್ದ ಸಂಧರ್ಭದಲ್ಲಿ ಸರಕಾರಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸಲಹೆ ನೀಡಿದರು.

Industry Minister Jagadish Shettar visits Wistron Company1

10 ವರ್ಷಗಳ ಹಿಂದೆ ಕೋಲಾರ ಜಿಲ್ಲೆಗೆ ಭೇಟಿ ನೀಡಿದ್ದ ಸಂಧರ್ಭದಲ್ಲಿ ಇಲ್ಲಿನ ಜನರು ಉದ್ಯೋಗಕ್ಕಾಗಿ ಬೆಂಗಳೂರ ನಗರಕ್ಕೆ ದಿನ ನಿತ್ಯ ಅಲೆದಾಡುತ್ತಿದ್ದ ಪರಿಸ್ಥಿತಿ ಇತ್ತು. ಈಗ ಜಿಲ್ಲೆಗೆ ಕೈಗಾರಿಕೆಗಳು ಹೆಚ್ಚಾಗಿ ಬರುತ್ತಿದ್ದು, ಸ್ಥಳೀಯವಾಗಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿವೆ. ಇದನ್ನ ಅಭಿವೃದ್ದಿ ಪಡಿಸಬೇಕೇ ಹೊರತು ಇಂತಹ ಘಟನೆಗಳಿಂದ ಕೆಟ್ಟ ಅಭಿಪ್ರಾಯ ಮೂಡಿಸುವಂತಾಗಬಾರದು ಎಂದು ಹೇಳಿದರು.

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಗೌರವ್‌ ಗುಪ್ತಾ ಮಾತನಾಡಿ, ಸಮಸ್ಯೆ ಉದ್ಭವವಾಗುವ ಸಮಯದಲ್ಲಿ ಅಧಿಕಾರಿಗಳು ಭೇಟಿ ನೀಡುವ ಪರಿಪಾಠವನ್ನು ಬಿಡಬೇಕು. ಆಗಾಗ್ಗೆ ಕೈಗಾರಿಕೆಗಳಿಗೆ ಭೇಟಿ ನೀಡಿ ಅಲ್ಲಿನ ಸೌಕರ್ಯಗಳು ಹಾಗೂ ಆಗಬೇಕಾದ ಕಾರ್ಯಗಳ ಬಗ್ಗೆ ಸಲಹೆ ನೀಡಬೇಕು ಮತ್ತು ಕಾರ್ಮಿಕರ ಸಂಕಷ್ಟಗಳನ್ನು ಆಲಿಸಬೇಕು ಎಂದು ಸೂಚನೆ ನೀಡಿದರು.

ಈ ಸಮಯದಲ್ಲಿ ಕೆಐಎಡಿಬಿ ಸಿಇಓ ಡಾ. ಶಿವಶಂಕರ್‌, ಕೈಗಾರಿಕಾಭಿವೃದ್ದಿ ಆಯುಕ್ತೆ ಶ್ರೀಮತಿ ಗುಂಜನ್‌ ಕೃಷ್ಣಾ, ವಿಸ್ಟ್ರಾನ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸುದಿಪ್ತೋ ಗುಪ್ತಾ, ಕೊಲಾರ ಜಿಲ್ಲಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿಗಳ, ಕೆಐಎಡಿಬಿ ಮುಖ್ಯ ಇಂಜಿನೀಯರ್‌ ಬಿ.ಕೆ ಪವಿತ್ರ ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here