ಬೆಂಗಳೂರು:
ಜಕ್ಕೂರಿನಲ್ಲಿರುವ ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದು ಪುನಾರಂಭಕ್ಕೆ ಎಲ್ಲ ಕ್ರಮ ತೆಗೆದುಕೊಳ್ಳಿ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಸಚಿವ ನಾರಾಯಣಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಚಿವರು ಇಂದು ಜಕ್ಕೂರಿನಲ್ಲಿರುವ ವೈಮಾನಿಕ ತರಬೇತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅಲ್ಲಿನ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ವೈಮಾನಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿದ್ದಾರೆ. ಆದರೆ ಭೋದಕ ಸಿಬ್ಬಂದಿಯೇ ಇಲ್ಲ. ಇದರಿಂದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ವೈಮಾನಿಕ ತರಬೇತಿ ಆರಂಭಿಸುವಂತಾಗಬೇಕು ಎಂದು ಸಚಿವರು ಸೂಚಿಸಿದರು. ಜಕ್ಕೂರಿನಲ್ಲಿ 214 ಎಕರೆಯಲ್ಲಿರುವ ವೈಮಾನಿಕ ತರಬೇತಿ ಶಾಲೆ, ರನ್ ವೇ ಪರಿಶೀಲಿಸಿದ ಸಚಿವರು ಟ್ವಿನ್ ಇಂಜಿನ್ ಚಾಲನೆಗೆ ಅಗತ್ಯವಿರವ 10 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ತ್ವರಿತಗತಿಯಲ್ಲಿ ಆಗಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಭೂ ಸ್ವಾದೀನ ಪರಿಹಾರ ಬಾಕಿ ಮೊತ್ತ 10 ಕೋಟಿ. ರೂ. ಅನ್ನು ಪಡೆದುಕೊಳ್ಳಲು ಅಗತ್ಯ ಕ್ರಮ ತೆಗೆದುಕೊಳ್ಳಿ. ಖಾಸಗಿ ಏರ್ ಕ್ರಾಫ್ಟ್ ಪಾರ್ಕಿಂಗ್ ಶುಲ್ಕ ಕೂಡ ಸುಮಾರು ಒಂದುವರೆ ಕೋಟಿ ರೂ. ಬಾಕಿ ಇದೆ. ಅದನ್ನೆಲ್ಲ ಪಾವತಿ ಮಾಡಿಸಿಕೊಳ್ಳಬೇಕು. ಇನ್ನುಮುಂದೆ ಪಾರ್ಕಿಂಗ್ ಬಾಡಿಗೆ ಆಯಾ ತಿಂಗಳೇ ಪಾವತಿಯಾಗುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಖಡಕ್ಕಾಗಿ ಹೇಳಿದರು.
ವೈಮಾನಿಕ ತರಬೇತಿ ಶಾಲೆ ಪುನಾರಂಭವಾದರೆ ನೂರಾರು ನಿರುದ್ಯೋಗಿ ಯುವಕರಿಗೆ ಉದ್ಯೋಗ ಲಭಿಸುತ್ತದೆ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಮಾನಯಾನ ಸೌಲಭ್ಯ ಹೆಚ್ಚುತ್ತಿದ್ದು, ಪೈಲಟ್ ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ಶಾಲೆ ಪುನಾರಂಭವಾದರೆ ಗ್ರಾಮೀಣ ಭಾಗದ ಯುವಕರೂ ಕೂಡ ತರಬೇತಿ ಪಡೆದು ಉತ್ತಮ ಸಂಬಳ ಪಡೆಯುತ್ತಾರೆ. ಆದ್ದರಿಂದ ಅಧಿಕಾರಿಗಳು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ನಿರ್ವಹಣೆ ಕೂಡ ಸರಿಯಾಗಿ ಆಗಬೇಕು. ವೈಮಾನಿಕ ತರಬೇತಿ ಕೇಂದ್ರ ಅತ್ಯುತ್ತಮ ಗುಣಮಟ್ಟದಲ್ಲಿ ಇರಬೇಕು. ಆದರೆ ಇಲ್ಲಿ ಅವ್ಯವಸ್ಥೆ ಆಗರವಾಗಿದೆ. ತಿಂಗಳೊಳಗೆ ಮತ್ತೊಮ್ಮೆ ಭೇಟಿ ನೀಡುತ್ತೇನೆ. ಅಷ್ಟರಲ್ಲಿ ಶಾಲೆ ಪುನಾರಂಭಗೊಂಡು, ಎಲ್ಲವು ಸುಸ್ಥಿತಿಯಲ್ಲಿ ಇರಬೇಕು ಎಂದು ಎಚ್ಚರಿಕೆ ನೀಡಿದರು.
ಬಳಿಕ ವಿದ್ಯಾನಗರದಲ್ಲಿರುವ ಜಯಪ್ರಕಾಶ್ ನಾರಾಯಣ ರಾಷ್ಟ್ರೀಯ ಯುವ ಕೇಂದ್ರಕ್ಕೆ ಭೇಟಿ ಪರಿಶೀಲಿಸಿದರು. ಇಲ್ಲಿರುವ ಕ್ರೀಡಾ ಸಮುಚ್ಚಯವನ್ನು ಭಾರತೀಯ ಕ್ರೀಡಾ ಪ್ರಾಧಿಕಾರದ ಗುಣಮಟ್ಟಕ್ಕೆ ಸಮಾನಾಂತರಾವಾಗಿ ಉನ್ನತೀಕರಿಸಿಬೇಕು. ಸಿಎಸ್ ಆರ್ ಫಂಡ್ ಬಳಸಿಕೊಂಡು ಈ ಕಾರ್ಯವನ್ನು ಮಾಡಬೇಕು ಎಂದು ಸೂಚಿಸಿದರು. ಕ್ರೀಡಾ ಸಮುಚ್ಚಯದಲ್ಲಿರುವ ಈಜುಕೊಳ, ಬಾಸ್ಕೆಟ್ ಬಾಲ್ ಕ್ರೀಡಾಂಗಣ, ಆಯುರ್ವೆದ ಮಸ್ಸಾಜ್ ಕೇಂದ್ರ, ವಸತಿ ನಿಲಯಗಳನ್ನು ಪರಿಶೀಲಿಸಿದರು. ಈ ವೇಳೆ ಸ್ವಚ್ಛತೆ ಹಾಗೂ ಸರಿಯಾದ ನಿರ್ವಹಣೆ ಇಲ್ಲದಿರುವ ಬಗ್ಗೆ ಅಸಮಾಧಾನಗೊಂಡರು. ಈ ಸಂದರ್ಭದಲ್ಲಿ ಬಾಸ್ಕೆಟ್ ಬಾಲ್ ಆಟಗಾರರ ಜೊತೆ ಅಲ್ಲಿನ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವರು, ವಾರದೊಳಗೆ ಮತ್ತೆ ಬರುತ್ತೇನೆ. ಪರಿಸ್ಥಿತಿ ಸುಧಾರಿಸಿರಬೇಕು. ಇಲ್ಲವಾದಲ್ಲಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.