Home ಆರೋಗ್ಯ ದೇಶದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಮಳಿಗೆ – ಸದಾನಂದ ಗೌಡ

ದೇಶದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಮಳಿಗೆ – ಸದಾನಂದ ಗೌಡ

26
0

ಮಾರ್ಚ್ 1ರಿಂದ ಜನೌಷಧಿ ಸಪ್ತಾಹ – ಪ್ರಧಾನಿ ಮೋದಿಯವರಿಂದ ಸಂವಾದ

ಬೆಂಗಳೂರು:

ಶ್ರೀಸಾಮಾನ್ಯರ ಅನುಕೂಲಕ್ಕಾಗಿ ದೇಶದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಜನೌಷಧಿ ಕೆಂದ್ರವನ್ನು ತೆರೆಯಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ ವಿ ಸದಾನಂದ ಗೌಡ ಅವರು ಹೇಳಿದ್ದಾರೆ.

ಬೆಂಗಳೂರಿನ ನಾಗರಬಾವಿಯಲ್ಲಿ ಇಂದು ಜನೌಷಧಿ ಕೇಂದ್ರವೊಂದನ್ನು ಉದ್ಘಾಟಿಸಿ ಮಾತನಾಡಿದ ಸಚಿವರು – ವೈದ್ಯರು ತಮ್ಮಲ್ಲಿ ಬರುವ ರೋಗಿಗಳಿಗೆ ವಿಶೇಷವಾಗಿ ಬಡವರಿಗೆ ಜನೌಷಧಿಯನ್ನೇ ಬರೆದುಕೊಡಬೇಕು- ಎಂದು ಕರೆ ನೀಡಿದರು.

{ಸದಾನಂದ ಗೌಡ ಅವರು ನಿರ್ವಹಿಸುವ ಔಷಧ ಇಲಾಖೆಯಡಿ ಪ್ರಧಾನಮಂತ್ರಿ ಭಾರತೀಯ ಜನೌಷಧ ಪರಿಯೋಜನೆಯನ್ನು (ಪಿಎಂಬಿಜೆಪಿ) ರೂಪಿಸಲಾಗಿದ್ದು ಇದರ ಮೂಲಕ ಇದುವರೆಗೆ ದೇಶಾದ್ಯಂತ ಸುಮಾರು 7500 ಜನೌಷಧಿ ಕೇಂದ್ರಗಳನ್ನು (ಔಷಧ ಮಾರಾಟ ಮಳಿಗೆ) ತೆರೆಯಲಾಗಿದೆ. ನಾಗರಬಾವಿಯಲ್ಲಿ ಇಂದು ಉದ್ಘಾಟಿಸಿದ್ದು ರಾಜ್ಯದ 850ನೇ ಜನೌಷಧಿ ಕೇಂದ್ರವಾಗಿದೆ.}

ಕೈಗೆಟಕುವ ದರದಲ್ಲಿ ಬಡವರಿಗೆ ಗುಣಮಟ್ಟದ ಔಷಧಗಳನ್ನು ಪೂರೈಸಬೇಕು ಎಂಬುದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕನಸಾಗಿದೆ. ಅವರು ಅಧಿಕಾರಕ್ಕೆ ಬಂದ ತಕ್ಷಣ ಜನಸಾಮಾನ್ಯರು ತಮ್ಮ ಆದಾಯದಲ್ಲಿ ಯಾವ ಯಾವ ಉದ್ದೇಶಕ್ಕಾಗಿ ಎಷ್ಟೆಷ್ಟು ವೆಚ್ಚ ಮಾಡುತ್ತಾರೆ ಎಂಬುದನ್ನು ತಿಳಿಯಲು ಅಂಕಿ-ಸಂಖ್ಯೆ ಇಲಾಖೆ ಮೂಲಕ ಒಂದು ಸಮೀಕ್ಷೆಯನ್ನು ನಡೆಸಲಾಗಿತ್ತು. ಸಾಮಾನ್ಯ ಜನ ತಮ್ಮ ಆದಾಯದಲ್ಲಿ ಶೇಕಡಾ 15ರಿಂದ ಶೇಕಡಾ 30ರಷ್ಟು ಹಣವನ್ನು ಅನಾರೋಗ್ಯದ ಔಷಧೋಪಚಾರಕ್ಕಾಗಿಯೇ ವ್ಯಯಿಸುತ್ತಾರೆ. ಮತ್ತು ಇದೇ ಕಾರಣಕ್ಕಾಗಿ ಪ್ರತಿವರ್ಷ ಒಂದು ಕೋಟಿಗೂ ಹೆಚ್ಚು ಜನ ಬಡತನದ ರೇಖೆಗಿಂತ ಕೆಳಗೆ ಹೋಗುತ್ತಿದ್ದಾರೆ ಎಂಬ ಆಘಾತಕಾರಿ ಅಂಶ ಈ ಸಮೀಕ್ಷೆಯಿಂದ ಹೊರಬಿದ್ದಿತ್ತು. ಹಾಗಾಗಿ ಬಡವರಿಗೆ ಆದಷ್ಟು ಕಡಿಮೆ ದರದಲ್ಲಿ ಗುಣಮಟ್ಟದ ಔಷಧಗಳು ಸಿಗುವಂತೆ ಮಾಡಲು ಕೇಂದ್ರವು ಈ ಯೋಜನೆಗೆ ಹೊಸ ಆಯಾಮ ನೀಡಿತು ಎಂದು ಸದಾನಂದಗೌಡ ವಿವರಿಸಿದರು.

janaushadhi Shop in all government hospitals in country Sadananda Gowda1

ಜನೌಷಧಿಯೂ ಬ್ರಾಂಡೆಡ್ ಔಷಧಗಳಷ್ಟೇ ಗುಣಮಟ್ಟದ್ದು. ಆದರೆ ದರ ತುಂಬಾನೇ ಕಡಿಮೆ. ಉದಾಹರಣೆಗೆ ಮಧುಮೇಹ, ಬಿಪಿ ಮುಂತಾದ ಕಾಯಲೆ ಇರುವವರು ಸಾಮಾನ್ಯ ಔಷಧ ಅಂಗಡಿಗಳಲ್ಲಿ ಔಷಧ ಖರೀದಿಸಬೇಕೆಂದರೆ ತಿಂಗಳಿಗೆ 2500 ರೂಪಾಯಿಯಿಂದ 3000 ರೂಪಾಯಿವರೆಗೆ ವೆಚ್ಚ ಮಾಡಬೇಕಾಗುತ್ತದೆ. ಆದರೆ ನಮ್ಮ ಜನೌಷಧ ಅಂಗಡಿಗಳಲ್ಲಿ ಅದೇ ಔಷಧಗಳು 250 ರೂಪಾಯಿಯಿಂದ 300 ರೂಪಾಯಿಯೊಳಗೆ ಸಿಗುತ್ತವೆ. ದರ ಕಡಿಮೆ ಇದೆ ಅಂದಾಕ್ಷಣ ಗುಣಮಟ್ಟದಲ್ಲಿ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲ. ಔಷಧ ಕಂಪನಿಗಳಿಂದ ಅವನ್ನು ಖರೀದಿಸುವಾಗ ಎಲ್ಲ ರೀತಿಯ ಗುಣಮಟ್ಟದ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಹಾಗಾಗಿ ಜನರು ಜನೌಷಧಿಯ ಉಪಯೋಗ ಪಡೆದುಕೊಳ್ಳಬೇಕು. ವೈದ್ಯರೂ ಆದಷ್ಟು ಜನೌಷಧಿಯನ್ನೇ ಶಿಪಾರಸು ಮಾಡಿ ಔಷಧ ಚೀಟಿ ಬರೆದುಕೊಡಬೇಕು ಎಂದು ವಿನಂತಿಸುತ್ತೇನೆ ಎಂದು ಅವರು ಹೇಳಿದರು.

ಮಾರ್ಚ್ ಒಂದರಿಂದ ಜನೌಷಧಿ ಸಪ್ತಾಹ ಆಚರಿಸಲಾಗುತ್ತಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಜನೌಷಧಿ ಮಾರಾಟಗಾರರು ಹಾಗೂ ಜನೌಷಧಿ ಫಲಾನುಭವಿಗಳ ಜೊತೆ ನೇರ ಸಂವಾದ ನಡೆಸಲಿದ್ದಾರೆ ಎಂದು ಸಚಿವರು ತಿಳಿಸಿದರು.

ಕೋವಿಡ್ ಸಂಕಷ್ಟದ ಸಮಯದಲ್ಲಿ ಜನೌಷಧಿ ಮಾರಾಟಗಾರರು ಅತ್ಯುತ್ತಮಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಎಲ್ಲ ಶ್ಲಾಘನೆಗೆ ಅರ್ಹರು ಎಂದು ಸದಾನಂದ ಗೌಡ ಹೇಳಿದರು.

LEAVE A REPLY

Please enter your comment!
Please enter your name here