ಮೈತ್ರಿಯಿಂದ ಜೆಡಿಎಸ್ ಪಕ್ಷದ ಯಾರೊಬ್ಬರ ರಾಜಕೀಯ ಭವಿಷ್ಯಕ್ಕೆ ಧಕ್ಕೆ ಇಲ್ಲ ಎಂದ ಹೆಚ್.ಡಿ.ಕುಮಾರಸ್ವಾಮಿ
ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿಲ್ಲ, ಮತಕ್ಕಾಗಿ ಓಲೈಕೆ ಮಾಡಿಲ್ಲ
ಬೆಂಗಳೂರು/ರಾಮನಗರ:
ರಾಜ್ಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಈ ಮೈತ್ರಿ ಪರಿಹಾರವಾಗಿದೆ. ಮುಂದಿನ ಐದು ವರ್ಷಗಳಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಪಡೆಯದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಬಿಡದಿಯ ಕೇತಿಗಾನಹಳ್ಳಿಯ ತೋಟದಲ್ಲಿ ಜೆಡಿಎಸ್ ಪಕ್ಷದ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಜಿಲ್ಲಾಧ್ಯಕ್ಷರು ಹಾಗೂ ಹಿರಿಯ ಮುಖಂಡರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬಿಜೆಪಿ ಜತೆಗಿನ ಮೈತ್ರಿ ನನ್ನ ಸ್ವಾರ್ಥಕ್ಕೆ ಅಲ್ಲ. ನಾಡಿನ ಹಿತಕ್ಕಾಗಿ. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗದಂತೆ ಕಾನೂನಿನ ವ್ಯಾಪ್ತಿಯೊಳಗೇ ಈ ಸಮಸ್ಯೆ ಪರಿಹಾರ ಪಡೆಯುವ ಕೆಲಸ ಮಾಡುತ್ತೇನೆ ಎಂದು ಅವರು ಒತ್ತಿ ಹೇಳಿದರು.
ಈ ಮೈತ್ರಿಯಿಂದ ರಾಜ್ಯಕ್ಕೆ ಒಳ್ಳೆಯದು ಆಗುತ್ತದೆ. ನಮ್ಮ ನೀರು ಉಳಿಸೋದಕ್ಕೆ ಏನು ಮಾಡಬೇಕು, ಅದನ್ನು ಮಾಡುತ್ತೇನೆ. ಕಾಂಗ್ರೆಸ್ ನವರ ರೀತಿಯಲ್ಲಿ ನಾನು ಸುಳ್ಳು ಹೇಳುವುದಿಲ್ಲ. ದೇವೇಗೌಡರ ಮಾರ್ಗದರ್ಶನದಲ್ಲಿ ಈ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರು ಸ್ಪಷ್ಪ ಮಾತುಗಳಲ್ಲಿ ಹೇಳಿದರು.
ಹಿಂದೆ ನಾನು ರೂಪಿಸಿದ್ದ ಜಲಧಾರೆಯಲ್ಲೂ ಅತುತ್ತಮ ಪರಿಹಾರ ಇತ್ತು. ಜನರು ಅವಕಾಶ ಕೊಡಲಿಲ್ಲ ಜನರು. ಕಾಂಗ್ರೆಸ್ ಪಕ್ಷವನ್ನು ನಂಬಿ ಮತ ಹಾಕಿದರು. ಆದರೆ, ರಾಜ್ಯದ ಜನರ ಕಣ್ಣೀರು ಹಾಕಿಸುತ್ತಿದ್ದಾರೆ. ಹೀಗಾಗಿ ನಾನು ಕೆಲವು ದೃಢ ನಿರ್ಧಾರಗಳನ್ನು ಕೈಗೊಳ್ಳಬೇಕಾಯಿತು. ಈ ಮೈತ್ರಿಯಿಂದ ಅಧಿಕಾರಕ್ಕೆ ಬರುವುದು ನನ್ನ ಉದ್ದೇಶ ಅಲ್ಲ. ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ನನ್ನ ಗುರಿ.
ಕೇಂದ್ರ ಸರ್ಕಾರದ ನೆರವಿನಿಂದ ಎಲ್ಲ ಸಮಸ್ಯೆ, ಯೋಜನೆಗಳಿಗೆ ಪರಿಹಾರ ಮಾಡಿಸುತ್ತೇನೆ. ಒಂದು ವೇಳೆ ಮಾಡಿಸದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇನ್ನೈದು ವರ್ಷಗಳಲ್ಲಿ ಅದೆಲ್ಲ ಆಗದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ನುಡಿದರು.
ನಮ್ಮ ಪಕ್ಷ ಬಲವಾಗಿದೆ, ಒಗ್ಗಟ್ಟಾಗಿದೆ ಎನ್ನುವುದಕ್ಕೆ ಈ ಸಭೆ ಸಾಕ್ಷಿ. ಗೆದ್ದವರು, ಸೋತವರು ಸಂಕಟದಲ್ಲಿ ಇದ್ದೀರಿ, ಅದನ್ನು ಸರಿ ಮಾಡುತ್ತೇನೆ ಎಂದ ಅವರು; ಈ ರಾಮನಗರದ ಮಣ್ಣಲ್ಲಿಯೇ ನಾನು ಮಣ್ಣಗೋದು. ಈ ಮಣ್ಣಿನ ಸಾಕ್ಷಿಯಾಗಿ ಹೇಳುತ್ತಿದ್ದೇನೆ. ಈ ನಾಡಿನ ಋಣ ತೀರಿಸುತ್ತೇನೆ ಎಂದು ಅವರು ಭಾವುಕರಾಗಿ ಹೇಳಿದರು.
ದೇವೇಗೌಡರ 91ನೇ ವಯಸ್ಸಿನಲ್ಲಿ ಪಕ್ಷಕ್ಕೆ ಏನು ಆಘಾತ ಆಗಿದೆ, ಅದನ್ನು ಅವರು ಯೋಚನೆ ಮಾಡುತ್ತಿದ್ದಾರೆ. ಅವರಿಗೆ ಯಾರೂ ನೋವು ಕೊಡುವುದು ಬೇಡ ಎಂದು ಅವರು ವಿನಂತಿ ಮಾಡಿದರು.
ಜಾತ್ಯತೀತ ಅನ್ನುತ್ತೇವೆ. ಆದರೆ, ಜಾತಿ ಹೆಸರಿನಲ್ಲಿಯೇ ಟಿಕೆಟ್ ಕೊಡುತ್ತೇವೆ. ಇದು ಯಾಕೆ? ಕಾಂಗ್ರೆಸ್ ಎಲ್ಲ ಪಕ್ಷಗಳಿಗೂ ಮೀರಿ ಈ ಕೆಲಸ ಹೆಚ್ಚು ಮಾಡುತ್ತಿದೆ. ಕೇವಲ ತಾನು ಮಾತ್ರ ಜಾತ್ಯತೀತ ಪಕ್ಷ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದೆ ಎಂದು ಕೈ ಪಕ್ಷವನ್ನು ಛೇಡಿಸಿದರು ಮಾಜಿ ಮುಖ್ಯಮಂತ್ರಿಗಳು.
ಮೈತ್ರಿಯಿಂದ ಪಕ್ಷಕ್ಕೆ ಒಳ್ಳೆಯದೇ ಆಗುತ್ತದೆ. ಮುಂದೆ ಟಿಕೆಟ್ ಕೊಡುವ ಸಮಸ್ಯೆ ಆಗಲ್ಲ, ಬಿಜೆಪಿ ಮೈತ್ರಿಯಿಂದ ನಮಗೆ ಯಾವ ಇಕ್ಕಟ್ಟು ಆಗುವುದಿಲ್ಲ. ಮೈತ್ರಿ ಪಕ್ಷದ ಜತೆ ಮುಕ್ತವಾಗಿ ಮಾತನಾಡೋಣ. ಮೈತ್ರಿ ಧರ್ಮವನ್ನು ನಾವು ಗೌರವಿಸೋಣ. ನಮ್ಮ ಹಿತದ ಬಗ್ಗೆಯೂ ಮುಕ್ತವಾಗಿ ಚರ್ಚೆ ಮಾಡೋಣ ಎಂದರು ಅವರು.
ಪಕ್ಷದ ಯಾವ ಮುಖಂಡನ ರಾಜಕೀಯ ಭವಿಷ್ಯ ಮಸಕು ಮಾಡುವ ಪ್ರಶ್ನೆಯೇ ಇಲ್ಲ. ಎಲ್ಲರ ಹಿತ ಕಾಯುವುದು ನಮ್ಮ ಬದ್ಧತೆ. ಯಾರಿಗೂ ಅನ್ಯಾಯ ಆಗಲು ಬಿಡುವುದಿಲ್ಲ. ನಾನು ಪ್ರಾಮಾಣಿಕವಾಗಿ ಈ ಮಾತನ್ನು ಹೇಳುತ್ತಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.
ಇನ್ನು ಮೇಲೆ ಮಾತನ್ನು ಕಡಿಮೆ ಮಾಡಿ, ಹೆಚ್ಚು ಕೆಲಸ ಮಾಡುತ್ತೇನೆ. ಮಾಧ್ಯಮಗಳಿಗೆ ನನ್ನ ಮನವಿ ಇಷ್ಟೇ. ಮಾಧ್ಯಮಗಳು ಅನ್ಯತಾ ಭಾವಿಸಬಾರದು. ಇನ್ನು ಮುಂದೆ ಬೆಳಗ್ಗೆ ಆರು ಗಂಟೆಗೆಲ್ಲಾ ನನ್ನ ಮನೆ ಹತ್ರ ಬರೋದು ಬೇಡ, ವಿಷಯ ಇದ್ದರೆ ನಾನು ನಿಮ್ಮನ್ನು ಕರೆದು ಮಾತನಾಡುತ್ತೇನೆ ಎಂದು ಅವರು ವಿನಂತಿ ಮಾಡಿಕೊಂಡರು.
ಮತಕ್ಕಾಗಿ ಓಲೈಕೆ ಮಾಡಲ್ಲ:
ಮತಕ್ಕಾಗಿ ಯಾವುದೇ ಒಂದು ಸಮುದಾಯವನ್ನು ಓಲೈಕೆ ಮಾಡಲಾರೆ, ಮುಸ್ಲೀಮರಿಗೆ ನಾನು ಅನ್ಯಾಯ ಮಾಡಿಲ್ಲ.. ಯಾವ ಸಮುದಾಯವನ್ನು ನಾನು ರಾಜಕೀಯ ಸರ್ಥಕ್ಕೆ ಬಳಕೆ ಮಾಡಿಕೊಂಡಿಲ್ಲ. ಈ ಮಾತನ್ನು ಸ್ಪಃಸ್ತವಾಗಿ ಹೇಳುತ್ತೇನೆ. ನಮ್ಮ ಬದ್ಧತೆ ನಿಮಗೆ ಗೊತ್ತಿದೆ. ಕಾಂಗ್ರೆಸ್ ಪಕ್ಷದ ರೀತಿ ನಾನು ಪೊಳ್ಳು ಭರವಸೆ ನೀಡಲಾರೆ ಎಂದು ಅವರು ಹೇಳಿದರು.