ಬಿಡದಿಯಲ್ಲಿ 150ಕ್ಕೂ ಹೆಚ್ಚು ಕನ್ನಡ ಮುಖಂಡರ ಜತೆ ಚರ್ಚಿಸಿದ ಮಾಜಿ ಸಿಎಂ
ನೆಲ, ಜಲ, ಭಾಷೆ ಸಮಸ್ಯೆಗಳ ನಿವಾರಣೆಗೆ ಕನ್ನಡ ಸಂಘಟನೆಗಳನ್ನು ಒಗ್ಗೂಡಿಸುವ ಪ್ರಯತ್ನ
ಬಿಡದಿ/ಬೆಂಗಳೂರು:
ನೆಲ, ಜಲ ಮತ್ತು ಭಾಷೆಯ ವಿಚಾರದಲ್ಲಿ ರಾಜ್ಯವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮುಂದಿನ ವಾರ ಎಲ್ಲ ಕನ್ನಡಪರ ಸಂಘಟನೆಗಳ ಮುಖಂಡರ ಜತೆ ಮಹತ್ವದ ಸಭೆ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.
ಬಿಡದಿಯ ತಮ್ಮ ತೋಟದಲ್ಲಿ ತಮ್ಮನ್ನು ಭೇಟಿಯಾದ ಕನ್ನಡ ಸಂಘಟನೆಗಳ ಮುಖಂಡರ ಜತೆ ಮಾತುಕತೆ ನಡೆಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಮುಖ್ಯಮಂತ್ರಿಗಳು; “ರಾಜ್ಯವು ಅನೇಕ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದೆ. ನೆಲ, ಜಲ ಹಾಗೂ ಭಾಷೆ ವಿಚಾರದಲ್ಲಿ ನಾವು ಅನೇಕ ಕಠಿಣ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಇವುಗಳನ್ನು ಪರಿಣಾಮಕಾರಿಯಾಗಿ ಎದುರಿಸಬೇಕಾದರೆ ಎಲ್ಲ ಸಂಘಷಟನೆಗಳು ಒಟ್ಟಾಗಿ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಚರ್ಚೆ ಮಾಡಲು ಸಭೆ ಕರೆದಿದ್ದೇನೆ” ಎಂದರು.
ರಾಜ್ಯದಲ್ಲಿ ಕನ್ನಡ ಸಂಘಟನೆಗಳ ಜತೆಗೆ ರೈತಪರ, ನೀರಾವರಿ ವಿಷಯಗಳನ್ನಿಟ್ಟುಕೊಂಡು ಹೋರಾಟ ನಡೆಸುತ್ತಿರುವ ಅನೇಕ ಸಂಘಟನೆಗಳದ್ದು, ಅವೆಲ್ಲವನ್ನೂ ಒಗ್ಗೂಡಿಸುವ ಕೆಲಸ ಮಾಡಲಾಗುವುದು ಎಂದು ಅವರು ಹೇಳಿದರು.
ನಮ್ಮ ಸಮಸ್ಯೆಗಳ ಬಗ್ಗೆ ನಾವೇ ಹೋರಾಟ ನಡೆಸಿ ಸಾಧಿಸಿಕೊಳ್ಳಬೇಕಿದೆ. ಆ ಗುರಿ ಸಾಧನೆಗಾಗಿ ಪ್ರಾದೇಶಿಕ ರಾಜಕೀಯ ಶಕ್ತಿಯ ಅಗತ್ಯವಿದೆ. ಆ ದಿಕ್ಕಿನಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಇಂಥ ಸಂಘಟನೆಗಳನ್ನು ಒಗ್ಗೂಡಿಸಿ ಮುಂದಿನ ಕಾರ್ಯತಂತ್ರ ರೂಪಿಸುವ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂದು ಅವರು ವಿವರಿಸಿದರು.
ಬೆಂಗಳೂರಿನಲ್ಲಿ ಸಭೆ:
ಇಂದು ಸುಮಾರು ನೂರೈವತ್ತಕ್ಕೂ ಹೆಚ್ಚು ಕನ್ನಡ ಮುಖಂಡರ ಜತೆ ಚರ್ಚೆ ನಡೆಸಿದ್ದೇನೆ. ಮುಂದಿನ ವಾರ ಬೆಂಗಳೂರಿನಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಇವರೆಲ್ಲರ ಜತೆ ಮುಕ್ತವಾಗಿ ಮಾತುಕತೆ ನಡೆಸಲಿದ್ದೇನೆ. ಕನ್ನಡಿಗರ ನಿರುದ್ಯೋಗ ಸಮಸ್ಯೆ, ಖಾಸಗೀ ಹಾಗೂ ಕೇಂದ್ರ ಸರಕಾರದ ಮಟ್ಟದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಇತ್ಯಾದಿ ವಿಷಯಗಳ ಬಗ್ಗೆ ಮುಖಂಡರಿಂದ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ರಾಜ್ಯವನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕು ಎನ್ನುವ ನಿಟ್ಟಿನಲ್ಲಿ ಪ್ರಾದೇಶಿಕ ಪಕ್ಷದ ಸರಕಾರ ತರುವ ದಿಸೆಯಲ್ಲಿ ಕಾರ್ಯಕ್ರಮ ರೂಪಿಸಲಾಗುವುದು. ಎಂದು ಕುಮಾರಸ್ವಾಮಿ ಅವರು ಹೇಳಿದರು.