Home ಕರ್ನಾಟಕ ಗಣೇಶ ಚತುರ್ಥಿಗೆ ‘ಜಿಯೋಫೋನ್ ನೆಕ್ಸ್ಟ್’

ಗಣೇಶ ಚತುರ್ಥಿಗೆ ‘ಜಿಯೋಫೋನ್ ನೆಕ್ಸ್ಟ್’

70
0

ಮುಂಬೈ/ಬೆಂಗಳೂರು:

ಕೋವಿಡ್ ಸಂಕಷ್ಟದ ನಡುವೆಯೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಉತ್ತಮ ನಿರ್ವಹಣೆ ಪ್ರದರ್ಶಿಸಿದ್ದು, ಕಳೆದ ವರ್ಷದಲ್ಲಿ 540,000 ಕೋಟಿ ರೂ.ಗಳ ಒಟ್ಟು ಆದಾಯ ಗಳಿಸಿದೆ. ಬಡ್ಡಿ, ತೆರಿಗೆ, ಡಿಪ್ರಿಸಿಯೇಶನ್ ಹಾಗೂ ಅಮಾರ್ಟೈಸೇಶನ್‌ಗಳ ಮೊದಲಿನ ಆದಾಯವು (EBITDA) ಸುಮಾರು 98,000 ಕೋಟಿ ರೂ.ಗಳಷ್ಟಿದ್ದು, ಈ ಪೈಕಿ ಸುಮಾರು ಅರ್ಧದಷ್ಟು ಗ್ರಾಹಕ ವಹಿವಾಟುಗಳಿಂದಲೇ ಬಂದಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಇಂದು ನಡೆದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ ಕಳೆದ ವರ್ಷದಲ್ಲಿ 53,739 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದ್ದಾರೆ. ಇದು ಹಿಂದಿನ ವರ್ಷಕ್ಕಿಂತ ಶೇ. 34.8ರಷ್ಟು ಹೆಚ್ಚಾಗಿದೆ.

ಸೌದಿ ಅರಾಮ್‌ಕೋ ಹಾಗೂ ಪಬ್ಲಿಕ್ ಇನ್‌ವೆಸ್ಟ್‌ಮೆಂಟ್ ಫಂಡ್‌ನ ಮುಖ್ಯಸ್ಥ ಯಾಸಿರ್ ಅಲ್-ರುಮಯ್ಯನ್, ಸ್ವತಂತ್ರ ನಿರ್ದೇಶಕರಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ನಿರ್ದೇಶಕ ಮಂಡಲಿಯನ್ನು ಸೇರಲಿದ್ದಾರೆ ಎಂದು ಮುಖೇಶ್ ಅಂಬಾನಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ನಿರ್ದೇಶಕ ಮಂಡಲಿಗೆ ಅವರ ಸೇರ್ಪಡೆ, ರಿಲಯನ್ಸ್‌ನ ಅಂತಾರಾಷ್ಟ್ರೀಕರಣದ ಪ್ರಾರಂಭದ ದ್ಯೋತಕವೂ ಆಗಿದೆ ಎಂದು ಅವರು ಹೇಳಿದ್ದಾರೆ.

‘ಜಿಯೋಫೋನ್ ನೆಕ್ಸ್ಟ್’

ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದ 4G ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಒದಗಿಸುವ ಮೂಲಕ ಭಾರತದಲ್ಲಿ ಡಿಜಿಟಲ್ ಸಂಪರ್ಕ ಕ್ರಾಂತಿಯನ್ನೇ ಉಂಟುಮಾಡಿರುವ ಜಿಯೋ, ಇದೀಗ ಭಾರತವನ್ನು ‘2G-ಮುಕ್ತ’ವಾಗಿಸುವ ಉದ್ದೇಶದೊಂದಿಗೆ ಕೈಗೆಟುಕುವ ಬೆಲೆಯ 4G ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸುತ್ತಿದೆ. ‘ಜಿಯೋಫೋನ್ ನೆಕ್ಸ್ಟ್’ ಎಂಬ ಹೆಸರಿನ ಈ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಜಿಯೋ ಹಾಗೂ ಗೂಗಲ್ ತಂಡಗಳು ಜಂಟಿಯಾಗಿ ಅಭಿವೃದ್ಧಿಪಡಿಸಿದ್ದು, ಸೆಪ್ಟೆಂಬರ್ 10ರ ಗಣೇಶ ಚತುರ್ಥಿಯ ದಿನದಿಂದ ಅದು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ವಾಯ್ಸ್ ಅಸಿಸ್ಟೆಂಟ್, ಪರದೆಯ ಮೇಲಿನ ಪಠ್ಯವನ್ನು ಓದಿ ಹೇಳುವ ಸೌಲಭ್ಯ, ಅನುವಾದ ಸೌಲಭ್ಯ, ಆಗ್ಮೆಂಟೆಡ್ ರಿಯಾಲಿಟಿ ಫಿಲ್ಟರ್‌ಗಳಿರುವ ಸ್ಮಾರ್ಟ್ ಕ್ಯಾಮೆರಾ ಸೇರಿದಂತೆ ಈ ಸ್ಮಾರ್ಟ್‌ಫೋನಿನಲ್ಲಿ ಅನೇಕ ವಿಶಿಷ್ಟ ಸೌಲಭ್ಯಗಳಿರಲಿದ್ದು, ಗೂಗಲ್ ಹಾಗೂ ಜಿಯೋ ಆಪ್‌ಗಳಷ್ಟೇ ಅಲ್ಲದೆ ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಲ್ಲಿರುವ ಆಪ್‌ಗಳನ್ನೂ ಬಳಸುವುದು ಸಾಧ್ಯವಾಗಲಿದೆ. ಇದು ಭಾರತದಲ್ಲಿ ಮಾತ್ರವೇ ಅಲ್ಲದೆ ಇಡೀ ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಆಗಿರಲಿದೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಗೂಗಲ್ ಸಿಇಒ ಸುಂದರ್ ಪಿಚೈ, “ಈ ಸ್ಮಾರ್ಟ್‌ಫೋನ್ ಅನ್ನು ಭಾರತಕ್ಕೆಂದೇ ನಿರ್ಮಿಸಲಾಗಿದ್ದು, ಮೊತ್ತಮೊದಲ ಬಾರಿಗೆ ಅಂತರಜಾಲ ಬಳಸುವ ಲಕ್ಷಾಂತರ ಹೊಸ ಬಳಕೆದಾರರಿಗೆ ಅದು ಹೊಸ ಸಾಧ್ಯತೆಗಳನ್ನು ತೆರೆದಿಡಲಿದೆ” ಎಂದು ಹೇಳಿದ್ದಾರೆ.

2G-ಮುಕ್ತ, 5G-ಯುಕ್ತ ಭಾರತದತ್ತ

ದೇಶೀಯ ನಿರ್ಮಿತ 5G ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜಿಯೋ ಗಮನಾರ್ಹ ಸಾಧನೆಗಳನ್ನು ಮಾಡಿದ್ದು, ಪರೀಕ್ಷಾರ್ಥ ಚಟುವಟಿಕೆಗಳು ಮುಂದುವರೆದಿವೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ. ಶಿಕ್ಷಣ, ಆರೋಗ್ಯ ರಕ್ಷಣೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ 5G ತಂತ್ರಜ್ಞಾನದ ಬಳಕೆಯನ್ನು ಪರೀಕ್ಷಿಸಲಾಗುತ್ತಿದ್ದು, ಭಾರತ ಶೀಘ್ರವೇ ‘2G-ಮುಕ್ತ’ವಾಗುವುದರ ಜೊತೆಗೆ ‘5G-ಯುಕ್ತ’ವೂ ಆಗುತ್ತದೆಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಭಾರತದಾದ್ಯಂತ 5G ಪರಿಚಯಿಸುವುದರ ಜೊತೆಗೆ ನಮ್ಮ ತಂತ್ರಜ್ಞಾನವನ್ನು ಇನ್ನಿತರ ದೇಶಗಳೂ ಬಳಸಲಿವೆ ಎಂದು ಅವರು ಹೇಳಿದ್ದಾರೆ.

  • ಆನ್‌ಲೈನ್ ಮಾಧ್ಯಮದಲ್ಲಿ ನಡೆದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ವಾರ್ಷಿಕ ಸಾಮಾನ್ಯ ಸಭೆ:
  • ಕೋವಿಡ್ ಸಂಕಷ್ಟದ ನಡುವೆಯೂ ಉತ್ತಮ ನಿರ್ವಹಣೆಯ ಪ್ರದರ್ಶನ
  • ಕಳೆದ ವರ್ಷದಲ್ಲಿ 53,739 ಕೋಟಿ ರೂ.ಗಳ ನಿವ್ವಳ ಲಾಭ, ಹಿಂದಿನ ವರ್ಷಕ್ಕಿಂತ ಶೇ. 34.8 ಹೆಚ್ಚಳ
  • ಗೂಗಲ್ ಸಹಯೋಗದಲ್ಲಿ ಹೊಸ ಸ್ಮಾರ್ಟ್‌ಫೋನ್ ತಯಾರಿ, ಗಣೇಶ ಚತುರ್ಥಿಗೆ ಬರಲಿದೆ ಜಿಯೋಫೋನ್ ನೆಕ್ಸ್ಟ್
  • ಹಸಿರು ಇಂಧನಕ್ಕೆ ಹೆಚ್ಚಿನ ಮಹತ್ವ, ಹಲವು ಹೊಸ ಯೋಜನೆಗಳ ಘೋಷಣೆ
  • ರಿಲಯನ್ಸ್ ನಿರ್ದೇಶಕ ಮಂಡಲಿ ಸೇರಲಿರುವ ಸೌದಿ ಅರಾಮ್‌ಕೋ ಮುಖ್ಯಸ್ಥ

ದೇಶದೆಲ್ಲೆಡೆ 5G ಅನುಷ್ಠಾನಕ್ಕಾಗಿ ಜಿಯೋ ಹಾಗೂ ಗೂಗಲ್ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಜಿಯೋದ 5G ಜಾಲ ಹಾಗೂ ಸೇವೆಗಳು ಗೂಗಲ್ ಕ್ಲೌಡ್ ವೇದಿಕೆಯನ್ನು ಬಳಸಿಕೊಳ್ಳಲಿವೆ. ಈ ಒಪ್ಪಂದದ ಅಂಗವಾಗಿ ರಿಲಯನ್ಸ್‌ನ ರೀಟೇಲ್ ವಹಿವಾಟು ಗೂಗಲ್ ಕ್ಲೌಡ್‌ ಅನ್ನು ವ್ಯಾಪಕವಾಗಿ ಬಳಸಲಿದೆ.

ಗೂಗಲ್ ಮಾತ್ರವೇ ಅಲ್ಲದೆ ಫೇಸ್‌ಬುಕ್ ಹಾಗೂ ಮೈಕ್ರೋಸಾಫ್ಟ್‌ ಸಂಸ್ಥೆಗಳ ಜೊತೆಗೂ ರಿಲಯನ್ಸ್ ಸಹಭಾಗಿತ್ವ ಮುಂದುವರೆದಿದೆ. ಜಿಯೋಮಾರ್ಟ್ ಸೇವೆಗಳನ್ನು ವಾಟ್ಸ್‌ಆಪ್ ಮೂಲಕ ಒದಗಿಸುವ ಪ್ರಯೋಗ ಮುಂದುವರೆದಿದ್ದು, ಇದಕ್ಕೆ ಜಿಯೋಮಾರ್ಟ್ ಹಾಗೂ ವಾಟ್ಸ್‌ಆಪ್ ಎರಡೂ ಸೌಲಭ್ಯಗಳ ಗ್ರಾಹಕರಿಂದ ದೊರೆತಿರುವ ಆರಂಭಿಕ ಪ್ರತಿಕ್ರಿಯೆ ಉತ್ತಮವಾಗಿದೆಯೆಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಜಾಮನಗರ ಹಾಗೂ ನಾಗಪುರಗಳಲ್ಲಿ ಮೈಕ್ರೋಸಾಫ್ಟ್ ಸಹಯೋಗದೊಂದಿಗೆ ಎರಡು ಜಿಯೋ-ಅಜ಼್ಯೂರ್ ಕ್ಲೌಡ್ ಡೇಟಾ ಸೆಂಟರುಗಳನ್ನು ಕಾರ್ಯರಂಭಗೊಳಿಸಿರುವುದಾಗಿಯೂ ಅವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಜಿಯೋಫೈಬರ್ ಕುರಿತು ಮಾತನಾಡಿದ ಮುಖೇಶ್ ಅಂಬಾನಿ, ಕಳೆದ ಒಂದು ವರ್ಷದಲ್ಲಿ ಅದು ಇಪ್ಪತ್ತು ಲಕ್ಷಕ್ಕೂ ಹೆಚ್ಚಿನ ಹೊಸ ತಾಣಗಳಲ್ಲಿ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ. ಒಟ್ಟಾರೆ ಮೂವತ್ತು ಲಕ್ಷಕ್ಕೂ ಹೆಚ್ಚಿನ ಬಳಕೆದಾರರೊಂದಿಗೆ, ಜಿಯೋಫೈಬರ್ ಭಾರತದ ಅತಿದೊಡ್ಡ ಹಾಗೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಫಿಕ್ಸೆಡ್ ಬ್ರಾಡ್‌ಬ್ಯಾಂಡ್ ಸೇವಾದಾರ ಸಂಸ್ಥೆಯಾಗಿ ರೂಪುಗೊಂಡಿದೆ ಎಂದು ಅವರು ಹೇಳಿದ್ದಾರೆ.

ಪರಿಸರ ಸ್ನೇಹಿ ಯೋಜನೆಗಳಿಗಾಗಿ ನಾಲ್ಕು ಬೃಹತ್ ಕಾರ್ಖಾನೆ

2035ರ ವೇಳೆಗೆ ನಿವ್ವಳ ‘ಕಾರ್ಬನ್ ಜ಼ೀರೋ’ ಸಾಧನೆ ಮಾಡುವ ನಿಟ್ಟಿನಲ್ಲಿ ರಿಲಯನ್ಸ್ ಸಂಸ್ಥೆ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಪ್ರಕಟಿಸಿದೆ. ರಿಲಯನ್ಸ್‌ನ ಈಗಿನ ವಹಿವಾಟಿನ ಆರಂಭಿಕ ಕೇಂದ್ರವಾಗಿದ್ದ ಜಾಮನಗರದಲ್ಲಿ 5,000 ಎಕರೆ ವಿಸ್ತೀರ್ಣದ ‘ಧೀರೂಭಾಯಿ ಅಂಬಾನಿ ಗ್ರೀನ್ ಎನರ್ಜಿ ಗಿಗಾ ಕಾಂಪ್ಲೆಕ್ಸ್’ ಅನ್ನು ಪ್ರಾರಂಭಿಸುವ ಮೂಲಕ ಅದನ್ನು ತಮ್ಮ ಹೊಸ ವಹಿವಾಟಿನ ಕೇಂದ್ರವನ್ನಾಗಿಯೂ ಮಾಡಿಕೊಳ್ಳುವುದಾಗಿ ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಸೌರಶಕ್ತಿಯ ಉತ್ಪಾದನೆ ಮತ್ತು ಶೇಖರಣೆ ಹಾಗೂ ಪರಿಸರ ಸ್ನೇಹಿ ಹೈಡ್ರೋಜನ್ ಉತ್ಪಾದನೆ ಮತ್ತು ಇಂಧನ ರೂಪಕ್ಕೆ ಪರಿವರ್ತನೆಗಾಗಿ ಒಟ್ಟು ನಾಲ್ಕು ಬೃಹತ್ ಕಾರ್ಖಾನೆಗಳನ್ನು ರಿಲಯನ್ಸ್ ಸ್ಥಾಪಿಸಲಿದೆ. ಈ ಉದ್ದೇಶಕ್ಕಾಗಿ ಮುಂದಿನ ಮೂರು ವರ್ಷಗಳಲ್ಲಿ 60,000 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಬಂಡವಾಳ ಹೂಡಲಿರುವುದಾಗಿ ಮುಖೇಶ್ ಅಂಬಾನಿ ಘೋಷಿಸಿದ್ದಾರೆ. 2030ರ ವೇಳೆಗೆ ಕನಿಷ್ಠ 100 ಗಿಗಾವ್ಯಾಟ್‌ನಷ್ಟು ಸೌರ ವಿದ್ಯುತ್ ಉತ್ಪಾದನೆಯನ್ನು ರಿಲಯನ್ಸ್ ಸಾಧ್ಯವಾಗಿಸಲಿದೆ ಎಂದು ಅವರು ಹೇಳಿದ್ದಾರೆ.

ಹೊಸ ಮಟೀರಿಯಲ್‌ಗಳು ಹಾಗೂ ಪರಿಸರ ಸ್ನೇಹಿ ರಾಸಾಯನಿಕಗಳನ್ನು ಉತ್ಪಾದಿಸುವ ನಿಟ್ಟಿನಲ್ಲೂ ರಿಲಯನ್ಸ್ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಈ ಕಾರ್ಯಕ್ರಮಗಳ ಅಂಗವಾಗಿ ಭಾರತದ ಮೊತ್ತಮೊದಲ ವಿಶ್ವದರ್ಜೆಯ ಕಾರ್ಬನ್ ಫೈಬರ್ ಘಟಕದಲ್ಲಿ ಹೂಡಿಕೆ ಮಾಡುತ್ತಿರುವುದಾಗಿ ಮುಖೇಶ್ ಅಂಬಾನಿ ಘೋಷಿಸಿದ್ದಾರೆ. ತಮ್ಮ ಹೊಸ ಯೋಜನೆಗಳ ಮೂಲಕ ರಿಲಯನ್ಸ್‌ನ ಸಾಂಪ್ರದಾಯಿಕ ಇಂಧನಗಳ ವಹಿವಾಟನ್ನು ತಾಳಿಕೆಯ, ಸರ್ಕ್ಯುಲರ್ ಮತ್ತು ನಿವ್ವಳ ಜ಼ೀರೋ ಕಾರ್ಬನ್ ಮಟೀರಿಯಲ್‌ಗಳ ವಹಿವಾಟಾಗಿ ಬದಲಿಸುವುದಾಗಿ ಅವರು ತಿಳಿಸಿದ್ದಾರೆ. ಇದು ನಮಗೆ ಕೇವಲ ಹೊಸದೊಂದು ವಹಿವಾಟು ಮಾತ್ರವೇ ಅಲ್ಲ, ಇದು ಪರಿಸರಕ್ಕೆ ಉಂಟಾಗಿರುವ ಹಾನಿಯನ್ನು ಗುಣಪಡಿಸುವ ತಮ್ಮ ಉದ್ದಿಷ್ಟಕಾರ್ಯ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ.

ಮುಂದುವರಿದ ರಿಲಯನ್ಸ್ ರೀಟೇಲ್ ಸಾಧನೆ

ಕಳೆದ ವರ್ಷದಲ್ಲಿ 1,500 ಹೊಸ ಮಳಿಗೆಗಳ ಸೇರ್ಪಡೆಯೊಂದಿಗೆ, ಇದೀಗ ಭಾರತದ ಪ್ರತಿ ಎಂಟು ಗ್ರಾಹಕರಲ್ಲಿ ಒಬ್ಬರು ರಿಲಯನ್ಸ್ ರೀಟೇಲ್‌ನೊಂದಿಗೆ ವ್ಯವಹರಿಸುತ್ತಿದ್ದಾರೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲೂ ರಿಲಯನ್ಸ್ ರೀಟೇಲ್‌ ಗಮನಾರ್ಹ ಸಾಧನೆ ತೋರಿದ್ದು, 65,000ಕ್ಕೂ ಹೆಚ್ಚಿನ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಜಿಯೋಮಾರ್ಟ್‌ ಸೇವೆಗಳಿಗೂ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದ್ದು, ಒಂದೇ ದಿನದಲ್ಲಿ 6.5 ಲಕ್ಷ ಆರ್ಡರುಗಳನ್ನು ದಾಖಲಿಸುವ ಮೂಲಕ ಅದು ದಾಖಲೆ ನಿರ್ಮಿಸಿದೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ.

ಕೋವಿಡ್ ಸಂಕಷ್ಟದಲ್ಲಿ ರಿಲಯನ್ಸ್ ಸಹಾಯಹಸ್ತ

ಕೋವಿಡ್ ಜಾಗತಿಕ ಸೋಂಕಿನ ಸಂದರ್ಭದಲ್ಲಿ ಇಡೀ ರಿಲಯನ್ಸ್ ಕುಟುಂಬ ಒಟ್ಟಾಗಿ ನಿಂತು ರಾಷ್ಟ್ರೀಯ ಕರ್ತವ್ಯಗಳನ್ನು ನಿಭಾಯಿಸಿದೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ರಿಲಯನ್ಸ್ ಪ್ರಾರಂಭಿಸಿದ ಐದು ಉದ್ದಿಷ್ಟಕಾರ್ಯಗಳ ಬಗ್ಗೆ ಮಾತನಾಡಿದ ನೀತಾ ಅಂಬಾನಿ, ಆಕ್ಸಿಜನ್ ತಯಾರಿಕೆ ಹಾಗೂ ಪೂರೈಕೆ, ಕೋವಿಡ್ ಮೂಲಸೌಕರ್ಯ ಸೃಷ್ಟಿ, ಆಹಾರ ವಿತರಣೆ, ಉದ್ಯೋಗಿಗಳ ರಕ್ಷಣೆ ಹಾಗೂ ಲಸಿಕೆ ನೀಡುವ ನಿಟ್ಟಿನಲ್ಲಿ ರಿಲಯನ್ಸ್‌ನ ಸಾಧನೆಗಳನ್ನು ವಿವರಿಸಿದರು. ಎಂದೂ ಮೆಡಿಕಲ್ ದರ್ಜೆಯ ಆಕ್ಸಿಜನ್ ಉತ್ಪಾದನೆ ಮಾಡಿಲ್ಲದಿದ್ದ ರಿಲಯನ್ಸ್ ಸಂಸ್ಥೆ ಇದೀಗ ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟಾರೆ ಆಕ್ಸಿಜನ್ ಪ್ರಮಾಣದ ಶೇ. 11ಕ್ಕೂ ಹೆಚ್ಚಿನ ಪಾಲನ್ನು ತಯಾರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈವರೆಗೆ 7.5 ಕೋಟಿಗೂ ಹೆಚ್ಚಿನ ಆಹಾರ ಪೊಟ್ಟಣಗಳನ್ನು ವಿತರಿಸಿರುವ ರಿಲಯನ್ಸ್‌ನ ‘ಮಿಶನ್ ಅನ್ನ ಸೇವಾ’ ಕಾರ್ಪೊರೇಟ್ ಪ್ರತಿಷ್ಠಾನವೊಂದು ಕೈಗೊಂಡ ವಿಶ್ವದ ಅತಿದೊಡ್ಡ ಆಹಾರ ವಿತರಣಾ ಕಾರ್ಯಕ್ರಮವಾಗಿದೆ ಎಂದು ಅವರು ಹೇಳಿದ್ದಾರೆ.

(Eds: Disclaimer: The following press release comes to you under an arrangement with Reliance Jio Infocomm Ltd. TheBengaluruLive takes no editorial responsibility for the same.) 

LEAVE A REPLY

Please enter your comment!
Please enter your name here