ಬೆಂಗಳೂರು:
ಸ್ಯಾಂಡಲ್ ವುಡ್ ನಲ್ಲಿ ಭೂಗತ ಪಾತಕ ಲೋಕದ ಮೇಲೆ ಬೆಳಕು ಚೆಲ್ಲುವ ಸಾಕಷ್ಟು ಚಿತ್ರಗಳು ಮೂಡಿಬಂದಿವೆ. ಎಪ್ಪತ್ತು, ಎಂಬತ್ತರ ದಶಕದಲ್ಲಿ ಹೆಚ್ಚಾಗಿ ಕೇಳಿಬರುತ್ತಿದ್ದ ಡಾನ್ ಜಯರಾಜ್ ಕುರಿತ ಚಿತ್ರಗಳೂ ಸಹ ಈಗಾಗಲೇ ತೆರೆ ಕಂಡಿವೆ.
ಆದಾಗ್ಯೂ ಜಯರಾಜ್ ಪುತ್ರ ನಾಯಕನಾಗಿ ನಟಿಸುತ್ತಿರುವ ‘ಜಾಂಟಿ S/o ಜಯರಾಜ್’ ಕೂಡ ಜಯರಾಜ್ ಕಥೆ ಹಾಗೂ ಕಾಲ್ಪನಿಕ ಕಥೆಗಳ ಸಮ್ಮಿಶ್ರವಾಗಿದ್ದು, ಆನಂದ್ ರಾಜ್ ನಿರ್ದೇಶನವಿದೆ.
ಶುಕ್ರವಾರ ನಗರದ ದೇವಾಲಯವೊಂದರಲ್ಲಿ ಚಿತ್ರೀಕರಣದ ಮುಹೂರ್ತ ನೆರವೇರಿದ್ದು, ಸಚಿವ ಬಿ.ಸಿ. ಪಾಟೀಲ್ ಸೇರಿದಂತೆ ಹಲವು ಗಣ್ಯರು ಶುಭ ಕೋರಿದ್ದಾರೆ.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಅಜಿತ್ ಜಯರಾಜ್, “ನನ್ನ ತಂದೆ ಮೃತರಾದಾಗ ನಾನು 8 ತಿಂಗಳ ಮಗು. ದೊಡ್ಡವನಾಗುತ್ತಿದ್ದಂತೆ ಅಪ್ಪನ ಬಗ್ಗೆ ತಿಳಿದುಕೊಂಡೆ. ಅವರು ಮಾಡಿರುವ ಒಳ್ಳೆಯ ಕೆಲಸಗಳು ನನ್ನನ್ನು ಕಾಯುತ್ತಿದೆ. ಎಲ್ಲೇ ಹೋದರೂ ಅವರ ಹೆಸರು ನನಗೆ ಒಳ್ಳೆಯದನ್ನೇ ಮಾಡಿದೆ” ಎಂದರು.
ಈ ಹಿಂದೆ ಹನಿ ಹನಿ ಇಬ್ಬನಿ, ತ್ರಾಟಕ ಚಿತ್ರಗಳಲ್ಲಿ ನಟಿಸಿರುವ ಅಜಿತ್ ಅಭಿನಯದ ಕ್ರಾಂತಿವೀರ, ರೈಮ್ಸ್ ಇನ್ನಷ್ಟೇ ತೆರೆಗೆ ಬರಬೇಕಿದೆ. “ಮಾಸ್ ಅಪಿಯರ್ ಬೇಕೆಂದು ಬಯಸಿದ್ದೆ. ಅದು ಈ ಚಿತ್ರದಲ್ಲಿ ಸಿಗುತ್ತಿದೆ. ಜಾಂಟಿ S/O ಜಯರಾಜ್ ಚಿತ್ರದಲ್ಲಿ ಡಾನ್ ಜಯರಾಜ್ ಪುತ್ರನ ಪಾತ್ರದಲ್ಲಿಯೇ ಕಾಣಿಸಿಕೊಂಡರೂ ಸಹ ರೌಡಿ ಪಾತ್ರವಲ್ಲ. ನನ್ನ ನಿಜ ಜೀವನಕ್ಕೆ ಲಿಂಕ್ ಇರುವ ಪಾತ್ರವಾದ್ದರಿಂದ ಇಷ್ಟವಾಯಿತು” ಎಂದು ಹೇಳಿದರು.
ತಂದೆ ಜಯರಾಜ್ ಸಾವಿನ ಬಳಿಕ ಎದುರಾದ ಸಂಕಷ್ಟಗಳಿಂದ ಮಗ ಹೇಗೆ ಹೊರಬರುತ್ತಾರೆ ಎಂಬುದನ್ನು ತೋರಿಸಲಾಗುತ್ತದೆ. ಭೂಗತ ಚಟುವಟಿಕೆಗಳು ಇಂದಿಗೂ ಇದ್ದೇ ಇದೆ. ಅದನ್ನೂ ಸಹ ಚಿತ್ರದಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ನಿರ್ದೇಶಕ ಆನಂದ್ ರಾಜ್ ವಿವರಿಸಿದರು.
ಅಜಿತ್ ಜಯರಾಜ್ ಗೆ ಜೋಡಿಯಾಗಿ ಪರಭಾಷಾ ನಟಿಯರನ್ನೇನೂ ಕರೆಸಿಕೊಳ್ಳುತ್ತಿಲ್ಲ. ಕನ್ನಡದ ನಟಿಯನ್ನೇ ಆಯ್ಕೆ ಮಾಡುವುದಾಗಿ ನಿರ್ದೇಶಕರು ತಿಳಿಸಿದರು. ಅಲ್ಲದೆ ಡಾನ್ ಜಯರಾಜ್ ಪಾತ್ರಕ್ಕೆ ಯಾರು ಎಂಬುದನ್ನೂ ಇನ್ನಷ್ಟೇ ಆಯ್ಕೆ ಮಾಡಬೇಕಿದೆ ಎಂದರು.
-: ಕಿಶನ್ ಬಿಳಗಲಿ ರೌಡಿಯಾದರೂ ರೊಮ್ಯಾನ್ಸ್ ಮಾಡ್ತಾರಂತೆ:-
ಚಾಕಲೆಟ್ ಬಾಯ್ ಲುಕ್ ಇರುವ ನಟ ಕಿಶನ್ ಬಿಳಗಲಿ ಜಾಂಟಿ S/o ಜಯರಾಜ್’ ಚಿತ್ರದಲ್ಲಿ ರೌಡಿಯಾಗಿ ಕಾಣಿಸಿಕೊಂಡರೂ, ರೊಮ್ಯಾಂಟಿಕ್ ಹಾಡು ಇದೆಯಂತೆ. ಮುಗ್ಧ ಮುಖ ಹೊಂದಿರುವ ರೌಡಿಯಾಗಿರುವ ಕಿಶನ್ ಗೆ ಜೋಡಿಯಾಗಿ ಸೌಮ್ಯಾ ಪಾಟೀಲ್ ನಟಿಸುತ್ತಿದ್ದಾರೆ.
ಈ ಕುರಿತು ಮಾತನಾಡಿದ ಸೌಮ್ಯಾ ಪಾಟೀಲ್, ಭೂಗತ ಪಾತಕದ ಕಥಾಹಂದರದ ಸಿನಿಮಾ ಹಾಗೂ ರೌಡಿಗೆ ಜೋಡಿಯಾಗಿ ನಟಿಸಬೇಕು ಎಂದಾಗ ಮೊದಲಿಗೆ ಹೆದರಿಕೆಯಾಗಿತ್ತು ಅಂತ ಹೇಳಿಕೊಂಡರು.
ನಿರ್ದೇಶನದೊಂದಿಗೆ ಚಿತ್ರಕಥೆಯ ಜವಾಬ್ದಾರಿಯನ್ನೂ ಆನಂದ್ ರಾಜ್ ಹೊತ್ತಿದ್ದಾರೆ. ಛಾಯಾಗ್ರಹಣ ಅರ್ಜುನ್ ಅಕೋಟ್, ವಿಜೇತ್ ಎಮ್, ಸಂಗೀತವಿದ್ದು, ಬಂಡೆ ಚಂದ್ರು ಸಾಹಸ ನಿರ್ದೇಶನವಿದೆ.
ತಾರಾಗಣದಲ್ಲಿ ಅಜಿತ್ ಜಯರಾಜ್, ಕಿಶನ್ ಬಿಳಗಲಿ, ರಾಜವರ್ಧನ್, ಸಚಿನ ಪುರೋಹಿತ್, ಸಿಲ್ಲಿ ಲಲ್ಲಿ ಆನಂದ್, ತಾರಾ ಅನುರಾಧ, ಸೋನು ಪಾಟೀಲ್, ಶರತ್ ಲೋಹಿತಾಶ್ವ, ಮೈಕೋ ನಾಗರಾಜು, ಪೆಟ್ರೋಲ್ ಪ್ರಸನ್ನ, ನಾಗರಾಜ್ ಮೊದಲಾದವರಿದ್ದಾರೆ.