Home ಕೋಲಾರ ಹಿಂಸಾಚಾರಕ್ಕೆ ತಿರುಗಿದ ವಿಸ್ಟ್ರಾನ್ ಕಂಪನಿಯ ಕಾರ್ಮಿಕರ ಮುಷ್ಕರ; ವಾಹನಗಳಿಗೆ ಬೆಂಕಿ, ಲಾಠಿಪ್ರಹಾರ

ಹಿಂಸಾಚಾರಕ್ಕೆ ತಿರುಗಿದ ವಿಸ್ಟ್ರಾನ್ ಕಂಪನಿಯ ಕಾರ್ಮಿಕರ ಮುಷ್ಕರ; ವಾಹನಗಳಿಗೆ ಬೆಂಕಿ, ಲಾಠಿಪ್ರಹಾರ

51
0

ಕೋಲಾರ:

ಇತ್ತೀಚೆಗೆ ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಆರಂಭಿಸಲಾಗಿದ್ದ ವಿಸ್ಟ್ರಾನ್ ಕಂಪನಿಯಲ್ಲಿ ಕಾರ್ಮಿಕರ ಮುಷ್ಕರ ಹಿಂಸಾಚಾರಕ್ಕೆ ತಿರುಗಿದ್ದು, ಕಂಪನಿಯ ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

WhatsApp Image 2020 12 12 at 07.32.38

ಕಳೆದ ಎರಡು ಮೂರು ತಿಂಗಳಿಂದ ಕಾರ್ಮಿಕರಿಗೆ ಸರಿಯಾಗಿ ವೇತನ ನೀಡದ ಕಾರಣ ಬೆಳ್ಳಂಬೆಳಗ್ಗೆ ಸಾವಿರಾರು ಕಾರ್ಮಿಕರು ಕಂಪನಿ ಮುಂದೆ ಜಮಾಯಿಸಿ ಕಂಪನಿ ವಿರುದ್ಧ ಪ್ರತಿಭಟನೆ ನಡೆಸಿದರು. ಒಂದು ಹಂತದಲ್ಲಿ ಆಕ್ರೋಶಿತ ಪ್ರತಿಭಟನಕಾರರು ಕಂಪನಿಯ ಕಿಟಕಿ ಗಾಜುಗಳನ್ನು ನುಚ್ಚು ನೂರು ಮಾಡಿ, ಅಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರಿಗೆ ಗುತ್ತಿಗೆ ಆಧಾರದ ನಾಲ್ಕನೆಯ ದರ್ಜೆಯ ಕೆಲಸಗಳನ್ನು ನೀಡಿ ಹೊರ ರಾಜ್ಯದ ಅಭ್ಯರ್ಥಿಗಳನ್ನು ಖಾಯಂ ಉದ್ಯೋಗ ಅವಕಾಶಗಳನ್ನು ನೀಡುತ್ತಿರುವ ಬಗ್ಗೆ ಕಾರ್ಮಿಕರಲ್ಲಿ ಆರಂಭದಿಂದಲೂ ಅಸಮಾಧಾನವಿತ್ತು. ಇದೀಗ ಸಂಬಳ ಕೂಡ ಸರಿಯಾಗಿ ನೀಡುತ್ತಿರಲ್ಲ ಎಂದು ಕಾರ್ಮಿಕರು ಬೀದಿಗೆ ಇಳಿದಿದ್ದಾರೆ.

ಸುಮಾರು ಹದಿನೈದು ಸಾವಿರ ಉದ್ಯೋಗ ಸೃಷ್ಟಿಯ ಬೃಹತ್ ಕಂಪನಿ ಇದಾಗಿದ್ದು, ಇನ್ನೂ ಅರ್ಧದಷ್ಟು ನೇಮಕಾತಿಯೂ ಮುಗಿದಿರಲಿಲ್ಲ. ಐಫೋನ್ ತಯಾರಿಸುವ ದೇಶದ ಏಕೈಕ ಕಂಪನಿ ವಿಸ್ಟ್ರಾನ್, ಆರಂಭದಲ್ಲೇ ಕಾರ್ಮಿಕರ ಆಕ್ರೋಶಕ್ಕೆ ಗುರಿಯಾಗಿದೆ.

ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಗುಂಪು ಚದುರಿಸಲು ಲಾಠಿ ಪ್ರಹಾರ ನಡೆಸಿದರು. ಕೆಲವು ಕಾರ್ಮಿಕರನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಈಗ ಕಂಪನಿಯ ಬಳಿ ಪ್ರಕ್ಷುಬ್ದ ವಾತಾವರಣ ನಿರ್ಮಾಣ ಆಗಿದೆ. ವೇಮಗಲ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಈ ಬಗ್ಗೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here