ಬೆಂಗಳೂರಿನಲ್ಲಿ ಸೋಮವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಆಯೋಜಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡುತ್ತಿರುವ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ. ಚಿತ್ರ: ವಾರ್ತಾ ಇಲಾಖೆ
ಬೆಂಗಳೂರು: ಇಂದಿನ ಪತ್ರಿಕೋದ್ಯಮದಲ್ಲಿ ಉಳಿವು ಹಾಗೂ ಜನಪ್ರಿಯತೆ ಎಷ್ಟು ಮುಖ್ಯವೋ ಅಷ್ಟೇ ಜವಾಬ್ದಾರಿ ಮತ್ತು ಹೊಣೆಗಾರಿಕೆಯೂ ಮುಖ್ಯ; ಆದರೆ ಹೊಣೆಗಾರಿಕೆ ಕಡಿಮೆಯಾಗುತ್ತಿದ್ದು, ಹೊಣೆಗಾರಿಕೆ ಮತ್ತು ಜನಪ್ರಿಯತೆಯ ಸಮತೋಲನ ಅಗತ್ಯವಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಸೋಮವಾರ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅಭಿಪ್ರಾಯಪಟ್ಟರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿಯ ಸಹಯೋಗದಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
‘ಮಿತಿಯೊಳಗೆ ಸ್ವತಂತ್ರ ಮಾಧ್ಯಮ’
ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮವು ಜನರಿಗೆ ತ್ವರಿತ ಮಾಹಿತಿ ನೀಡುತ್ತಿದ್ದರೆ, ಮತ್ತೊಂದೆಡೆ ತಪ್ಪು ಸುದ್ದಿಗಳಿಂದ ವ್ಯಕ್ತಿಗಳ ವ್ಯಕ್ತಿತ್ವವನ್ನೇ ನಾಶಮಾಡುತ್ತಿದೆ; ಆದ್ದರಿಂದ ಪತ್ರಕರ್ತರು ವರದಿ ಮಾಡುವಾಗ ಎಚ್ಚರಿಕೆ ವಹಿಸಬೇಕು ಮತ್ತು ಡಿಜಿಟಲ್ ಯುಗದ ಸವಾಲುಗಳ ಕುರಿತು ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ ಎಂದು ಅವರು ಹೇಳಿದರು. ವರದಿಗಳಲ್ಲಿ ಸತ್ಯತೆ ಮತ್ತು ನೈಜತೆಗೆ ಹೆಚ್ಚಿನ ಮಹತ್ವ ನೀಡಬೇಕು, ಬರಹಗಳು ಸಮಾಜದ ಸಮಸ್ಯೆಗಳನ್ನು ಹಾಗೂ ಘಟನೆಗಳನ್ನು ನಿಖರವಾಗಿ ಪ್ರತಿಬಿಂಬಿಸುವಂತಿರಬೇಕು; ಕೇವಲ ವರದಿ ಮಾಡುವುದಷ್ಟೇ ಮಾಧ್ಯಮಗಳ ಜವಾಬ್ದಾರಿಯಾಗಬಾರದು, ಸಮಾಜವನ್ನು ಬದಲಾಯಿಸುವ, ಸಮಾನತೆ ಮತ್ತು ಹಕ್ಕುಗಳ ಬಗ್ಗೆ ವಿಶ್ಲೇಷಿಸುವ ದೊಡ್ಡ ಜವಾಬ್ದಾರಿ ಪತ್ರಿಕೋದ್ಯಮದ ಮೇಲಿದೆ ಎಂದರು.
ಜವಾಹರಲಾಲ್ ನೆಹರೂ ಅವರು ಪತ್ರಿಕೋದ್ಯಮದಲ್ಲಿ ಕೆಲವು ಅಪಾಯಗಳಿದ್ದರೂ, ನಿಯಂತ್ರಿತ ಅಥವಾ ದಮನಕ್ಕೊಳಗಾದ ಪತ್ರಿಕೆಗಿಂತ ಸಂಪೂರ್ಣ ಸ್ವಾತಂತ್ರ್ಯವಿರುವ ಪತ್ರಿಕೆ ಇರುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿಸಿದ ಉಪ ಮುಖ್ಯಮಂತ್ರಿಗಳು, ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿರುವ ಪತ್ರಿಕೋದ್ಯಮಕ್ಕೆ ಸಂಪೂರ್ಣ ಸ್ವಾತಂತ್ರ್ಯ ಇರಬೇಕು; ಆದರೆ ತಮ್ಮ ಇತಿಮಿತಿಯಲ್ಲಿ ಯಾರಿಗೂ ಹಾನಿಯಾಗದಂತೆ, ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕು ಎಂದರು.
ಹಿಂದಿನ ಕಾಲದಲ್ಲಿ ಪತ್ರಿಕೆಗಳ ಬರಹಗಳು ಸಮಾಜವನ್ನು ಕಟ್ಟುವ ಅಥವಾ ತಿದ್ದುವ ಶಕ್ತಿಯನ್ನು ಹೊಂದಿದ್ದವು; ಆದರೆ ಇಂದಿನ ಡಿಜಿಟಲ್ ಹಾಗೂ ಕೃತಕ ಬುದ್ಧಿಮತ್ತೆ ಯುಗದಲ್ಲಿ ನಿಜವಾದ ಸ್ವಂತಿಕೆಯ ಬರಹಗಳು ಮತ್ತು ವಿಶ್ಲೇಷಣೆಗಳು ಕಡಿಮೆಯಾಗುತ್ತಿರುವುದು ಕಳವಳಕಾರಿ ಎಂದ ಅವರು, ಕೇವಲ ವರದಿಗಾರರಾಗದೆ ಆಳವಾದ ಅಧ್ಯಯನ ಮತ್ತು ವಿಶ್ಲೇಷಣಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
‘ಎಐ ಯುಗದಲ್ಲಿ ಮಾಧ್ಯಮ ಎಚ್ಚರಿಕೆ ವಹಿಸಬೇಕು’
ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕೋದ್ಯಮವು ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ಕಾಪಾಡಿಕೊಳ್ಳುವ ಜೊತೆಗೆ, ಇಂದಿನ ಡಿಜಿಟಲ್ ಹಾಗೂ ಕೃತಕ ಬುದ್ಧಿಮತ್ತೆ ಯುಗದಲ್ಲಿ ಮಾಧ್ಯಮಗಳು ಇನ್ನಷ್ಟು ಎಚ್ಚರಿಕೆ ವಹಿಸಬೇಕಿದೆ ಎಂದರು. ಯುವಜನರು ತಮ್ಮ ಮಾನಸಿಕ ತೊಳಲಾಟವನ್ನು ಯಾರೊಂದಿಗೂ ಹಂಚಿಕೊಳ್ಳದ ಕಾರಣ, ಯುವ ಸಮುದಾಯ ಎದುರಿಸುತ್ತಿರುವ ಆತ್ಮವಿಶ್ವಾಸದ ಕೊರತೆ, ಗೊಂದಲ ಹಾಗೂ ಮಾನಸಿಕ ಒತ್ತಡಗಳನ್ನು ನಿವಾರಿಸಲು ಸರ್ಕಾರವು 14416 ಟೆಲಿ ಮನಸ್ಸು ಹೆಲ್ಪ್‌ಲೈನ್ ಆರಂಭಿಸಿದೆ ಎಂದು ತಿಳಿಸಿದರು.
ಇದುವರೆಗೂ ಈ ಹೆಲ್ಪ್‌ಲೈನ್‌ನ ಪ್ರಯೋಜನವನ್ನು ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರು ಪಡೆದುಕೊಂಡಿದ್ದು, ಅವರಲ್ಲಿ ಶೇ. 60ರಷ್ಟು ಯುವಜನರು; ತಜ್ಞರ ಸಹಾಯದಿಂದ ಶೇ. 99ರಷ್ಟು ಮಂದಿ ಸಕಾರಾತ್ಮಕ ಪರಿಹಾರ ಕಂಡುಕೊಂಡಿದ್ದಾರೆ ಎಂದು ಅವರು ಹೇಳಿದರು. ಉಡುಪಿ ಜಿಲ್ಲೆಯಲ್ಲಿ ದೇವಸ್ಥಾನಗಳ ಹೂವಿನ ತ್ಯಾಜ್ಯ ಬಳಸಿ ‘ಉಡುಪಿ ಸುಗಂಧ’ ಹೆಸರಿನಲ್ಲಿ ಅಗರಬತ್ತಿ ಹಾಗೂ ರೂಮ್ ಫ್ರೆಶ್ನರ್‌ಗಳಂತಹ ಉತ್ಪನ್ನ ತಯಾರಿಸುತ್ತಿರುವ ಸ್ವಸಹಾಯ ಗುಂಪುಗಳ ಬಗ್ಗೆ ಮಾಹಿತಿ ನೀಡಿದ ಅವರು, ಇಂತಹ ಯಶೋಗಾಥೆಗಳ ಮೇಲೆ ಮಾಧ್ಯಮದವರು ಬೆಳಕು ಚೆಲ್ಲಬೇಕು ಎಂದರು.
‘ಹಳೆಯದೆಲ್ಲವೂ ಒಳ್ಳೆಯದಲ್ಲ’
‘ಪತ್ರಿಕೋದ್ಯಮ: ಜನಪ್ರಿಯತೆಯೇ ಅಥವಾ ಜವಾಬ್ದಾರಿಯುತವೇ’ ಎಂಬ ವಿಷಯದ ಚರ್ಚೆಯಲ್ಲಿ ಮಾತನಾಡಿದ ಡೆಕ್ಕನ್ ಹೆರಾಲ್ಡ್‌ನ ನಿವೃತ್ತ ಸಹ ಸಂಪಾದಕ ಎಸ್.ಆರ್. ರಾಮಕೃಷ್ಣ ಅವರು, ಹಳೆಯದೆಲ್ಲವೂ ಒಳ್ಳೆಯದಲ್ಲ, ಹೊಸದೆಂಬ ಮಾತ್ರಕ್ಕೆ ಯಾವುದೂ ಕೆಟ್ಟದ್ದಲ್ಲ ಎಂಬ ಕಾಳಿದಾಸನ ತತ್ವ ಇಂದಿಗೂ ಮಾಧ್ಯಮಗಳಿಗೆ ಅನ್ವಯಿಸುತ್ತದೆ ಎಂದರು. ಜನಪ್ರಿಯತೆಗಿಂತ ಜವಾಬ್ದಾರಿಯುತ ವರದಿಗಾರಿಕೆ ಹಾಗೂ ಜನರಿಗೆ ಸ್ವತಃ ನಿರ್ಣಯಿಸಲು ಅವಕಾಶ ನೀಡುವುದೇ ನಿಜವಾದ ಪತ್ರಿಕೋದ್ಯಮದ ಲಕ್ಷಣ ಎಂದು ಅವರು ಹೇಳಿದರು.
