ಗದಗ/ಬೆಂಗಳೂರು: ಗದಗ ಜಿಲ್ಲೆಯಲ್ಲಿ ಲೋಕಾಯುಕ್ತ ಪೊಲೀಸರು ಶುಕ್ರವಾರ ಯಶಸ್ವಿ ಟ್ರ್ಯಾಪ್ ಕಾರ್ಯಾಚರಣೆ ನಡೆಸಿ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಅವರನ್ನು ₹5 ಲಕ್ಷ ಲಂಚ ಸ್ವೀಕರಿಸುವ ವೇಳೆ ವಶಕ್ಕೆ ಪಡೆದಿದ್ದಾರೆ. ಅವರೊಂದಿಗೆ ಇಬ್ಬರು ಪಿಎಗಳನ್ನು ಕೂಡ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಪ್ರಕಟಣೆಯ ಪ್ರಕಾರ, ಕ್ರೈಂ ನಂ. 02/2026 ಅನ್ನು ಭ್ರಷ್ಟಾಚಾರ ತಡೆ ಕಾಯ್ದೆ 1988ರ ಸೆಕ್ಷನ್ 7(a) ಹಾಗೂ 7(A) ಅಡಿ ದಾಖಲಿಸಲಾಗಿದೆ. ಚಿಂಚಳಿ ಗ್ರಾಮದ ಕ್ಲಾಸ್-1 ಗುತ್ತಿಗೆದಾರ ವಿಜಯ್ ಪೂಜಾರಿ ಅವರು ಸಣ್ಣ ನೀರಾವರಿ ಇಲಾಖೆಯ ಕಾಮಗಾರಿ (ರಸ್ತೆ ಎರಡೂ ಬದಿಗಳ ತಡೆಗೋಡೆ ನಿರ್ಮಾಣ) ಕಾರ್ಯಗತಗೊಳಿಸಲು ₹11 ಲಕ್ಷ ಲಂಚ ಬೇಡಿಕೆಯಾಗಿದೆ ಎಂದು ದೂರು ನೀಡಿದ್ದಾರೆ.

ಮೂಲಗಳ ಪ್ರಕಾರ, ಕಾಮಗಾರಿ ಮೌಲ್ಯದ ಸುಮಾರು 12 ಶೇಕಡಾ ಕಮಿಷನ್ ಬೇಡಿಕೆ ಇಟ್ಟು ಬಳಿಕ 11 ಶೇಕಡಾಕ್ಕೆ ಒಪ್ಪಂದ ನಡೆದಿತ್ತು. ಅದರ ಭಾಗವಾಗಿ ₹5 ಲಕ್ಷವನ್ನು ಮೊದಲ ಕಂತಾಗಿ ಸ್ವೀಕರಿಸುವ ವೇಳೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.
ಈ ಕಾರ್ಯಾಚರಣೆಯನ್ನು ಲೋಕಾಯುಕ್ತ ಗದಗ ಘಟಕದ ಪಿಐ-1 ಶ್ರೀ ಪರಮೇಶ್ ಕವಟಗಿ ಅವರ ನೇತೃತ್ವದಲ್ಲಿ, ಡಿಎಸ್ಪಿ ಲೋಕಾಯುಕ್ತ ಗದಗ ಮೇಲ್ವಿಚಾರಣೆಯಲ್ಲಿ ಹಾಗೂ ಲೋಕಾಯುಕ್ತ ಎಸ್ಪಿ ಧಾರವಾಡ ಮಾರ್ಗದರ್ಶನದಲ್ಲಿ ನಡೆಸಲಾಗಿದೆ.

ಲಕ್ಷ್ಮೇಶ್ವರದಲ್ಲಿರುವ ಬಾಲಾಜಿ ಆಸ್ಪತ್ರೆಯಲ್ಲಿ ದಾಳಿ ನಡೆದಿದ್ದು, ಅದು ಶಾಸಕರಿಗೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ. ಪ್ರಕರಣದಲ್ಲಿ ಶಾಸಕ ಡಾ. ಚಂದ್ರು ಲಮಾಣಿ, ಅವರ ಸರ್ಕಾರಿ ಪಿಎ ಮಂಜುನಾಥ ವಾಲ್ಮೀಕಿ ಹಾಗೂ ಖಾಸಗಿ ಪಿಎ ಗುರುನಾಯಕ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ.
ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಸಾರ್ವಜನಿಕ ಕಾಮಗಾರಿಗಳಲ್ಲಿ ಕಮಿಷನ್ ಆರೋಪಗಳ ಬಗ್ಗೆ ಮತ್ತೊಮ್ಮೆ ಗಮನ ಸೆಳೆದಿದೆ. ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತರು ತಿಳಿಸಿದ್ದಾರೆ.
