ಬೆಂಗಳೂರು: ಕರ್ನಾಟಕದ ಕಲಬುರಗಿಯ ತೊಗರಿ ಬೇಳೆ ಮಾಲ್ಡೀವ್ಸ್ಗೆ ತಲುಪುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರದ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಸ್ಥಳೀಯ ಕೃಷಿ ಉತ್ಪನ್ನಗಳಿಗೆ ವಿದೇಶಗಳಲ್ಲಿ ದೊರೆಯುತ್ತಿರುವ ಹೊಸ ಮಾರುಕಟ್ಟೆಗಳನ್ನು ಅವರು ಪ್ರಸ್ತಾಪಿಸಿದರು.
ಬಿಹಾರದ ಪೂರ್ಣಿಯಾದ ಮಖಾನಾ ಗ್ರೀಸ್ಗೆ ತಲುಪುತ್ತಿರುವುದನ್ನೂ ಮೋದಿ ಉಲ್ಲೇಖಿಸಿದರು. ವೋಕಲ್ ಫಾರ್ ಲೋಕಲ್ ಅಭಿಯಾನವು ಭಾರತೀಯ ಉತ್ಪನ್ನಗಳನ್ನು ವಿಶ್ವದ ಮಾರುಕಟ್ಟೆಗಳಿಗೆ ಕೊಂಡೊಯ್ಯುತ್ತಿದ್ದು, ರೈತರಿಗೆ ಹೊಸ ಅವಕಾಶಗಳನ್ನು ತೆರೆಯುತ್ತಿದೆ ಎಂದು ಹೇಳಿದರು.

ಬುಡಕಟ್ಟು ಕಲೆಯ ಪ್ಯಾಕೇಜಿಂಗ್, ಖಾದಿಗೂ ಒತ್ತು
ಮಹಾರಾಷ್ಟ್ರದಲ್ಲಿ ಶಬರಿ ನ್ಯಾಚುರಲ್ಸ್ ಮೂಲಕ ಮಾರಾಟವಾಗುತ್ತಿರುವ ಬುಡಕಟ್ಟು ಸಮುದಾಯಗಳ ಉತ್ಪನ್ನಗಳ ಪ್ಯಾಕೇಜಿಂಗ್ನಲ್ಲಿ ಬುಡಕಟ್ಟು ಕಲೆಯ ಛಾಪಿದೆ ಎಂದು ಮೋದಿ ಹೇಳಿದರು. ಈ ಪ್ಯಾಕೇಜಿಂಗ್ಗೆ ಜಪಾನ್ನ ಗುಡ್ ಡಿಸೈನ್ ಪ್ರಶಸ್ತಿ ದೊರೆತಿದೆ ಎಂದು ತಿಳಿಸಿದರು.
ಖಾದಿಯ ಜನಪ್ರಿಯತೆ ಹೆಚ್ಚುತ್ತಿರುವುದರಿಂದ ತಮ್ಮ ಕೌಶಲ ಮತ್ತು ಪರಿಶ್ರಮದಿಂದ ಇಂತಹ ಉತ್ಪನ್ನಗಳನ್ನು ತಯಾರಿಸುವ ಕುಶಲಕರ್ಮಿಗಳಿಗೂ ಪ್ರಯೋಜನವಾಗುತ್ತಿದೆ ಎಂದು ಮೋದಿ ಹೇಳಿದರು. ಸ್ಥಳೀಯ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳನ್ನು ಖರೀದಿಸುವ ಮೂಲಕ ವೋಕಲ್ ಫಾರ್ ಲೋಕಲ್ಗೆ ಬೆಂಬಲ ನೀಡುವಂತೆ ಕರೆ ನೀಡಿದರು.
