ಕಡತ ಫೋಟೋ: ನವೆಂಬರ್ 7ರಂದು ಕಲಬುರಗಿ ಜಿಲ್ಲೆ ಕುರಿತ ಪರಿಶೀಲನಾ ಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ.
ಬೆಂಗಳೂರು: ಸ್ಥಳೀಯ ಜೈವಿಕ ಸಂಪನ್ಮೂಲಗಳನ್ನು ವೈಜ್ಞಾನಿಕವಾಗಿ ಬಳಸಿಕೊಂಡು ಕೃಷಿ ಉತ್ಪಾದಕತೆ ಮತ್ತು ರೈತರ ಆದಾಯ ಹೆಚ್ಚಿಸುವುದು, ಸ್ಥಳೀಯ ಉತ್ಪನ್ನಗಳಿಗೆ ಮೌಲ್ಯವರ್ಧನೆ ಕಲ್ಪಿಸುವುದು ಹಾಗೂ ಗ್ರಾಮೀಣ ಉದ್ಯಮ ಮತ್ತು ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ₹50 ಕೋಟಿ ಅಂದಾಜು ವೆಚ್ಚದ ಮೂರು ವರ್ಷಗಳ ‘ಕಲಬುರಗಿ ಬಯೋ-ಇಕಾನಮಿ ಮಿಷನ್ 2026’ ರೂಪಿಸಲು ಪ್ರಸ್ತಾಪಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರು ಬಯೋಇನ್ನೋವೇಷನ್ ಸೆಂಟರ್ (ಬಿಬಿಸಿ) ವತಿಯಿಂದ ಪ್ರಸ್ತಾಪಿಸಲಾಗಿರುವ ಈ ಕಾರ್ಯಕ್ರಮಕ್ಕೆ ಅಂದಾಜು ₹50 ಕೋಟಿ ಹೂಡಿಕೆ ಬೇಕಾಗಿದೆ. ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳನ್ನು ಒಳಗೊಂಡಂತೆ ಮಿಷನ್ ಜಾರಿಗೊಳಿಸಲು ಯೋಜಿಸಲಾಗಿದ್ದು, ಕಲಬುರಗಿಯನ್ನು ಇದರ ಪ್ರಮುಖ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶವಿದೆ ಎಂದು ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವರೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಖರ್ಗೆ ಹೇಳಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶದ ಸಸ್ಯಸಂಪತ್ತು, ಸ್ಥಳೀಯ ಬೆಳೆಗಳು, ಸೂಕ್ಷ್ಮಜೀವಿಗಳು ಹಾಗೂ ಕೃಷಿ ಸಂಬಂಧಿತ ಜೈವಿಕ ಸಂಪನ್ಮೂಲಗಳನ್ನು ಗುರುತಿಸಿ, ಆಧುನಿಕ ಜೈವಿಕ ತಂತ್ರಜ್ಞಾನದ ನೆರವಿನಿಂದ ಅವುಗಳನ್ನು ಕೃಷಿ ತಂತ್ರಜ್ಞಾನಗಳು, ಮೌಲ್ಯವರ್ಧಿತ ಉತ್ಪನ್ನಗಳು ಮತ್ತು ಸ್ಥಳೀಯ ಉತ್ಪಾದನಾ ಉದ್ಯಮಗಳಾಗಿ ಪರಿವರ್ತಿಸುವುದು ಮಿಷನ್‌ನ ಆಶಯ. ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನದ ಬೆಂಬಲ ದೊರೆತರೆ ರೈತರಿಗೆ ಹೆಚ್ಚುವರಿ ಆದಾಯ, ಗ್ರಾಮೀಣ ಯುವಜನರಿಗೆ ಉದ್ಯೋಗ ಮತ್ತು ಮಹಿಳೆಯರಿಗೆ ಉದ್ಯಮಶೀಲತೆಯ ಅವಕಾಶಗಳನ್ನು ಕಲ್ಪಿಸಬಹುದು ಎಂದು ಖರ್ಗೆ ಹೇಳಿದ್ದಾರೆ. ಕಲ್ಯಾಣ ಕರ್ನಾಟಕವನ್ನು ಜೈವಿಕ ಆರ್ಥಿಕತೆಯ ಪ್ರಮುಖ ಕೇಂದ್ರವನ್ನಾಗಿ ಬೆಳೆಸುವುದು ಇದರ ದೂರದೃಷ್ಟಿ.
ಆರು ಪ್ರಮುಖ ಕಾರ್ಯಕ್ಷೇತ್ರಗಳು
- ಜೈವಿಕ ಬೆಳೆ ಸಂರಕ್ಷಣೆ: ತೊಗರಿಯಲ್ಲಿ ಕಂಡುಬರುವ ಬಾಡುವಿಕೆ (ವಿಲ್ಟ್) ರೋಗ, ಮೆಣಸಿನಕಾಯಿಯ ಆಂಥ್ರಾಕ್ನೋಸ್ ರೋಗ ಹಾಗೂ ಥ್ರಿಪ್ಸ್ ಕೀಟಗಳ ನಿಯಂತ್ರಣಕ್ಕೆ ಜೈವಿಕ ಆಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದು; ಇದರಿಂದ ರಾಸಾಯನಿಕಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ ಬೆಳೆಗಳ ಆರೋಗ್ಯ ಮತ್ತು ಇಳುವರಿ ಹೆಚ್ಚಿಸುವ ಗುರಿ.
- ತೊಗರಿ ಬೇಳೆಗೆ ಮೌಲ್ಯವರ್ಧನೆ: ತೊಗರಿಯನ್ನು ಕಚ್ಚಾ ಕೃಷಿ ಉತ್ಪನ್ನವಾಗಿ ಮಾರಾಟ ಮಾಡುವ ಬದಲು ಪ್ರೋಟೀನ್ ಬಾರ್‌ಗಳು, ಪ್ರೋಟೀನ್ ಸಾಂದ್ರಿತ ಉತ್ಪನ್ನಗಳು, ಅಧಿಕ ಪ್ರೋಟೀನ್ ಹಿಟ್ಟು, ಪೌಷ್ಟಿಕ ಪಾನೀಯಗಳು ಹಾಗೂ ಸಿದ್ಧ ಆಹಾರ ಉತ್ಪನ್ನಗಳಾಗಿ ಪರಿವರ್ತಿಸುವ ಉದ್ದೇಶ; ಸ್ಥಳೀಯ ಆಹಾರ ಸಂಸ್ಕರಣಾ ಉದ್ಯಮಗಳಿಗೆ ಉತ್ತೇಜನ.
- ಕಮಲಾಪುರ ಕೆಂಪು ಬಾಳೆ ಸಂರಕ್ಷಣೆ: ಕಲಬುರಗಿ ಜಿಲ್ಲೆಯ ವಿಶಿಷ್ಟ ತಳಿಯನ್ನು ಸಂರಕ್ಷಿಸಿ, ಅಂಗಾಂಶ ಕೃಷಿ (ಟಿಶ್ಯೂ ಕಲ್ಚರ್) ತಂತ್ರಜ್ಞಾನದ ಮೂಲಕ ಗುಣಮಟ್ಟದ ಸಸಿಗಳನ್ನು ಉತ್ಪಾದಿಸುವುದು; ತಿಂಗಳಿಗೆ 2ರಿಂದ 3 ಲಕ್ಷ ಸಸಿಗಳನ್ನು ಉತ್ಪಾದಿಸುವ ಸಾಮರ್ಥ್ಯ ಬೆಳೆಸುವ ಗುರಿ.
- ಸ್ಥಳೀಯ ಸೂಕ್ಷ್ಮಜೀವಿಗಳ ಸಂಶೋಧನೆ: ಪ್ರದೇಶದ ಸ್ಥಳೀಯ ಸೂಕ್ಷ್ಮಜೀವಿಗಳನ್ನು ಗುರುತಿಸಿ ಪ್ರಾದೇಶಿಕ ಮೈಕ್ರೋಬಿಯಲ್ ಬಯೋಬ್ಯಾಂಕ್ ಸ್ಥಾಪಿಸುವುದು; ಜೈವಿಕ ಗೊಬ್ಬರ, ಜೈವಿಕ ಕೀಟ ನಿಯಂತ್ರಣ ಮತ್ತು ಮಣ್ಣಿನ ಆರೋಗ್ಯ ಸುಧಾರಣೆಗೆ ಸಂಶೋಧನೆ.
- ಸಮಗ್ರ ಬಯೋ-ಇಕಾನಮಿ ಕೈಗಾರಿಕಾ ಪಾರ್ಕ್: ಕಲಬುರಗಿಯಲ್ಲಿ ಸಂಶೋಧನೆ, ಜೈವಿಕ ಉತ್ಪಾದನೆ, ಅಂಗಾಂಶ ಕೃಷಿ, ಆಹಾರ ಸಂಸ್ಕರಣೆ, ಗುಣಮಟ್ಟ ಪರೀಕ್ಷೆ ಹಾಗೂ ನವೋದ್ಯಮಗಳ ಇನ್‌ಕ್ಯುಬೇಷನ್ ಸೌಲಭ್ಯಗಳಿರುವ ಪಾರ್ಕ್ ಸ್ಥಾಪನೆ.
- ಗ್ರಾಮೀಣ ಉದ್ಯಮಶೀಲತೆಗೆ ಉತ್ತೇಜನ: ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ), ನವೋದ್ಯಮಗಳು ಹಾಗೂ ಗ್ರಾಮೀಣ ಉದ್ಯಮಿಗಳಿಗೆ ತರಬೇತಿ, ಉದ್ಯಮ ಆರಂಭಕ್ಕೆ ಮಾರ್ಗದರ್ಶನ, ಮಾರುಕಟ್ಟೆ ಸಂಪರ್ಕ, ಮೌಲ್ಯವರ್ಧನೆ ಮತ್ತು ರಫ್ತು ಸಿದ್ಧತೆಗೆ ನೆರವು.
ಮೂರು ವರ್ಷಗಳಲ್ಲಿ ಏಳು ಜಿಲ್ಲೆಗಳಲ್ಲಿ ಸುಮಾರು ₹50 ಕೋಟಿ ಹೂಡಿಕೆಯೊಂದಿಗೆ ಕಾರ್ಯಕ್ರಮ ಜಾರಿ, 40ಕ್ಕೂ ಹೆಚ್ಚು ಸ್ಥಳೀಯ ಜೈವಿಕ ಉತ್ಪನ್ನಗಳ ಸಂಭಾವ್ಯತೆ ಗುರುತಿಸುವುದು, 7,000ರಿಂದ 10,000 ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನ ಮಾಡುವುದು, ಸ್ಥಳೀಯ ಬೆಳೆಗಳ ಸಂರಕ್ಷಣೆ ಮತ್ತು ಉತ್ಪಾದಕತೆ ಹೆಚ್ಚಿಸುವುದು, ಮೌಲ್ಯವರ್ಧನೆ ಹಾಗೂ ಸ್ಥಳೀಯ ಉತ್ಪಾದನಾ ಘಟಕಗಳ ಸ್ಥಾಪನೆಗೆ ಉತ್ತೇಜನ ಮತ್ತು ರೈತರು, ಮಹಿಳೆಯರು ಹಾಗೂ ಯುವಜನರಿಗೆ ಹೊಸ ಉದ್ಯಮಶೀಲತೆಯ ಅವಕಾಶಗಳನ್ನು ಕಲ್ಪಿಸುವುದು ಮಿಷನ್‌ನ ಗುರಿಗಳು.
‘ಸ್ಥಳೀಯ ಜೈವಿಕ ವೈವಿಧ್ಯದಿಂದ ರೈತರ ಸಮೃದ್ಧಿಯವರೆಗೆ’ ಎಂಬ ಆಶಯದೊಂದಿಗೆ ರೂಪಿಸಲಾಗಿರುವ ಈ ಮಿಷನ್ ಜಾರಿಯಾದರೆ ಬೆಳೆ ಸಂರಕ್ಷಣೆ ಮತ್ತು ಮಣ್ಣಿನ ಆರೋಗ್ಯ ಸುಧಾರಣೆ, ತೊಗರಿ ಸೇರಿದಂತೆ ಸ್ಥಳೀಯ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಮೌಲ್ಯ, ಕಮಲಾಪುರ ಕೆಂಪು ಬಾಳೆ ತಳಿಯ ಸಂರಕ್ಷಣೆ ಮತ್ತು ವ್ಯಾಪಕ ಕೃಷಿಗೆ ಅವಕಾಶ ದೊರೆಯಲಿದೆ; ಜೈವಿಕ ತಂತ್ರಜ್ಞಾನ ಆಧಾರಿತ ಸಂಶೋಧನೆ ಮತ್ತು ನಾವೀನ್ಯತೆಯ ಮೂಲಕ ಸುಸ್ಥಿರ ಆರ್ಥಿಕ ಅಭಿವೃದ್ಧಿಗೆ ಬುನಾದಿ ಹಾಕಲು ಸಾಧ್ಯವಾಗಲಿದೆ ಎಂದು ಖರ್ಗೆ ಹೇಳಿದ್ದಾರೆ.
ಈ ಯೋಜನೆ ಸದ್ಯ ಪ್ರಸ್ತಾವನೆಯ ಹಂತದಲ್ಲಿದ್ದು, ವಿವರವಾದ ಯೋಜನಾ ವರದಿ (ಡಿಪಿಆರ್), ಕಾರ್ಯಸಾಧ್ಯತಾ ಅಧ್ಯಯನ ಹಾಗೂ ರಾಜ್ಯ ಸರ್ಕಾರದ ಅನುಮೋದನೆಗೆ ಒಳಪಟ್ಟಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಸಂಬಂಧಿತ:
