ಮಾಹಿತಿ ನೀಡಲು ವಿಳಂಬ: 35 ಮೇಲ್ಮನವಿದಾರರಿಗೆ ₹96,000 ಪರಿಹಾರಕ್ಕೆ ಕಲಬುರಗಿ ಪೀಠ ಆದೇಶ; 80 ಅಧಿಕಾರಿಗಳಿಗೆ ದಂಡ
ಕಲಬುರಗಿ: ಸಕಾಲಕ್ಕೆ ಮಾಹಿತಿ ಒದಗಿಸದೆ ಅರ್ಜಿದಾರರ ಸಮಯ ಮತ್ತು ಹಣ ವ್ಯರ್ಥವಾಗಲು ಕಾರಣವಾದ ಪ್ರಕರಣಗಳಲ್ಲಿ 35 ಮೇಲ್ಮನವಿದಾರರಿಗೆ ಒಟ್ಟು ₹96,000 ಪರಿಹಾರ ನೀಡುವಂತೆ ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠ ಆದೇಶಿಸಿದೆ ಎಂದು ರಾಜ್ಯ ಮಾಹಿತಿ ಆಯುಕ್ತ ಬಿ. ವೆಂಕಟಸಿಂಗ್ ತಿಳಿಸಿದ್ದಾರೆ.
ನಿಗದಿತ ಸಮಯದಲ್ಲಿ ಮಾಹಿತಿ ನೀಡದ ವಿವಿಧ ಇಲಾಖೆಗಳ 80 ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಒಟ್ಟು ₹7,78,000 ದಂಡ ವಿಧಿಸಲಾಗಿದೆ. ತಮ್ಮ ಅಧಿಕಾರಾವಧಿಯಲ್ಲಿ ಇದುವರೆಗೆ ₹7,37,000 ದಂಡ ವಸೂಲಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಅಧಿಕಾರ ಸ್ವೀಕರಿಸಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೆಂಕಟಸಿಂಗ್, 188 ದಿನಗಳ ವಿಚಾರಣೆಯಲ್ಲಿ 7,262 ಪ್ರಕರಣಗಳನ್ನು ಕೈಗೆತ್ತಿಕೊಂಡು, ಅವುಗಳಲ್ಲಿ 3,694 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಎಂದರು. ತಮ್ಮ ಅವಧಿಯಲ್ಲಿ 2025ರ ನವೆಂಬರ್ 25ರಿಂದ ಪ್ರಕರಣಗಳ ವಿಚಾರಣೆ ಆರಂಭಿಸಲಾಗಿದೆ ಎಂದು ವಿವರಿಸಿದರು.
ಸಕಾಲಕ್ಕೆ ಮಾಹಿತಿ ದೊರೆಯದ ಕಾರಣ ಮೇಲ್ಮನವಿದಾರರು ಸಮಯ ಮತ್ತು ಹಣ ಕಳೆದುಕೊಂಡಿರುವುದನ್ನು ಪರಿಗಣಿಸಿ ಪರಿಹಾರದ ಆದೇಶಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು. ಇಂತಹ 35 ಮೇಲ್ಮನವಿದಾರರಿಗೆ ಒಟ್ಟು ₹96,000 ಪರಿಹಾರ ನೀಡುವಂತೆ ಆಯೋಗ ನಿರ್ದೇಶಿಸಿದೆ ಎಂದರು.
ಪ್ರಮುಖ ಪ್ರಕರಣಗಳ ಕುರಿತು ವಿವರಿಸಿದ ಆಯುಕ್ತರು, ಸಿರವಾರ ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಕೋರಿ ಮೇಲ್ಮನವಿದಾರರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಮಾಹಿತಿ ನೀಡಲು ವಿಳಂಬ ಮಾಡಿದ ಮೂವರು ಪೊಲೀಸ್ ಸಬ್ಇನ್ಸ್ಪೆಕ್ಟರ್ಗಳಿಗೆ ತಲಾ ₹25,000 ದಂಡ ವಿಧಿಸಿ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.
ಸಕಾಲಕ್ಕೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಈ ಮೂವರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಆಯೋಗ ಶಿಫಾರಸು ಮಾಡಿತ್ತು. ಅದರಂತೆ ಪೊಲೀಸ್ ನಿಯಮಗಳ ರೂಲ್ 7ರ ಅಡಿಯಲ್ಲಿ ಮೂವರಿಗೂ ನೋಟಿಸ್ ಜಾರಿ ಮಾಡಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿಗಳು ಆಯೋಗಕ್ಕೆ ಮಾಹಿತಿ ನೀಡಿದ್ದಾರೆ ಎಂದು ವೆಂಕಟಸಿಂಗ್ ಹೇಳಿದರು.
ಕಲಬುರಗಿ ಮತ್ತು ಯಾದಗಿರಿಗೆ ಸಂಬಂಧಿಸಿದ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಕುರಿತು ಸಲ್ಲಿಕೆಯಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿ, ಆ ಬ್ಯಾಂಕನ್ನು ಸಾರ್ವಜನಿಕ ಪ್ರಾಧಿಕಾರವೆಂದು ಆದೇಶಿಸಿರುವುದು ಮತ್ತೊಂದು ಪ್ರಮುಖ ನಿರ್ಣಯವಾಗಿದೆ ಎಂದು ಅವರು ತಿಳಿಸಿದರು.
2010ರಿಂದ 2022ರವರೆಗಿನ ಅವಧಿಗೆ ಸೇರಿದ, ವಿಲೇವಾರಿಗೆ ಬಾಕಿ ಉಳಿದಿದ್ದ 500ಕ್ಕೂ ಹೆಚ್ಚು ಹಳೆಯ ಪ್ರಕರಣಗಳನ್ನು ಕೈಗೆತ್ತಿಕೊಂಡು ಇತ್ಯರ್ಥಪಡಿಸಲಾಗಿದೆ ಎಂದೂ ಅವರು ವಿವರಿಸಿದರು.
ಪ್ರಕರಣಗಳ ವಿಲೇವಾರಿ ನಡುವೆಯೂ ಕಲಬುರಗಿ ಪೀಠದಲ್ಲಿ ಗಣನೀಯ ಸಂಖ್ಯೆಯ ಪ್ರಕರಣಗಳು ಬಾಕಿ ಇವೆ. ಪೀಠಕ್ಕೆ ಒಟ್ಟಾರೆ 20,398 ದ್ವಿತೀಯ ಮೇಲ್ಮನವಿಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ 13,468 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಪ್ರಸ್ತುತ 6,930 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ ಎಂದು ಆಯುಕ್ತರು ತಿಳಿಸಿದರು.
ಬಾಕಿ ಪ್ರಕರಣಗಳಲ್ಲಿ ರಾಯಚೂರು ಜಿಲ್ಲೆಯಲ್ಲಿ ಅತಿ ಹೆಚ್ಚು 2,059 ಪ್ರಕರಣಗಳಿವೆ. ನಂತರ ಕಲಬುರಗಿಯಲ್ಲಿ 1,483 ಹಾಗೂ ಬಳ್ಳಾರಿಯಲ್ಲಿ 885 ಪ್ರಕರಣಗಳು ಬಾಕಿ ಇವೆ. ಉಳಿದಂತೆ ಯಾದಗಿರಿಯಲ್ಲಿ 665, ಕೊಪ್ಪಳದಲ್ಲಿ 649, ವಿಜಯನಗರದಲ್ಲಿ 629 ಹಾಗೂ ಬೀದರ್ನಲ್ಲಿ 560 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ.
ಈ ಹಿಂದೆ ದ್ವಿತೀಯ ಮೇಲ್ಮನವಿ ಅರ್ಜಿಗಳನ್ನು ಬೆಂಗಳೂರಿನಲ್ಲಿ ಸಲ್ಲಿಸಬೇಕಾಗಿತ್ತು. ಆದರೆ ಈ ವರ್ಷದ ಫೆಬ್ರವರಿಯಿಂದ ಕಲಬುರಗಿ ಪೀಠದಲ್ಲಿಯೇ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ವೆಂಕಟಸಿಂಗ್ ತಿಳಿಸಿದರು. ಈ ವ್ಯವಸ್ಥೆಯಡಿ ಇದುವರೆಗೆ 2,432 ದ್ವಿತೀಯ ಮೇಲ್ಮನವಿ ಅರ್ಜಿಗಳು ಸಲ್ಲಿಕೆಯಾಗಿವೆ ಎಂದರು.
ಅಧಿಕಾರ ಸ್ವೀಕರಿಸಿದ ಬಳಿಕ ಗ್ರಾಮ ಪಂಚಾಯಿತಿಗಳಿಗೆ ಸಂಬಂಧಿಸಿದ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿರುವುದನ್ನು ಗಮನಿಸಿದ್ದು, ಇಂತಹ ಪ್ರಕರಣಗಳಲ್ಲಿ ಅರ್ಜಿದಾರರಿಗೆ ಮಾಹಿತಿ ದೊರಕಿಸಿಕೊಡುವುದಕ್ಕೆ ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು.
ಮಾಹಿತಿ ಒದಗಿಸುವ ಕುರಿತು ಇರುವ ಗೊಂದಲಗಳನ್ನು ನಿವಾರಿಸಲು ಪೀಠದ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರದ ಅಧಿಕಾರಿಗಳಿಗೆ ಕಾರ್ಯಾಗಾರಗಳನ್ನು ನಡೆಸಲಾಗಿದೆ. ಇದರಿಂದ ಮಾಹಿತಿ ಒದಗಿಸಲು ಅನುಕೂಲವಾಗಿದೆ ಎಂದು ವೆಂಕಟಸಿಂಗ್ ತಿಳಿಸಿದರು.
ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠವು 2024ರಿಂದ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಲೋಕೋಪಯೋಗಿ ಇಲಾಖೆಗೆ ಸೇರಿದ ಕಟ್ಟಡದಲ್ಲಿದೆ.
ಪೀಠಕ್ಕೆ ಶಾಶ್ವತ ಕಟ್ಟಡ ನಿರ್ಮಿಸಲು ಸೂಕ್ತ ನಿವೇಶನ ಒದಗಿಸುವಂತೆ ಮುಖ್ಯಮಂತ್ರಿ, ಜಿಲ್ಲಾ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಈ ಪ್ರಕ್ರಿಯೆ ಮುಂದುವರಿದಿದೆ ಎಂದು ಆಯುಕ್ತರು ತಿಳಿಸಿದರು.
ಪೀಠದಲ್ಲಿ ಅಗತ್ಯ ಸಿಬ್ಬಂದಿಯ ಕೊರತೆಯೂ ಇದೆ. ಹೆಚ್ಚುವರಿ ಸಿಬ್ಬಂದಿ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸಮರ್ಪಕ ಸಿಬ್ಬಂದಿ ದೊರೆತರೆ ಹೆಚ್ಚಿನ ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡು ವಿಲೇವಾರಿ ಮಾಡಲು ಅನುಕೂಲವಾಗಲಿದೆ ಎಂದು ಅವರು ವಿವರಿಸಿದರು.
ಕೆಲವು ಪ್ರಕರಣಗಳಲ್ಲಿ ಆಯೋಗಕ್ಕೆ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಹೆಚ್ಚಿನ ವಿಚಾರಣೆ ನಡೆಸುವಂತೆ ಸಕ್ಷಮ ಪ್ರಾಧಿಕಾರಗಳಿಗೆ ಸೂಚಿಸಲಾಗಿದೆ. ಅವುಗಳಿಂದ ವಿಚಾರಣಾ ವರದಿಗಳು ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವೆಂಕಟಸಿಂಗ್ ಹೇಳಿದರು.
ಇನ್ನೂ ಎರಡು ಮಹತ್ವದ ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದ್ದು, ಆದೇಶಗಳು ಹೊರಬಂದ ಬಳಿಕ ಅವುಗಳ ವಿವರಗಳನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು ಎಂದು ಅವರು ಹೇಳಿದರು.
