Home ರಾಯಚೂರು ಕಲ್ಯಾಣ ಕರ್ನಾಟಕ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮ- ವಿಜಯೇಂದ್ರ

ಕಲ್ಯಾಣ ಕರ್ನಾಟಕ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮ- ವಿಜಯೇಂದ್ರ

9
0

ಮಾನ್ವಿ (ರಾಯಚೂರು): ಭಗವಂತನ ಕೃಪೆಯಿಂದ, ಪರಮಪೂಜ್ಯರ ಆಶೀರ್ವಾದದಿಂದ ಮುಂದೆ ಭಗವಂತ ಶಕ್ತಿ ಕೊಟ್ಟ ದಿನಗಳಲ್ಲಿ ಈ ಭಾಗದ ನೀರಾವರಿ ಯೋಜನೆಗಳಿಗೆ ಒತ್ತು ಕೊಡುತ್ತೇನೆ. ಯುವಕರಿಗೆ ಉದ್ಯೋಗ ಕೊಡಲು ಕೈಗಾರಿಕೆಗಳನ್ನು ಆರಂಭಿಸಲು ಶ್ರಮಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ನುಡಿದರು.

ಕೆಎಸ್ ಎನ್ ಸಾಮಾಜಿಕ ಸೇವಾ ಸಮಿತಿ ಮಾನ್ವಿ ಸಿರಿವಾರ ವತಿಯಿಂದ ಮಾಜಿ ಸಚಿವ ಶಿವನಗೌಡ ನಾಯಕ್ ಅವರ ಸಾರಥ್ಯದಲ್ಲಿ ಅದ್ದೂರಿಯಾಗಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಾಮೂಹಿಕ ವಿವಾಹಗಳಿಂದ ಮಕ್ಕಳು, ಹೆತ್ತವರ ಕನಸು, ಹಂಬಲ ಸಾಕಾರಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.

ಇಲ್ಲಿನ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಇದೆ. ಶುದ್ಧ ಕುಡಿಯುವ ನೀರಿಗಾಗಿ ತಾಯಂದಿರು ಕೊಡಪಾನದೊಂದಿಗೆ ಮೂರ್ನಾಲ್ಕು ಕಿಮೀ ದೂರಕ್ಕೆ ಹೋಗಬೇಕಾದ ದಾರುಣ ಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಭಗವಂತ ಶಕ್ತಿ ಕೊಟ್ಟರೆ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನಾನು, ಶಿವನಗೌಡ ನಾಯಕ್, ಬೈರತಿ ಬಸವರಾಜು, ಜನಾರ್ದನ ರೆಡ್ಡಿ, ಡಾ.ಶಿವರಾಜ ಪಾಟೀಲ್ ಸೇರಿ ಎಲ್ಲರೂ ಒಟ್ಟಾಗಿ ಒಂದಾಗಿ ಈ ಭಾಗದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ತಿಳಿಸಿದರು. ಕಲ್ಯಾಣ ಕರ್ನಾಟಕ ಭಾಗದ ಮಹಾ ಜನತೆ ಹೂಮಳೆಗರೆದು ನೀಡಿದ ಸ್ವಾಗತಕ್ಕೆ ಹೃದಯ ತುಂಬಿ ಬಂತು ಎಂದ ಅವರು ಇಲ್ಲಿನ ಜನರ ಹೃದಯ ಶ್ರೀಮಂತಿಕೆಯನ್ನು ಕೊಂಡಾಡಿದರು.

ಮಾನ್ಯ ಶಿವನಗೌಡ ನಾಯಕರು ತಮ್ಮ ಪರಂಪರೆಯ ರಾಜ ಮನೆತನದ ಮದುವೆಗಿಂತಲೂ ಕಡಿಮೆ ಇಲ್ಲದ ರೀತಿಯಲ್ಲಿ ಇಂದು ಅದ್ದೂರಿಯಾಗಿ ಮದುವೆ ನೆರವೇರಿಸಿದ್ದಾರೆ. ಸಮಾಜದ ಎಲ್ಲ ಸ್ತರದ ಬಂಧುಗಳನ್ನು ಸಂಪರ್ಕಿಸಿ ಹೆಣ್ಣು ಮಕ್ಕಳಿಗೆ ಮಾಂಗಲ್ಯ ಧಾರಣೆಯ ಕಲ್ಯಾಣ ಕಾರ್ಯ ನೆರವೇರಿಸುತ್ತಿದ್ದಾರೆ. ಇಂದು ವಿವಾಹವಾಗುತ್ತಿರುವ ಗಂಡು ಮಕ್ಕಳ ಜೀವನದಲ್ಲಿ ಒಂದು ಹೊಸ ಬೆಳಕನ್ನು ಮೂಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳು, ಪರಮಪೂಜ್ಯ ವೀರಭದ್ರ ಶಿವಾಚಾರ್ಯ ಶ್ರೀಗಳು, ಪೂಜ್ಯ ಹಜರತ್ ಸೈಯದ್ ನುಸರತ್ ಮೀಯಾ ಚಿಸ್ತಿ ಗುರುಗಳು, ಮಾಜಿ ಸಚಿವ ಹಾಗೂ ರಾಜ್ಯ ಉಪಾಧ್ಯಕ್ಷ ಬೈರತಿ ಬಸವರಾಜು, ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ, ಮಾಜಿ ಸಂಸದ ಬಿ.ವಿ.ನಾಯಕ್, ರಾಜ್ಯ ಕಾರ್ಯದರ್ಶಿ ಹಾಗೂ ಶಾಸಕ ಡಾ ಶೈಲೇಂದ್ರ ಬೆಲ್ದಾಳೆ, ರಾಯಚೂರು ಜಿಲ್ಲಾಧ್ಯಕ್ಷ ಹಾಗೂ ಶಾಸಕ ಡಾ.ಶಿವರಾಜ್ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ್, ಮಾಜಿ ಶಾಸಕ ಬಸವರಾಜ್ ದಡೇಸುಗೂರು ಸೇರಿದಂತೆ ವಿವಿಧ ಮಠಗಳ ಪರಮಪೂಜ್ಯ ಶ್ರೀಗಳು, ಸಮಾಜದ ಪ್ರಮುಖರು ಹಾಗೂ ಬಂಧುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here