ಬೆಂಗಳೂರು:
ನಗರದ ಹೊಸಗುಡ್ಡದಹಳ್ಳಿಯ ರೇಖಾ ಕೆಮಿಕಲ್ ಫ್ಯಾಕ್ಟರಿಯ ಗೋಡೌನ್ನಲ್ಲಿ ಸಂಭವಿಸಿದ ಅಗ್ನಿ ಅವಘಡ ಮತ್ತೊಮ್ಮೆ ಮರುಕಳಿಸದಂತೆ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ.
ವಸತಿ ಪ್ರದೇಶದಲ್ಲಿರುವ ಗೋದಾಮುಗಳನ್ನು ಕೂಡಲೇ ತೆರವುಗೊಳಿಸಲು ಇಲಾಖೆ ನಿರ್ಧರಿಸಿದ್ದು ನಗರದ ಬೀಟ್ ಪೊಲೀಸರಿಗೆ ಮತ್ತೊಂದು ಜವಾಬ್ದಾರಿ ವಹಿಸಿ, ತಮ್ಮ ಬೀಟಿನಲ್ಲಿ ಕೆಮಿಕಲ್ ಗೋಡೌನ್ ಆಗಿ ರೂಪಾಂತರ ಗೊಂಡಿರುವ ಕಟ್ಟಡಗಳನ್ನು ಸಮಗ್ರವಾಗಿ ಪರಿಶೀಲಿಸಿ ಇಲಾಖೆ ವರದಿ ಕೊಡುವಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಆದೇಶಿಸಿದ್ದಾರೆ.
ಈ ಕುರಿತು ಎಲ್ಲಾ ಪೊಲೀಸ್ ಠಾಣೆಗಳಿಗೆ ಸುತ್ತೋಲೆ ಕಳುಹಿಸಿ ಕೆಮಿಕಲ್ ಗೋದಾಮು ಬಗ್ಗೆ ಪರಿಶೀಲಿಸುವಂತೆ ಸೂಚಿಸಲಾಗಿದೆ.
ಪೊಲೀಸ್ ಪೇದೆಗಳು ತಮ್ಮ ಬೀಟ್ನಲ್ಲಿರುವ ಕೆಮಿಕಲ್ ಸ್ಟೋರೇಜ್ ಮಾಡಿರುವ ಫ್ಯಾಕ್ಟರಿಗಳ ಬಗ್ಗೆ ಇನ್ಸ್ ಪೆಕ್ಟರ್ ಗಮನಕ್ಕೆ ತರಲು ಆದೇಶಿಸಿದ್ದಾರೆ. ನಗರದ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ಪಟ್ಟಿ ಮಾಡಿ ಬಳಿಕ ವಸತಿ ಪ್ರದೇಶದಲ್ಲಿರುವ ಗೋದಾಮು ತೆರವುಗೊಳಿಸಲು ಇಲಾಖೆ ನಿರ್ಧರಿಸಿದೆ.
ನಗರದಲ್ಲಿ ವಸತಿ ಪ್ರದೇಶದಲ್ಲಿ ಕೆಮಿಕಲ್ ಗೋಡೌನ್ಗಳಿಗೆ ಅನುಮತಿಯಿಲ್ಲ. ಆದ್ದರಿಂದ ತಮ್ಮ ಸುತ್ತಮುತ್ತ ಅನುಮಾನಾಸ್ಪದ ಗೋದಾಮುಗಳಿದ್ದಲ್ಲಿ ಮಾಹಿತಿ ನೀಡಿ ಎಂದೂ ಆಯುಕ್ತರು ಸೂಚಿಸಿದ್ದಾರೆ.